ಸಾರಾಂಶ
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಂದ ಅಧಿಕಾರ ಪಡೆದವರೇ ಇಂದು ಬಸನಗೌಡ ಪಾಟೀಲ ಯತ್ನಾಳ ಮತ್ತು ರಮೇಶ್ ಜಾರಕಿಹೊಳಿ ಅವರನ್ನು ಎತ್ತಿ ಕಟ್ಟುತ್ತಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಗಂಭೀರವಾಗಿ ಆಪಾದಿಸಿದ್ದಾರೆ.
ಬೆಂಗಳೂರು : ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಂದ ಅಧಿಕಾರ ಪಡೆದವರೇ ಇಂದು ಬಸನಗೌಡ ಪಾಟೀಲ ಯತ್ನಾಳ ಮತ್ತು ರಮೇಶ್ ಜಾರಕಿಹೊಳಿ ಅವರನ್ನು ಎತ್ತಿ ಕಟ್ಟುತ್ತಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಗಂಭೀರವಾಗಿ ಆಪಾದಿಸಿದ್ದಾರೆ.
ಭಾನುವಾರ ಮತ್ತೊಬ್ಬ ಮಾಜಿ ಸಚಿವ ಕಟ್ಟಾ ಸುಬ್ರಮಣ್ಯನಾಯ್ಡು ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ಯತ್ನಾಳ ಮತ್ತು ಜಾರಕಿಹೊಳಿ ಅವರಿಬ್ಬರೂ ಒಳ್ಳೆಯವರೆ. ಆದರೆ ಪಕ್ಷದ ಕೆಲವರು ಅವರಿಗೆ ಪ್ರಚೋದನೆ ಕೊಡುತ್ತಿದ್ದಾರೆ. ಹೈಕಮಾಂಡ್‌ಗೆ ಎಲ್ಲಾ ಮಾಹಿತಿ ಗೊತ್ತಿದೆ. ಸಮಯ ಬಂದಾಗ ಎಲ್ಲವನ್ನೂ ಬಿಚ್ಚಿಡುತ್ತೇವೆ ಎಂದು ತೀಕ್ಷ್ಣವಾಗಿ ಹೇಳಿದರು.
ವಿಜಯೇಂದ್ರ ಬಚ್ಚಾ ಅಲ್ಲ: ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬಚ್ಚಾ ಅಲ್ಲ. ಸಮರ್ಥ ಹಾಗೂ ನುರಿತ ರಾಜಕಾರಣಿ. ವಿಜಯೇಂದ್ರ ಅವರಿಗೆ ಜ್ಞಾನ ಇದೆ. ಪಕ್ಷವನ್ನು ಅಧಿಕಾರಕ್ಕೆ ತರುವ ಛಲ ಇದೆ. ಅವರ ವಿರುದ್ಧ ಮಾತನಾಡುವುದನ್ನು ಸಹಿಸುವುದಿಲ್ಲ. ಏನೇ ಇದ್ದರೂ ನಾಲ್ಕು ಗೋಡೆ ಮಧ್ಯೆ ಮಾತನಾಡಬೇಕು. ಯತ್ನಾಳ, ರಮೇಶ್ ಜಾರಕಿಹೊಳಿ ಮಾತುಗಳಿಂದ ಕಾರ್ಯಕರ್ತರ ಮನಸ್ಸಿಗೆ ನೋವಾಗಿದೆ ಎಂದರು.
ಯತ್ನಾಳ, ರಮೇಶ್ ಜಾರಕಿಹೊಳಿ ಅವರು ಹುಚ್ಚುಹುಚ್ಚಾಗಿ ಮಾತನಾಡುತ್ತಿದ್ದಾರೆ. ಅವರಿಬ್ಬರನ್ನು ಮುಲಾಜಿಲ್ಲದೆ ಉಚ್ಚಾಟನೆ ಮಾಡುವಂತೆ ಹೈಕಮಾಂಡ್‌ಗೆ ಹೇಳುತ್ತೇವೆ. ಈ ಬಗ್ಗೆ ದೆಹಲಿ ವಿಧಾನಸಭಾ ಚುನಾವಣೆ ಮುಗಿದ ಬಳಿದ ನಿಯೋಗ ತೆರಳಿ ವರಿಷ್ಠರನ್ನು ಆಗ್ರಹಿಸುತ್ತೇವೆ ಎಂದು ತಿಳಿಸಿದರು.
ಯತ್ನಾಳ್‌ರನ್ನು ಉಚ್ಚಾಟಿಸಲಾಗಿತ್ತು: ಯತ್ನಾಳ ಅವರೇ ಹಿಂದೆ ನಿಮ್ಮನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಲಾಗಿತ್ತು. ಆಗ ಯಡಿಯೂರಪ್ಪ ಅವರ ಕಾಲು ಹಿಡಿದು ಬಿಜೆಪಿಗೆ ಬಂದಿದ್ದೀರಿ. ನಿಮಗೆ ಯಡಿಯೂರಪ್ಪ ಬಗ್ಗೆ ಮಾತಾಡಲು ಯಾವ ನೈತಿಕತೆ ಇದೆ? ಯಡಿಯೂರಪ್ಪ ಅವರು ಕಾಲಿಗೆ ಚಕ್ರ ಕಟ್ಟಿಕೊಂಡು ಸೈಕಲ್, ಸ್ಕೂಟರ್, ಬಸ್, ಕಾರಲ್ಲಿ ಓಡಾಡಿ ಪಕ್ಷ ಕಟ್ಟಿದ್ದಾರೆ. ಯಡಿಯೂರಪ್ಪ ಪಕ್ಷ ಕಟ್ಟುವ ವೇಳೆ ಯತ್ನಾಳ ಅವರು ಕಣ್ಣು ಕೂಡ ಬಿಟ್ಟಿರಲಿಲ್ಲ. ಎಚ್ಚರಿಕೆಯಿಂದ ಮಾತಾಡಬೇಕು ಎಂದು ಹರಿಹಾಯ್ದರು.
ಯತ್ನಾಳ ಒಬ್ಬ ಗೋಮುಖ ವ್ಯಾಘ್ರ. ಕಾಂಗ್ರೆಸ್ ಏಜೆಂಟನಂತೆ ವರ್ತನೆ ಮಾಡುತ್ತಿದ್ದಾರೆ. ರಾಜ್ಯದ ಕೆಲವರು ಮಗು ಚಿವುಟಿ ತೊಟ್ಟಿಲು ತೂಗುತ್ತಿದ್ದಾರೆ. ಇಲ್ಲಿ ಯತ್ನಾಳ ಅವರನ್ನು ಎತ್ತಿ ಕಟ್ಟುವ ಮೂಲಕ ವಿಜಯೇಂದ್ರರನ್ನು ಕುಗ್ಗಿಸಬಹುದು ಎಂದುಕೊಂಡಿದ್ದಾರೆ. ಬಹಳ ಗೌರವ ಕೊಟ್ಟು ಈವರೆಗೂ ನಿಮ್ಮ ಬಗ್ಗೆ ಮಾತಾಡಿದ್ದೇವೆ. ಇನ್ನು ಮುಂದೆ ಸಹಿಸಲ್ಲ ಎಂದು ಏಕವಚನದಲ್ಲೇ ರೇಣುಕಾಚಾರ್ಯ ಗುಡುಗಿದರು.
ವಿಜಯೇಂದ್ರರನ್ನು ಅಧ್ಯಕ್ಷ ಮಾಡಿದ್ದು ಹೈಕಮಾಂಡ್. ವಿಜಯೇಂದ್ರರನ್ನು ಬೈದರೆ ಹೈಕಮಾಂಡ್ ಬೈದಂತೆ. ನೀವು ಏನೇ ಮಾಡಿದರೂ ವಿಜಯೇಂದ್ರ ವರ್ಚಸ್ಸು ಕುಗ್ಗಲ್ಲ ಎಂದು ಹೇಳಿದರು.