ಉಸ್ತುವಾರಿ ಸಚಿವರಿಂದ ಹಾಗೂ ಪಾಲಿಕೆಯಿಂದ ನಗರದಲ್ಲಿ ಆಗಿರುವ ಕೆಲಸಗಳೆಲ್ಲ ನಾನೇ ಮಾಡಿದ್ದು ಎಂದು ಹೇಳಿಕೊಂಡು ತಿರುಗುವ ಶಾಸಕ ಬಸನಗೌಡ ಪಾಟೀಲ ಯತ್ನಾಳರು ಶಾಸಕರ ಅನುದಾನದಲ್ಲಿ ಏನು ಅಭಿವೃದ್ಧಿ ಮಾಡಿದ್ದಾರೆ ಎಂದು ನಗರದ ಸಿದ್ಧರಾಮೇಶ್ವರ ದೇವರು ಅಥವಾ ಗಣೇಶನ ಮೇಲೆ ಆಣೆ ಮಾಡಿ ಹೇಳಲಿ ನೋಡೋಣ ಎಂದು ಕಾಂಗ್ರೆಸ್ ಮುಖಂಡ ಎಂ.ಸಿ.ಮುಲ್ಲಾ ಸವಾಲು ಹಾಕಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ರಸ್ತೆಗಳು ಹದಗೆಟ್ಟಿವೆ. 16 ದಿನಗಳಿಂದ ಕುಡಿಯಲು ನೀರಿಲ್ಲ. ನಗರ ಶಾಸಕರು ವೇದಿಕೆ ಮೇಲೆ ಕೇವಲ ವಿಜಯೇಂದ್ರ, ಯಡಿಯೂರಪ್ಪ, ಮುಸ್ಲಿಂ, ಪಾಕಿಸ್ತಾನ ಈ ನಾಲ್ಕು ಶಬ್ಧ ಬಿಟ್ಟು ಬೇರೆ ಮಾತೇ ಆಡಿಲ್ಲ. ಒಂದೇ ಒಂದು ದಿನ ಅಧಿಕಾರಿಗಳ ಸಭೆ ನಡೆಸಿಲ್ಲ ಎಂದು ದೂರಿದರು.ನಗರದಲ್ಲಿರುವ ಅಂಗನವಾಡಿಗಳ, ಕನ್ನಡ ಶಾಲೆಗಳ, ಸರ್ಕಾರಿ ಆಸ್ಪತ್ರೆಯ ಸ್ಥಿತಿ ಏನಿದೆ ನೋಡಿಲ್ಲ. ಯತ್ನಾಳ ಕೇಂದ್ರ ಮಂತ್ರಿ, ಎಂಪಿ, ಎಂಎಲ್‌ಸಿ ಹಾಗೂ ಮೂರು ಬಾರಿ ಶಾಸಕರಾಗಿದ್ದರೂ ಜನತೆಯ ಸಂಕಷ್ಟ ಕಾಣುತ್ತಿಲ್ಲ. ಗಣೇಶೋತ್ಸವಕ್ಕೆ ಹೋಗಿ ಗಣೇಶನ ಹೆಸರನ್ನೇ ಹೇಳದೆ ಕೇವಲ ರಾಜಕೀಯವಾಗಿ ಪ್ರಚೋದನ ಭಾಷಣ ಮಾಡುತ್ತಿದ್ದಾರೆ. ಯತ್ನಾಳರ ವರ್ತನೆಗೆ ಹಿಂದೂ ಯುವಕರೇ ಛೀಮಾರಿ ಹಾಕುತ್ತಿದ್ದಾರೆ.ಸಂದರ್ಭಕ್ಕನುಸಾರವಾಗಿ ಅನುಕೂಲಕರ ರೀತಿಯಲ್ಲಿ ಮಾತನಾಡುತ್ತಾರೆ. ವಿಜಯಪುರದ ಸೌಹಾರ್ದತೆ ಕೆಡೆಸುವ ಕೆಲಸ ಬಿಟ್ಟು, ಅಭಿವೃದ್ಧಿ ಮಾಡಬೇಕು. ಹೈಟೆಕ್ ಜೀವನ ನಡೆಸುತ್ತಿರುವ ಯತ್ನಾಳರು ನಾನು ಯಾರಿಂದಲೂ ಹಣ ಪಡೆದಿಲ್ಲ‌ ಎಂದು ಎದೆ ತಟ್ಟಿಕೊಂಡು ಹೇಳಲಿ ಎಂದು ಸವಾಲು ಹಾಕಿದರು.

ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯವರು ಪ್ರಚೋದನಾಕಾರಿ ಭಾಷಣ ಮಾಡುವ ಯತ್ನಾಳ ಮೇಲೆ ಸೊಮೊಟೊ ಪ್ರಕರಣ ಹಾಕಿ, ಬಾಯಿಗೆ ಬೀಗ ಹಾಕಬೇಕು. ಇಲ್ಲವಾದಲ್ಲಿ ಈತ ಹೋಗುವ ಕಾರ್ಯಕ್ರಮಗಳಲ್ಲಿ ಚಪ್ಪಲಿ ಹಾಗೂ ಮೊಟ್ಟೆ ಹೊಡೆಯುವ ಕೆಲಸ ಯುವಕರು ಮಾಡಲಿದ್ದಾರೆ ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಅಪ್ಪು ಪೂಜಾರಿ, ವಸಂತ ಹೊನಮೊಡೆ, ಫಯಾಜ್ ಕಲಾದಗಿ, ಮಹಾದೇವ ರಾವಜಿ, ಈರಪ್ಪ ಕುಂಬಾರ ಇದ್ದರು.