ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿಮುಂಬರುವ ಉಡುಪಿಯ ಶಿರೂರು ಮಠದ ಪರ್ಯಾಯ ಮಹೋತ್ಸವದ ಪೂರ್ವಭಾವಿಯಾಗಿ ಉಡುಪಿ ನಗರದ ಮೂಲ ಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ 50 ಕೋಟಿ ರು. ವಿಶೇಷ ಅನುದಾನ ಮಂಜೂರು ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಮನವಿ ಮಾಡಿದ್ದಾರೆ.ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ ಉಡುಪಿ ಶ್ರೀ ಕೃಷ್ಣ ಮಠದ ಪರ್ಯಾಯ ಮಹೋತ್ಸವವು ನಾಡಹಬ್ಬದ ಮಾದರಿಯಲ್ಲಿ ಅತ್ಯಂತ ವೈಭವಪೂರ್ಣವಾಗಿ ನಡೆಯುತ್ತಿದ್ದು, ಈ ಉತ್ಸವಕ್ಕೆ ದೇಶವಿದೇಶದ ಲಕ್ಷಾಂತರ ಭಕ್ತರು ಉಡುಪಿಗೆ ಭೇಟಿ ನೀಡುತ್ತಾರೆ.2026ನೇ ಜ.17-18ರಂದು ಶ್ರೀ ಶಿರೂರು ವಾಮನ ತೀರ್ಥ ಸಂಸ್ಥಾನದ ಪೀಠಾಧೀಶರಾದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಪರ್ಯಾಯ ಪೀಠಾರೋಹಣಗೈಯ್ಯಲಿದ್ದಾರೆ.ಉಡುಪಿ ಜಿಲ್ಲೆಗೆ ಪ್ರವಾಸಿಗರನ್ನು ಆಕರ್ಷಿಸುವ ಟೆಂಪಲ್ ಟೂರಿಸಂ ಭಾಗವಾಗಿರುವ ಪರ್ಯಾಯ ಮಹೋತ್ಸವವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ರಸ್ತೆಗಳ ದುರಸ್ತಿ, ಮರು ಡಾಂಬರೀಕರಣ ಹಾಗೂ ಸ್ವಚ್ಛತೆಗಾಗಿ ಸೂಕ್ತ ಅನುದಾನದ ಅಗತ್ಯವಿರುತ್ತದೆ. ನೈರ್ಮಲ್ಯ, ದೀಪಾಲಂಕಾರ, ಮೂಲಸೌಕರ್ಯ ಅಗತ್ಯ ಕಾಮಗಾರಿಗಳಿಗೆ 50 ಕೋಟಿ ರು. ವಿಶೇಷ ಅನುದಾನವನ್ನು ಶ್ರೀ ಕೃಷ್ಣನ ಪರ್ಯಾಯ ಮಹೋತ್ಸವಕ್ಕಾಗಿ ಮಂಜೂರು ಮಾಡುವಂತೆ ಮುಖ್ಯಮಂತ್ರಿಗಳಿಗೆ ಶಾಸಕ ಯಶ್ಪಾಲ್ ಸುವರ್ಣ ಮನವಿ ನೀಡಿದ್ದಾರೆ.