ಲೋಕಸಭೆಯಲ್ಲೂ ಯಡಿಯೂರಪ್ಪ ಹೊಂದಾಣಿಕೆ ರಾಜಕಾರಣ: ಈಶ್ವರಪ್ಪ ಆರೋಪ

| Published : Apr 01 2024, 12:51 AM IST

ಸಾರಾಂಶ

ಪ್ರಧಾನಿ ಮೋದಿ ಅವರಿಗೆ ನನ್ನ ಕೆಲಸದ ಬಗ್ಗೆ ಅರಿವಿದೆ. ಮೋದಿಯವರ ಕುಟುಂಬ ರಾಜಕಾರಣವನ್ನು ಕ್ಲೀನ್ ಮಾಡುವ ಕೆಲಸಕ್ಕೆ ಮುಂದಾಗಿದ್ದೇನೆ. ನನ್ನ ಮನವೊಲಿಸುವ ಮತ್ತು ನನ್ನ ಹೋರಾಟಕ್ಕೆ ಅಡ್ಡಿ ಬರಬೇಡಿ ಎಂದು ಮೋದಿಜಿಯವರಿಗೆ ನಾನು ಮನವರಿಕೆ ಮಾಡುತ್ತೇನೆ ಎಂದು ಈಶ್ವರಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಕುಂದಾಪುರ

ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಕುಟುಂಬದ ಹಿಡಿತದಲ್ಲಿರುವ ಬಿಜೆಪಿಯನ್ನು ಮುಕ್ತಗೊಳಿಸಬೇಕು ಎಂಬುದು ನನ್ನ ಉದ್ದೇಶವೇ ಹೊರತು ಬಿಜೆಪಿಯ ವಿರುದ್ಧ ಹೋರಾಟವಲ್ಲ. ನನ್ನ ಹೋರಾಟದಲ್ಲಿ ನ್ಯಾಯವಿದೆ. ಹೀಗಾಗಿ ಬಿಜೆಪಿ ಕಾರ್ಯಕರ್ತರು ನನ್ನ ಬೆಂಬಲಕ್ಕೆ ನಿಂತಿದ್ದಾರೆ. ಕಾರ್ಯಕರ್ತರು ಮಾತ್ರವಲ್ಲದೆ ಬಿಜೆಪಿ ಮುಖಂಡರಾದ ಪ್ರತಾಪ್ ಸಿಂಹ, ಸಿ.ಟಿ. ರವಿ, ಯತ್ನಾಳ್ ನನಗೆ ಫೋನ್ ಮಾಡಿ ಬೆಂಬಲ ಸೂಚಿಸಿದ್ದಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.

ಭಾನುವಾರ ಉಪ್ಪುಂದದಲ್ಲಿ ಕಾರ್ಯಕರ್ತರ ಸಮಾವೇಶಕ್ಕೆ ಆಗಮಿಸಿದ ವೇಳೆ ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಪ್ರಧಾನಿ ಮೋದಿ ಅವರಿಗೆ ನನ್ನ ಕೆಲಸದ ಬಗ್ಗೆ ಅರಿವಿದೆ. ಮೋದಿಯವರ ಕುಟುಂಬ ರಾಜಕಾರಣವನ್ನು ಕ್ಲೀನ್ ಮಾಡುವ ಕೆಲಸಕ್ಕೆ ಮುಂದಾಗಿದ್ದೇನೆ. ನನ್ನ ಮನವೊಲಿಸುವ ಮತ್ತು ನನ್ನ ಹೋರಾಟಕ್ಕೆ ಅಡ್ಡಿ ಬರಬೇಡಿ ಎಂದು ಮೋದಿಜಿಯವರಿಗೆ ನಾನು ಮನವರಿಕೆ ಮಾಡುತ್ತೇನೆ. ಯಡಿಯೂರಪ್ಪ ಮತ್ತು ಕಾಂಗ್ರೆಸ್‌ನ ಹೊಂದಾಣಿಕೆ ರಾಜಕಾರಣ ಲೋಕಸಭೆಯಲ್ಲೂ ಮುಂದುವರಿದಿದೆ. ರಾಘವೇಂದ್ರ ವಿರುದ್ಧ ಕಾಂಗ್ರೆಸ್ ವೀಕ್ ಮತ್ತು ಡಮ್ಮಿ ಕ್ಯಾಂಡಿಡೇಟ್ ಹಾಕಿದೆ. ಶಿವಮೊಗ್ಗದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ನೇರ ಸ್ಪರ್ಧೆ ಇಲ್ಲ. ಇಲ್ಲಿರುವುದು ನನಗೂ ಮತ್ತು ಯಡಿಯೂರಪ್ಪನ ಮಗನಿಗೆ ಸ್ಪರ್ಧೆ ಎಂದರು.

ನಾನು ಯಾರಿಗೂ ಹೆದರಲ್ಲ. ನನ್ನ ಹೆಸರು ಹೇಳಿದರೆ ಬೇರೆಯವರಿಗೆ ಬಿಪಿ ಶುಗರ್ ಬರುತ್ತದೆ. ರಾಷ್ಟ್ರವಾದಿ ಮುಸಲ್ಮಾನರ ಮತವನ್ನು ನಾನು ನಿರೀಕ್ಷೆ ಮಾಡುತ್ತೇನೆ ಎಂದರು.

* ರಾಘವೇಂದ್ರಗೆ ಎದುರೇಟು:ಚುನಾವಣೆ ನಿಲ್ಲುವ ಯೋಚನೆ ಮಾಡಿದಾಗ ಎಲ್ಲ ಮಠ ಮಂದಿರಗಳಿಗೆ ಹೋಗಿ ಸ್ವಾಮಿಗಳ ಆಶೀರ್ವಾದ ಪಡೆದುಕೊಂಡು ಬಂದಿದ್ದೇನೆ. ವೀರಶೈವ ಸಮಾಜದ ಹೆಣ್ಣು ಮಕ್ಕಳು ಬೆಂಬಲ ಕೊಡುತ್ತೇವೆ ಎಂದರು. ಇದು ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಸಮಾಧಾನ ಆಗಿಲ್ಲ. ಹಾಗಾಗಿ ಮಠಾಧೀಶರಿಗೆ, ವೀರಶೈವ ಹೆಣ್ಣು ಮಕ್ಕಳಿಗೆ ನೋವಾಗುವ ಮಾತನಾಡಿದ್ದಾರೆ. ನೊಂದು ಅನೇಕ ಹೆಣ್ಣು ಮಕ್ಕಳು ಕಣ್ಣೀರು ಹಾಕಿದ್ದಾರೆ ಎಂದು ಆರೋಪಿಸಿದರು.

ಆದರೂ ಅವರು ಯಾವ ಮಠಾಧೀಶರಿಗೂ ನೋವಾಗಿಲ್ಲ, ಯಾವ ಹೆಣ್ಣು ಮಕ್ಕಳು ಕಣ್ಣೀರು ಹಾಕಿಲ್ಲ. ಚಂದ್ರಗುತ್ತಿಗೆ ಬಂದು ಪ್ರಮಾಣ ಮಾಡಲಿ ಎನ್ನುತ್ತಾರೆ. ಗಂಟೆ ಹೊಡೆಯುವುದು, ಪ್ರಮಾಣದಲ್ಲಿ ನನಗೆ ನಂಬಿಕೆ ಇಲ್ಲ. ಆದರೆ ನಾನು ಒಪ್ಪಿಕೊಳ್ಳಲಿಲ್ಲ ಅಂದರೆ ಸುಳ್ಳು ಹೇಳಿದ ಹಾಗೆ ಆಗುತ್ತದೆ. ಚಂದ್ರಗುತ್ತಿ ಯಾಕೆ ಅಯೋಧ್ಯೆಗೆ ಹೋಗೋಣ. ಗಂಟೆ ಹೊಡೆಯಬೇಕೋ, ಪ್ರಮಾಣ ಮಾಡಬೇಕೋ ಮಾಡೋಣ. ಅದರ ಜೊತೆಗೆ ಅವರ ಅಪ್ಪನೂ ಪ್ರಮಾಣ ಮಾಡಲಿ. ಕಾಂತೇಶನಿಗೆ ಟಿಕೆಟ್ ಕೊಡಿಸುತ್ತೇನೆ ಅವನನ್ನು ಓಡಾಡಿ ಗೆಲ್ಲಿಸುತ್ತೇನೆ ಎಂದು ಹೇಳಿದ್ದಾರೋ ಇಲ್ಲವೋ ಪ್ರಮಾಣ ಮಾಡಲಿ ಎಂದು ಯಡಿಯೂರಪ್ಪಗೆ ಈಶ್ವರಪ್ಪ ಸವಾಲು ಹಾಕಿದರು.ಕಾರ್ಯಕರ್ತರಿಗೆ ಬಿರಿಯಾನಿ ಲಾಸ್!ಬೈಂದೂರು ವಿಧಾನಸಭಾ ಕ್ಷೇತ್ರದ ಉಪ್ಪಂದದಲ್ಲಿ ನಡೆದಿದ್ದ ಈಶ್ವರಪ್ಪ ಸಮಾವೇಶದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗಿಗಳಾಗಿದ್ದರು. ಸಮಾವೇಶ ನಡೆಯುತ್ತಿದ್ದ ಸಭಾಂಗಣಕ್ಕೆ ಫ್ಲೈಯಿಂಗ್‌ ಸ್ಕ್ವಾಡ್‌ ದಾಳಿ ನಡೆಸಿ ಬಿರಿಯಾನಿ ಕೊಟ್ಟರೆ ಚುನಾವಣೆ ವೆಚ್ಚಕ್ಕೆ ಸೇರ್ಪಡೆಗೊಳಿಸುವುದಾಗಿ ಎಚ್ಚರಿಕೆ ನೀಡಿದರು. ಮಧ್ಯಾಹ್ನ ಕಾರ್ಯಕರ್ತರಿಗೆ ಬಡಿಸಲು ಸಿದ್ಧಪಡಿಸಿದ್ದ ಬಿರಿಯಾನಿ ಅಲ್ಲೇ ಬಾಕಿಯಾಯಿತು. ಬಿರಿಯಾನಿಗಾಗಿ ಕಾದು ಸುಸ್ತಾದ ಕಾರ್ಯಕರ್ತರು ಬಿರಿಯಾನಿ ತಿನ್ನದೇ ವಾಪಸಾದ ಪ್ರಸಂಗವೂ ನಡೆಯಿತು.