ಉಡುಪಿ: ಸಾಮಾಜಿತಕ ಭದ್ರತಾ ಯೋಜನೆಗಳ ಮಾಸಾಶನ (ಪಿಂಚಣಿ) ಯೋಜನೆಗಳಿಗೆ ಸಂಬಂಧಿಸಿದ ಆದಾಯದ ಮಿತಿಯನ್ನು ಹೆಚ್ಚಿಸುವಂತೆ ಉಡುಪಿ ಶಾಸಕ ಯಶ್‌ಪಾಲ್‌ ಸುವರ್ಣ ವಿಧಾನಸಭಾ ಅಧಿವೇಶನದಲ್ಲಿ ಸರ್ಕಾರ ಗಮನ ಸೆಳೆದರು. ಈ ಮಾಸಾಶನ ಸೌಲಭ್ಯ ಪಡೆಯಲು ಕುಟುಂಬದ ವಾರ್ಷಿಕ ಆದಾಯ ಮಿತಿ 32,000 ರು. ಆಗಿರುವುದರಿಂದ ಅನೇಕ ಅರ್ಹ ಬಡ ಕುಟುಂಬಗಳು ಯೋಜನೆಯ ಲಾಭದಿಂದ ವಂಚಿತವಾಗುತ್ತಿವೆ. ಪ್ರಸ್ತುತ ಮಾಸಾಶನ ಪಡೆಯುತ್ತಿರುವ ಉಡುಪಿ ಜಿಲ್ಲೆಯ 50,000 ಜನರು ಮತ್ತು ರಾಜ್ಯದ 24 ಲಕ್ಷಕ್ಕೂ ಹೆಚ್ಚು ಜನ ಮುಂದೆ ಮಾಸಾಶನ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ, ಆದ್ದರಿಂದ ಈ ಮಾಸಾಶನದ ಆದಾಯ ಮಿತಿಯನ್ನು 32,000 ರು.ನಿಂದ 1,20,000 ರು.ಗೆ ಹೆಚ್ಚಿಸಲು ಸರ್ಕಾರವನ್ನು ಒತ್ತಾಯಿಸಿದರು.

ಸರ್ಕಾರ ನಿಗದಿಪಡಿಸಿರುವ ಕನಿಷ್ಠ ದಿನ ವೇತನವೇ 370 ರು. ಇದೆ. ಆದ್ದರಿಂದ 32 ಸಾವಿರ ಆದಾಯ ಮಿತಿ ತೀರ ಅವೈಜ್ಞಾನಿಕವಾಗಿದೆ. ಇದನ್ನು ಏರಿಕೆ ಮಾಡದಿದ್ದರೆ ಬಡ ವಿಧವೆಯರು, ಹಿರಿಯ ನಾಗರಿಕರು ಸರ್ಕಾರದ ಸಾಮಾಜಿಕ ಯೋಜನೆಗಳಿಂದ ವಂಚಿತರಾಗಲಿದ್ದಾರೆ. ರಾಜ್ಯ ಸರ್ಕಾರ ತಕ್ಷಣ ಈ ಗಂಭೀರ ಸಮಸ್ಯೆಗೆ ಪರಿಹಾರ ನೀಡಬೇಕು ಆದಾಯ ಮಿತಿ ಹೆಚ್ಚಳ ಮಾಡುವವರೆಗೆ ಪ್ರಸ್ತುತ ನಡೆಸುತ್ತಿರುವ ಪಿಂಚಣಿ ಪರಿಶೀಲನೆ ಮತ್ತು ರದ್ದತಿ ಪ್ರಕ್ರಿಯೆಯನ್ನು ತಡೆಹಿಡಿಯಬೇಕು ಎಂದು ಆಗ್ರಹಿಸಿದರು.