ಸಾರಾಂಶ
ಕನ್ನಡ ಪ್ರಭ ವಾರ್ತೆ,ಕೊಟ್ಟಿಗೆಹಾರ
ಕರ್ನಾಟಕದಲ್ಲಿ ರಸ್ತೆಗಳು ಚೆನ್ನಾಗಿವೆಯೋ ಇಲ್ಲವೋ, ಸರ್ಕಾರ ಬಡವರಿಗೆ ಒಳ್ಳೆಯ ಅಕ್ಕಿ ನೀಡುತ್ತಿದ್ಯೋ ಇಲ್ವೋ ಎಂದು ಚೆಕ್ ಮಾಡಲು ದೇವಲೋಕದ ಯಮರಾಜ ಹಾಗೂ ಚಿತ್ರಗುಪ್ತ ಕಾಫಿನಾಡಿಗೆ ಭೇಟಿ ನೀಡಿದ್ದಾರೆ.ಈ ರೀತಿ ಕಾಮಿಡಿ ಸನ್ನಿವೇಶದ ಮೂಲಕ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ವಿನೂತನ ಪ್ರತಿಭಟನೆ ಮೂಡಿಗೆರೆ ತಾಲೂಕಿನ ನಿಡುವಾಳೆ ಗ್ರಾಮದಲ್ಲಿ ನಡೆದಿದೆ.
ಮೂಡಿಗೆರೆ ತಾಲೂಕಿನ ರಸ್ತೆಗಳ ಪರಿಸ್ಥಿತಿ ಕಂಡು ನಿಡುವಾಳೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನವೀನ್ ಹಾವಳಿ ಹಾಗೂ ಖಾಸಗಿ ವಾಹಿನಿ ಕಾಮಿಡಿ ಕಿಲಾಡಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಮೇಶ್ ಯಾದವ್ ಇಬ್ಬರೂ ಯಮರಾಜ ಹಾಗೂ ಚಿತ್ರಗುಪ್ತನ ವೇಷ ಧರಿಸಿ ನಿಡುವಾಳೆ ಸುತ್ತಮುತ್ತ ರಸ್ತೆಯಲ್ಲಿ ಸಂಚರಿಸಿ ರಸ್ತೆಯಲ್ಲಿನ ಗುಂಡಿಗಳನ್ನ ಅಳತೆ ಮಾಡಿ ದಾಖಲು ಮಾಡಿಕೊಂಡಿದ್ದಾರೆ. ರಸ್ತೆಯ ಗುಂಡಿಗಳನ್ನ ಕಂಡ ಯಮರಾಜ ಚಿತ್ರಗುಪ್ತನ ಬಳಿ ಎಲ್ಲಾ ಪಾಪ-ಪುಣ್ಯಗಳ ಲೆಕ್ಕ ಬರೆಸಿದ್ದಾರೆ. ಜೊತೆಗೆ ಹಳ್ಳಿಗಳ ಸೊಸೈಟಿಗೆ ತೆರಳಿದ್ದ ಯಮರಾಜ-ಚಿತ್ರಗುಪ್ತರು ಸೊಸೈಟಿಯಲ್ಲಿ ಅಕ್ಕಿಯನ್ನೂ ಚೆಕ್ ಮಾಡಿದ್ದಾರೆ. ಸೊಸೈಟಿಯಲ್ಲಿ ಅಕ್ಕಿ ಚೀಲದ ಆಳಕ್ಕೆ ಕೈಹಾಕಿ ಅಕ್ಕಿ ಕ್ವಾಲಿಟಿ ಬಗ್ಗೆಯೂ ತಪಾಸಣೆ ನಡೆಸಿದ್ದಾರೆ.ಜೊತೆಗೆ ವಾಹನಗಳನ್ನ ಚಾಲನೆ ಮಾಡುವಾಗ ಮದ್ಯಸೇವಿಸಿ ಚಾಲನೆ ಮಾಡುವುದರಿಂದ ಸಾಕಷ್ಟು ಅಪಘಾತಗಳು ಸಂಭವಿಸುತ್ತಿವೆ. ಯುವ ಜನತೆ ಪ್ರಾಣ ಕೂಡ ಕಳೆದುಕೊಳ್ಳುತ್ತಿರುವುದರಿಂದ ರಸ್ತೆಯಲ್ಲಿ ನಿಂತ ಯಮ-ಚಿತ್ರಗುಪ್ತ ಯುವ ಜನತೆಯಲ್ಲಿ ಮದ್ಯ ಸೇವಿಸಿ ವಾಹನ ಚಾಲನೆ ಮಾಡಿ ಯಾರೂ ನನ್ನ ಬಳಿ ಬರಬೇಡಿ ಎಂದು ಜಾಗೃತಿ ಮೂಡಿಸಿದ್ದಾರೆ. ಆಗ ನಿಡುವಾಳೆ ಗ್ರಾಮದ ಜನ ರಸ್ತೆ ತುಂಬಾ ಹಾಳಾಗಿದೆ. ನಾವು ಮದ್ಯಸೇವಿಸದೆ ವಾಹನ ಚಾಲನೆ ಮಾಡಿದರೂ ಗುಂಡಿಗಳಿಗೆ ಬಿದ್ದು ಜನ ಸಾಯ್ತಿದ್ದಾರೆ. ಕೆಲವರು ಕೈಕಾಲು ಮುರಿದುಕೊಳ್ಳುತ್ತಿದ್ದಾರೆ ಎಂದು ಯಮರಾಜನಿಗೆ ತಮ್ಮೂರಿನ ರಸ್ತೆ ಬಗ್ಗೆ ಹಾಸ್ಯ ಚಟಾಕಿ ಹಾರಿಸಿದ್ದಾರೆ. 29 ಕೆಸಿಕೆಎಂ 5ಮೂಡಿಗೆರೆ ತಾಲೂಕಿನ ನಿಡುವಾಳೆ ಗ್ರಾಮದಲ್ಲಿ ಗುಂಡಿ ಬಿದ್ದು ಹಾಳಾಗಿರುವ ರಸ್ತೆಯನ್ನು ತೋರಿಸುತ್ತಿರುವ ಯಮರಾಜ ಹಾಗೂ ಚಿತ್ರಗುಪ್ತ ಪಾತ್ರಧಾರಿಗಳು.