ಡಿ.ಕೆ.ಶಿವಕುಮಾರ್‌ಗೆ ಯತೀಂದ್ರ 3ನೇ ನಾಮದ ಗೆರೆ

| Published : Oct 24 2025, 01:00 AM IST

ಸಾರಾಂಶ

ಯತೀಂದ್ರ ಅವರನ್ನು ಬೆಳಗಾವಿಗೆ ಕಳಿಸಿ, ಸತೀಶ ಜಾರಕಿಹೊಳಿ ಮನೆಯಲ್ಲೇ ಸಿದ್ದರಾಮಯ್ಯ ಉತ್ತರಾಧಿಕಾರಿ ಸತೀಶ ಜಾರಕಿಹೊಳಿ ಅಂತಾ ಸಿದ್ದರಾಮಯ್ಯನವರೇ ಹೇಳಿಕೆ ಕೊಡಿಸಿದ್ದಾರೆ. ಆ ಮೂಲಕ 2 ನಾಮಗಳ ಹಾಕಿಕೊಂಡು ಟೆಂಪಲ್ ರನ್ ಮಾಡುತ್ತಿದ್ದ ಡಿ.ಕೆ.ಶಿವಕುಮಾರಗೆ ಯತೀಂದ್ರ 3ನೇ ನಾಮ ಹಾಕಿದ್ದಾರೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ ದಾವಣಗೆರೆಯಲ್ಲಿ ಲೇವಡಿ ಮಾಡಿದ್ದಾರೆ.

- ಸತೀಶ ಜಾರಕಿಹೊಳಿ ಮನೆಗೆ ಕಳಿಸಿ ಹೇಳಿಕೆ ಕೊಡಿಸಿದ್ದೇ ಸಿಎಂ: ಅಶೋಕ್‌

- - -

ಕನ್ನಡಪ್ರಭ ವಾರ್ತೆ ದಾವಣಗೆರೆ ಯತೀಂದ್ರ ಅವರನ್ನು ಬೆಳಗಾವಿಗೆ ಕಳಿಸಿ, ಸತೀಶ ಜಾರಕಿಹೊಳಿ ಮನೆಯಲ್ಲೇ ಸಿದ್ದರಾಮಯ್ಯ ಉತ್ತರಾಧಿಕಾರಿ ಸತೀಶ ಜಾರಕಿಹೊಳಿ ಅಂತಾ ಸಿದ್ದರಾಮಯ್ಯನವರೇ ಹೇಳಿಕೆ ಕೊಡಿಸಿದ್ದಾರೆ. ಆ ಮೂಲಕ 2 ನಾಮಗಳ ಹಾಕಿಕೊಂಡು ಟೆಂಪಲ್ ರನ್ ಮಾಡುತ್ತಿದ್ದ ಡಿ.ಕೆ.ಶಿವಕುಮಾರಗೆ ಯತೀಂದ್ರ 3ನೇ ನಾಮ ಹಾಕಿದ್ದಾರೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ ಲೇವಡಿ ಮಾಡಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಡಿ.ಕೆ.ಶಿವಕುಮಾರ ಗುಂಡಿ ಬಿದ್ದ ರಸ್ತೆಗಳನ್ನು ಸರಿಪಡಿಸುವ ಬದಲಿಗೆ ಎರಡು ನಾಮ ಹಾಕಿಕೊಂಡು, ಟೆಂಪಲ್ ರನ್ ಮಾಡುತ್ತಿದ್ದರು. ಅವರಿಗೆ ಯತೀಂದ್ರ ಸಿದ್ದರಾಮಯ್ಯ ಮೂರನೇ ನಾಮಹಾಕಿದ್ದಾರೆ. ಡಿ.ಕೆ.ಶಿವಕುಮಾರಗೆ ಸಿದ್ದರಾಮಯ್ಯ ನಾಮ ಹಾಕುವುದು ಪಕ್ಕಾ ಆಗಿದ್ದು, ಡಿಕೆಶಿ ಈಗ ದಾರಿ ತಪ್ಪಿದ ಮಗನಾಗಿದ್ದಾರೆ ಎಂದ ಅವರು, ಟೆಂಪಲ್‌ಗಿಂತಲೂ ಕಾಂಗ್ರೆಸ್ ಪಕ್ಷದ ದೊಡ್ಡ ಟೆಂಪಲ್ ಇಟಲಿ ಟೆಂಪಲ್‌ ಅನ್ನು ಡಿ.ಕೆ.ಶಿವಕುಮಾರ ಸುತ್ತಬೇಕು. ಇಟಲಿ ಟೆಂಪಲ್ ಸುತ್ತಿ, ಕಪ್ಪ ಕಾಣಿಗೆ ನೀಡಿದರೆ ಮಾತ್ರವೇ ನೀವು ಮುಖ್ಯಮಂತ್ರಿ ಆಗುತ್ತೀರಿ ಎಂದು ಟೀಕಿಸಿದರು.

ನಾನು ನ.16ರ ಕ್ರಾಂತಿ ಅಂದಾಗ ಬಿಜೆಪಿಯವರು ಬುರುಡೆ ಬಿಡುತ್ತಿದ್ದಾರೆಂದು ಡಿ.ಕೆ.ಶಿವಕುಮಾರ ಹೇಳಿದ್ದರು. ಈಗ ಅದೇ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಗ ಯತೀಂದ್ರ ಹೇಳಿದಾಗ ಕಾಂಗ್ರೆಸ್ಸಿನವರಿಗೆ ಸರಿಯಾಗಿದೆ ಅನಿಸುತ್ತಿದೆ. ತುಮಕೂರಿನ ಕೆ.ಎನ್.ರಾಜಣ್ಣ ನವೆಂಬರ್‌ ಕ್ರಾಂತಿ ಅಂದಾಗ ಪಾಪ ಬೋರ್ಡ್‌ ಸಹ ಇಲ್ಲದಂತೆ ಓಡಿಸಿದ್ದರು ಎಂದು ಹೇಳಿದರು.

₹300-₹400 ಕೋಟಿ ಟಾರ್ಗೆಟ್!:

ಕಾಂಗ್ರೆಸ್ ಸಚಿವರನ್ನು ಸಿಎಂ ಸಿದ್ದರಾಮಯ್ಯ ಡಿನ್ನರ್ ಪಾರ್ಟಿಗೆ ಕರೆದಿದ್ದರು. ಅದು ಡಿನ್ನರ್ ಪಾರ್ಟಿ ಅಲ್ಲ, ಬಿಹಾರ್‌ ಚುನಾವಣೆಗೆ ಕಲೆಕ್ಷನ್‌ ಪಾರ್ಟಿಯಾಗಿತ್ತು. ಯಾವ್ಯಾವ ಸಚಿವರು ಎಷ್ಟು ಕೊಡುತ್ತೀರಾ ಅಂತಾ ಹೇಳಿದ್ದೇ ತಡ ಕೆಲವರು ಊಟ ಮಾಡದೇ ಓಡಿಹೋದರಂತೆ ಎಂದು ಅಶೋಕ್‌ ಹೇಳಿದರು.

ಒಬ್ಬೊಬ್ಬ ಸಚಿವರಿಗೆ ₹300-₹400 ಕೋಟಿ ಕಲೆಕ್ಷನ್ ಅಂತಾ ಹೇಳಿದ್ದಾರೆ. ಸಚಿವ ಸ್ಥಾನ ಉಳಿಯಬೇಕೆಂದರೆ ಟಾರ್ಗೆಟ್ ರೀಚ್ ಆಗಬೇಕೆಂದಿದ್ದಾರೆ. ಕೊಟ್ಟ ಹಣ ವಸೂಲಿಯಾದರೆ ಸಚಿವರಾಗಿ ಮುಂದುವರಿಯುತ್ತಾರೆ. ಇಲ್ಲವೆಂದರೆ ಸಚಿವ ಸ್ಥಾನದಿಂದಲೇ ಅಂತಹವಿಗೆ ಗೇಟ್ ಪಾಸ್ ನೀಡುತ್ತಾರೆ ಎಂದು ಎಚ್ಚರಿಸಿದರು.

ಮುತ್ತಾತನ ಕಾಲದಿಂದಲೂ ಆರೆಸ್ಸೆಸ್ ಇದೆ:

ಕಾಂಗ್ರೆಸ್‌ನ ತಾತಾ, ಮುತ್ತಾತನ ಕಾಲದಿಂದಲೂ ಆರೆಸ್ಸೆಸ್ ಇದೆ. ಐದು ವರ್ಷ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಚಕಾರ ಎತ್ತಲಿಲ್ಲ. ಈಗ ಆರೆಸ್ಸೆಸ್ ಬಗ್ಗೆ ಮಾತನಾಡುತ್ತಿದ್ದಾರೆ. ರಾಜ್ಯದ ಗುತ್ತಿಗೆದಾರರಿಗೆ ₹33 ಸಾವಿರ ಕೋಟಿ ಬಾಕಿ ಹಣ ಬಿಡುಗಡೆ ಮಾಡಬೇಕಾಗಿದೆ. ನಮ್ಮ ಸರ್ಕಾರದಲ್ಲಿ ಕೆಂಪಣ್ಣ ಎಂಬಾತನನ್ನು ತಂದು, ಆರೋಪ ಮಾಡಿಸಿದ್ದರು. ಯಾವ ಕೋರ್ಟ್‌ನಲ್ಲೂ ಕೇಸ್ ಸಹ ನಿಲ್ಲಲಿಲ್ಲ. ಸಾಕ್ಷಿ ಹೇಳುವುದಕ್ಕೂ ಯಾರೂ ಬರಲಿಲ್ಲ ಎಂದರು.

- - -

(ಟಾಪ್‌ ಕೋಟ್‌) ಯಾರು ಮಂತ್ರಿ ಪದವಿ ಬಿಡುತ್ತಾರೋ ಅಂತಹವರೆಲ್ಲಾ ಬಿಹಾರ ಚುನಾವಣೆಗೆ ದುಡ್ಡು ಕೊಟ್ಟಿಲ್ಲವೆಂದರ್ಥ. ಯಾರು ಹಣ ಕೊಟ್ಟಿದ್ದಾರೋ ಅಂತಹವರು ಚುನಾವಣೆಗೆ ನೀಡಿದ್ದ ಟಾರ್ಗೆಟ್ ರೀಚ್ ಆಗಿದ್ದಾರೆ ಎಂದರ್ಥ. ರೆಕಾರ್ಡ್ ಆಗಿ ಉಳಿಯಲಿ, ಕಾಂಗ್ರೆಸ್‌ ಸರ್ಕಾರದ ಬಗ್ಗೆ ನಾನು ಹೇಳುತ್ತಿರುವುದೆಲ್ಲವೂ ಸತ್ಯ.

- ಆರ್.ಅಶೋಕ, ಬಿಜೆಪಿ ಮುಖಂಡ.

- - -

-23ಕೆಡಿವಿಜಿ2, 3:

ದಾವಣಗೆರೆಯಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ ಸುದ್ದಿಗಾರರೊಂದಿಗೆ ಮಾತನಾಡಿದರು. ವಿಪ ಸದಸ್ಯ ಸಿ.ಟಿ.ರವಿ, ಮಾಜಿ ಸಚಿವ ಬಿ.ಸಿ.ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ ಇತರರು ಇದ್ದರು.