ಸಾರಾಂಶ
ಉಡುಪಿ ವಿಧಾನಸಭಾ ಕ್ಷೇತ್ರದ 19 ಗ್ರಾಮ ಪಂಚಾಯಿತಿಗಳಲ್ಲಿ ಕೃತಕ ನೆರೆ ತಡೆಗಟ್ಟುವ ನಿಟ್ಟಿನಲ್ಲಿ ತೋಡುಗಳ ನಿರ್ವಹಣೆ ಸಹಿತ ತುರ್ತು ಕಾಮಗಾರಿಗಳಿಗೆ ತಲಾ 10 ಲಕ್ಷ ರು. ಅನುದಾನ ನೀಡುವಂತೆ ಶಾಸಕ ಯಶ್ಪಾಲ್ ಸುವರ್ಣ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿ ವಿಧಾನಸಭಾ ಕ್ಷೇತ್ರದ 19 ಗ್ರಾಮ ಪಂಚಾಯಿತಿಗಳಲ್ಲಿ ಕೃತಕ ನೆರೆ ತಡೆಗಟ್ಟುವ ನಿಟ್ಟಿನಲ್ಲಿ ತೋಡುಗಳ ನಿರ್ವಹಣೆ ಸಹಿತ ತುರ್ತು ಕಾಮಗಾರಿಗಳಿಗೆ ತಲಾ 10 ಲಕ್ಷ ರು. ಅನುದಾನ ನೀಡುವಂತೆ ಶಾಸಕ ಯಶ್ಪಾಲ್ ಸುವರ್ಣ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.ಉಡುಪಿ ವಿಧಾನಸಭಾ ಕ್ಷೇತ್ರದ ಉಡುಪಿ ತಾಲೂಕಿನ 6 ಗ್ರಾಪಂ ಮತ್ತು ಬ್ರಹ್ಮಾವರ ತಾಲೂಕಿನ 13 ಗ್ರಾಪಂ ಸೇರಿ ಒಟ್ಟು 19 ಗ್ರಾಪಂಗಳ ಜನವಸತಿ ಪ್ರದೇಶಗಳಲ್ಲಿ ಸ್ಥಳೀಯಾಡಳಿತ ಅನುದಾನದ ಕೊರತೆಯಿಂದ ರಸ್ತೆ ಬದಿಯಲ್ಲಿನ ತೋಡುಗಳ ಹೂಳೆತ್ತದೆ, ಸಮರ್ಪಕ ನಿರ್ವಹಣೆಯಿಲ್ಲದೆ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಕೃತಕ ನೆರೆ ಉಂಟಾಗಿದೆ.ತೋಡು, ಚರಂಡಿಗಳಲ್ಲಿ ಹೂಳು ತುಂಬಿದ್ದು, ಇದರಿಂದ ಕೃಷಿ ಭೂಮಿಗಳಿಗೆ ನೀರು ನುಗ್ಗಿ ರೈತರಿಗೆ ತೊಂದರೆಯಾಗಿದೆ. ರಸ್ತೆಗಳ ಮೇಲೆ ನೀರು ಹರಿಯುತ್ತಿದ್ದು, ರಸ್ತೆಗಳು ಕಿತ್ತುಹೋಗಿ, ವಾಹನ ಸಂಚಾರಕ್ಕೆ ತಡೆ ಉಂಟಾಗಿರುತ್ತದೆ. ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿ ಜನ ಸಾಮಾನ್ಯರ ಪರಿಸ್ಥಿತಿಯು ಅಸ್ತವ್ಯಸ್ತವಾಗಿರುತ್ತದೆ.ಈ ಬಗ್ಗೆ ಗ್ರಾಪಂ ವ್ಯಾಪ್ತಿಯ ಸಾರ್ವಜನಿಕರಿಂದ ನಿರಂತರವಾಗಿ ಅಹವಾಲು ಸಲ್ಲಿಸುಸುತ್ತಿದ್ದು, ಗ್ರಾಮೀಣ ಭಾಗದ ರಸ್ತೆ ಬದಿಯಲ್ಲಿನ ಮೋರಿ, ಚರಂಡಿ ಮತ್ತು ತೋಡುಗಳ ಹೂಳೆತ್ತಿ, ಮಳೆ ನೀರನ್ನು ಸರಾಗವಾಗಿ ಹರಿಯುವಂತೆ ಕ್ರಮ ವಹಿಸುವ ಮತ್ತು ಸಾರ್ವಜನಿಕರ ಆಸ್ತಿಪಾಸ್ತಿಗಳ ರಕ್ಷಣೆ ಮಾಡುವ ತುರ್ತು ಅಗತ್ಯವಿದೆ.ಉಡುಪಿ ವಿಧಾನಸಭಾ ಕ್ಷೇತ್ರದ ಕೃತಕ ನೆರೆ ತಡೆಯುವ ಉದ್ದೇಶಕ್ಕೆ, ತುರ್ತು ಕಾಮಗಾರಿಗಳಿಗೆ 19 ಗ್ರಾಪಂಗಳಿಗೂ ತಲಾ 10 ಲಕ್ಷ ರು. ಅನುದಾನವನ್ನು ಶೀಘ್ರವಾಗಿ ಬಿಡುಗಡೆಗೊಳಿಸುವಂತೆ ಶಾಸಕ ಯಶ್ಪಾಲ್ ಸುವರ್ಣ ಸಚಿವರಿಗೆ ಮನವಿ ಮಾಡಿದ್ದಾರೆ.