ಸಾರಾಂಶ
ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಬದಲಾವಣೆಗೆ ಯತ್ನಾಳ್ ಟೀಂ ಪ್ರಯತ್ನಿಸುತ್ತಿದೆ. ಆದಷ್ಟು ಬೇಗ ಅದು ಆಗಲೂಬಹುದು ಎಂದು ಸಚಿವ ಶರಣಬಸಪ್ಪಗೌಡ ದರ್ಶನಾಪುರ ಟಾಂಗ್ ನೀಡಿದರು.
ಯಾದಗಿರಿ : ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಬದಲಾವಣೆಗೆ ಯತ್ನಾಳ್ ಟೀಂ ಪ್ರಯತ್ನಿಸುತ್ತಿದೆ. ಆದಷ್ಟು ಬೇಗ ಅದು ಆಗಲೂಬಹುದು ಎಂದು ಸಚಿವ ಶರಣಬಸಪ್ಪಗೌಡ ದರ್ಶನಾಪುರ ಟಾಂಗ್ ನೀಡಿದರು.
ಬಿಜೆಪಿಯ ವಕ್ಫ್ ಹೋರಾಟ ಹಾಗೂ ಯತ್ನಾಳ್ ಹೇಳಿಕೆಗಳ ಕುರಿತು ಯಾದಗಿರಿಯಲ್ಲಿ ತಮ್ಮನ್ನು ಭೇಟಿಯಾದ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಅವರು, ಬಿಜೆಪಿ ಅಧಿಕಾರವಧಿಯಲ್ಲೇ ಹೆಚ್ಚು ವಕ್ಫ್ ಬದಲಾವಣೆಗಳಾಗಿವೆ. ಈಗವರು ವಕ್ಫ್ ವಿಚಾರವಾಗಿ ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ ಎಂದು ಟೀಕಿಸಿದರು.
ಕೇಂದ್ರದಲ್ಲಿ ಪ್ರಧಾನಿ ಮೋದಿ ಬಹಳ ವೀಕ್ ಆಗಿದ್ದಾರೆ, ಹೇಳಿಕೆ ನೀಡುತ್ತಿರುವ ಯತ್ನಾಳ್‌ಗೆ ಬುಲಾವ್ ಮಾಡಿದರೆ ಅವರು ಬರಲ್ಲ ಎಂದಿದ್ದಾರೆ. ಈಗಲ್ಲಿ ಅವರೆಲ್ಲ ಅಧ್ಯಕ್ಷರ ಬದಲಾವಣೆಗೆ ಪಟ್ಟು ಹಿಡಿದಿದ್ದಾರೆ. ರಮೇಶ ಜಾರಕಿಹೊಳಿ, ಅರವಿಂದ ಲಿಂಬಾವಳಿ, ಪ್ರತಾಪಸಿಂಹ ಅವರ ಯತ್ನಾಳ್ ಟೀಂ ಒಂದಾಗಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬದಲಾವಣೆಗೆ ಬೆನ್ನು ಹತ್ತಿದ್ದಾರೆ. ಇತ್ತೀಚಿನ ಚುನಾವಣೆಯಲ್ಲಿ ಮೂರು ಕ್ಷೇತ್ರಗಳ ಸೋಲಿಗೆ ವಿಜಯೇಂದ್ರ ಕಾರಣ ಎಂದು ಯತ್ನಾಳ್ ಟೀಂ ಬಿಜೆಪಿಗೆ ಹೈಕಮಾಂಡಿಗೆ ದೂರಿದೆ.
ಬಿಜೆಪಿ ಪಕ್ಷ ಹೇಳುವುದೊಂದು, ಮಾಡುವುದೊಂದು. ಅಭಿವೃದ್ಧಿ ವಿಚಾರದಲ್ಲಿ ಅವರು ಸರ್ಕಾರ ರಚಿಸಲ್ಲ, ಬಿಜೆಪಿ ಎಂದಿಗೂ ಅಭಿವೃದ್ಧಿ ಹೆಸರಲ್ಲಿ ಓಟ್ ಕೇಳೋಲ್ಲ. ಹಿಂದೂ ಹಿಂದೂ.. ಹೆಸರಲ್ಲಿ ಅನ್ನುತ್ತಾರೆ. ಹಿಂದೂಗಳ ವ್ಯಾಖ್ಯಾನವೇ ಅವರಿಗೆ ತಿಳಿದಿಲ್ಲ. ದಲಿತರು, ಹಿಂದುಳಿದವರಿಗೆ ಹಿಂದೂ ಅಲ್ಲ ಅಂತಾರೆ. ಚುನಾವಣೆ ಬಂದಾಗ ಹಿಂದೂ ಅಂತಾರೆ, ನಂತರದಲ್ಲಿ ನಾವು ಮುಂದೆ ನೀವು ಹಿಂದು ಎಂದು ಜಾರಿಕೊಳ್ಳುತ್ತಾರೆ ಎಂದ ವ್ಯಂಗ್ಯವಾಡಿದ ದರ್ಶನಾಪುರ, ಕಾಂಗ್ರೆಸ್ ಹಾಗಲ್ಲ, ಬಡವರ ಪರ ಚಿಂತನೆಯ, ಅಭಿವೃದ್ಧಿ ಪರ ವಿಚಾರವುಳ್ಳ ಪಕ್ಷ ಎಂದರು.