ಸಾರಾಂಶ
ಬೆಳಗಾವಿ : ಬಿಜೆಪಿಯಿಂದ ಉಚ್ಚಾಟನೆಯಾದ ಬಳಿಕ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಗುರುವಾರ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.
ಗೋಕಾಕನಲ್ಲಿ ನಡೆಯುತ್ತಿರುವ ಮಹಾಲಕ್ಷ್ಮೀ ದೇವಿಯ ಜಾತ್ರೆಯ ಹಿನ್ನೆಲೆಯಲ್ಲಿ ಶಾಸಕ ಯತ್ನಾಳ ಅವರಿಗೆ ಶಾಸಕ ರಮೇಶ ಜಾರಕಿಹೊಳಿ ಆಹ್ವಾನ ನೀಡಿದ್ದರು ಎನ್ನಲಾಗಿದೆ. ಹೀಗಾಗಿ ಯತ್ನಾಳ ಭೇಟಿ ಮಾಡಿ ದೇವಿಯ ದರ್ಶನ ಪಡೆದಿದ್ದಾರೆ. ಯತ್ನಾಳ ಉಚ್ಚಾಟನೆಯಾದ ಬಳಿಕ ಉಭಯ ನಾಯಕರು ಇದೇ ಮೊದಲ ಬಾರಿಗೆ ಭೇಟಿ ಮಾಡಿದ್ದಾರೆ. ಅಲ್ಲದೆ, ರಮೇಶ್ ಜಾರಕಿಹೊಳಿ ವಾಹನದಲ್ಲಿಯೇ ಯತ್ನಾಳ ಅವರು ಗೋಕಾಕ ಸಿಟಿ ರೌಂಡ್ಸ್ ಹಾಕಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಕುರಿತು ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಈ ಭೇಟಿ ಮತ್ತಷ್ಟು ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ. ವಾಲ್ಮೀಕಿ ಹಗರಣದ ಕುರಿತಾಗಿ ಅತೃಪ್ತ ಶಾಸಕರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ನೀಡಿರುವ ತೀರ್ಪು ಮತ್ತು ಅದರ ಮುಂದಿನ ನಡೆಯ ಕುರಿತಾಗಿಯೂ ಉಭಯ ನಾಯಕರು ಚರ್ಚೆ ನಡೆಸಿರುವುದಾಗಿ ಆಪ್ತ ವಲಯಗಳು ತಿಳಿಸಿವೆ.
ಜಾತ್ರೆಯಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದ ಜಾರಕಿಹೊಳಿ ಪುತ್ರ: ಮಾಜಿ ಸಚಿವ, ಗೋಕಾಕ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಪುತ್ರ ಸಂತೋಷ ಜಾರಕಿಹೊಳಿ ಸಾರ್ವಜನಿಕವಾಗಿ ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಿಸಿರುವ ವಿಡಿಯೋ ವೈರಲ್ ಆಗಿದೆ.ಗೋಕಾಕನ ಲಕ್ಷ್ಮಿ ದೇವಿ ಜಾತ್ರೆಯಲ್ಲಿ ತಮ್ಮ ಬೆಂಬಲಿಗರೊಂದಿಗೆ ಸಂಭ್ರಮದಲ್ಲಿ ಭಾಗಿಯಾದ ಅವರು, ಬಂದೂಕು ಹಿಡಿದು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆಗ ಅವರ ಬೆಂಬಲಿಗರು ಜೈಕಾರ ಕೂಗಿ ಸಂಭ್ರಮಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದೇವಸ್ಥಾನದ ಮುಂಭಾಗದಲ್ಲಿ ಜಾತ್ರೆಯಲ್ಲಿ ನೂರಾರು ಜನರ ನಡುವೆ ಹಾಗೂ ಪೊಲೀಸರ ಸಮ್ಮುಖದಲ್ಲೇ ಫೈರಿಂಗ್ ಮಾಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಗೋಕಾಕ ನಗರ ಪೊಲೀಸರು ಸಂತೋಷ ಜಾರಕಿಹೊಳಿ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಸುಮೋಟೋ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಬೆಳಗಾವಿ ಎಸ್ಪಿ ಡಾ। ಭೀಮಾಶಂಕರ ಗುಳೇದ ಮಾಹಿತಿ ನೀಡಿದ್ದಾರೆ.ಜಾತ್ರೆಯಲ್ಲಿ ಸಂಪ್ರದಾಯದಂತೆ ಈ ರೀತಿ ಗುಂಡು ಹಾರಿಸಲಾಗಿದೆ ಎಂಬ ಮಾತು ಕೂಡ ಕೇಳಿ ಬರುತ್ತಿದ್ದು, ಈ ಕುರಿತು ಇನ್ನಷ್ಟೇ ಸ್ಪಷ್ಟನೆ ದೊರೆಯಬೇಕಿದೆ.