ಯಲಗೂರೇಶನ ಮಹಿಮೆ ಅರಿತಿರುವ ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ.ಪಾಟೀಲರು ಈಚೆಗೆ ಆಗಮಿಸಿ ಇಲಾಖೆಯಿಂದ ಯಲಗೂರು ಗ್ರಾಮವನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸಲು ಡಿಪಿಎಆರ್ ಸಿದ್ಧಪಡಿಸುವಂತೆ ಸೂಚಿಸಿದ್ದಾರೆ. ಅಂದಾಜು ₹55 ಕೋಟಿ ವೆಚ್ಚದಲ್ಲಿ ಸಮಗ್ರ ಅಭಿವೃದ್ಧಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂದು ಯಲಗೂರೇಶ ಅನ್ನಪ್ರಸಾದ ಸೇವಾ ಸಮಿತಿ ಅಧ್ಯಕ್ಷ ಶ್ಯಾಮ ಪಾತ್ರದ ತಿಳಿಸಿದರು.
ಕನ್ನಡಪ್ರಭ ವಾರ್ತೆ ಆಲಮಟ್ಟಿ
ಜಿಲ್ಲೆಯ ಸುಪ್ರಸಿದ್ಧ, ಪ್ರಾಣದೇವರ ಜಾಗೃತ ಸ್ಥಳಗಳಲ್ಲೊಂದಾಗಿರುವ ಆಲಮಟ್ಟಿ ಸಮೀಪದ ಯಲಗೂರ ಹನುಮಾನ್ ಜಾತ್ರೋತ್ಸವವು ಫೆ.7ರಿಂದ 11ರವರೆಗೆ ನಡೆಯಲಿದೆ. ಏಳು ಊರಿಗೆ ಒಡೆಯನಾಗಿ ನೆಲೆ ನಿಂತಿರುವು ಆಂಜನೇಯನನ್ನು ಯಲಗೂರೇಶ ಅಂತಲೂ ಕರಯುತ್ತಾರೆ.ಗರ್ಭಗುಡಿಯಲ್ಲಿ 7 ಅಡಿ ಹನುಮನ ವಿಗ್ರಹವಿದ್ದು, ಎಡಗೈಯಲ್ಲಿ ಸೌಗಂಧಿಕಾ ಪುಷ್ಪ, ಎಡಪಾದವು ರಾಕ್ಷಸನನ್ನು ತುಳಿಯುತ್ತಿದ್ದಾನೆ. ದೊಡ್ಡದಾದ ಕಣ್ಣುಗಳಿಂದ ಗೋಚರಿಸುವ ವಿಗ್ರಹ, ಉದ್ದವಾದ ಬಾಲವು ತಲೆಯ ಮೇಲಿಂದ ಸಾಗಿ, ಎಡಗಡೆ ಪಾದದ ಸಮೀಪ ತಲುಪುತ್ತದೆ. ಕೃಷ್ಣಾ ನದಿಯಲ್ಲಿ ಮಿಂದು, ಕೃಷ್ಣೆಯ ಪವಿತ್ರ ಜಲವನ್ನು ತಂದು ಶ್ರೀ ಯಲಗೂರೇಶನ ಪೂಜೆ ಮಾಡುವ ಪರಂಪರೆಯನ್ನು ಅರ್ಚಕರು ಈಗಲೂ ಅನುಸರಿಸುತ್ತಿದ್ದಾರೆ. ನಿತ್ಯ ಮಹಾಭಿಷೇಕ, ಶನಿವಾರದಂದು ವಿಶೇಷ ಪೂಜೆ, ಕುಂಕುಮ, ಎಲೆ ಪೂಜೆಗಳು ನೆರವೇರುತ್ತವೆ.
ಜಾತ್ರೋತ್ಸವ ಕಾರ್ಯಕ್ರಮಗಳು:ಫೆ.7ರಂದು ಯಲಗೂರೇಶನ ರಥೋತ್ಸವ ನಡೆಯಲಿದೆ. ಪ್ರತಿ ವರ್ಷ ಹರಿದಾಸ ಸಾಹಿತ್ಯ ಸಂಗೀತ ವೇದಿಕೆಯಿಂದ ಎರಡು ದಿನ ನಿರಂತರ ಸಂಗೀತ ನಡೆಯುತ್ತದೆ. ಈ ವರ್ಷ 25 ವರ್ಷ ತುಂಬಿದ ಹಿನ್ನೆಲೆ ಫೆ.8ರಂದು ಪ್ರತಿ ವರ್ಷ ಕಲೆ ಕ್ಷೇತ್ರದಲ್ಲಿ ನೀಡುವ ಯಲಗೂರೇಶ ಅನುಗ್ರಹ ಪ್ರಶಸ್ತಿಯನ್ನು ಖ್ಯಾತ ಕಲಾವಿದರಾದ ರೇಣುಕಾ ನಾಕೋಡ, ಪ್ರವೀಣ ಗೋಡಖಿಂಡಿ, ಜಯತೀರ್ಥ ಮೇವುಂಡಿ, ಎಸ್.ಎಲ್.ಎನ್. ಸ್ವಾಮಿ, ಪದ್ಮಶ್ರೀ ವೆಂಕಪ್ಪ ಸುತೇಗಾರಗೆ ನೀಡಿ ಗೌರವಿಸಲಾಗುತ್ತದೆ.
ಫೆ.7ರಂದು ಮಧ್ಯಾಹ್ನ 3ಕ್ಕೆ ದಿಂಡಿನ ಸ್ಪರ್ಧೆಗಳು ಜರುಗಲಿವೆ. ಭಾನುವಾರ ರಾತ್ರಿ 10ಕ್ಕೆ ಅಂಜನಿಪುತ್ರ ನಾಟ್ಯ ಸಂಘದಿಂದ ತಾಯಿ ಋಣ ಮಣ್ಣಿನ ಗುಣ ನಾಟಕ ಪ್ರದರ್ಶನ. ರಾತ್ರಿ 10.30ಕ್ಕೆ ದೇವಸ್ಥಾನದ ಆವರಣದಲ್ಲಿ ಹೊಂಡ ಪೂಜೆ. ಫೆ.9ರಂದು ರಾತ್ರಿ ತಾಯಿ ಇಲ್ಲದ ತವರು ನಾಟಕ, ಸಂಜೆ 4ಕ್ಕೆ ಜಂಗೀ ಕುಸ್ತಿಗಳು ನಡೆಯಲಿವೆ. ಫೆ.11ರಂದು ನಾನಾ ವಿಧದ ಟಗರಿನ ಕಾಳಗ ನಡೆಯಲಿವೆ. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ಅಭಿಮಾನಿ ಬಳಗದಿಂದ ಭಕ್ತಾದಿಗಳಿಗೆ ಅಲ್ಪೋಪಹಾರ ವ್ಯವಸ್ಥೆ ಇರಲಿದೆ.ಸಮಗ್ರ ಅಭಿವೃದ್ಧಿಗೆ ₹55 ಕೋಟಿ ಡಿಪಿಎಆರ್ಯಲಗೂರೇಶನ ಮಹಿಮೆ ಅರಿತಿರುವ ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ.ಪಾಟೀಲರು ಈಚೆಗೆ ಆಗಮಿಸಿ ಇಲಾಖೆಯಿಂದ ಯಲಗೂರು ಗ್ರಾಮವನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸಲು ಡಿಪಿಎಆರ್ ಸಿದ್ಧಪಡಿಸುವಂತೆ ಸೂಚಿಸಿದ್ದಾರೆ. ಅಂದಾಜು ₹55 ಕೋಟಿ ವೆಚ್ಚದಲ್ಲಿ ಸಮಗ್ರ ಅಭಿವೃದ್ಧಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂದು ಯಲಗೂರೇಶ ಅನ್ನಪ್ರಸಾದ ಸೇವಾ ಸಮಿತಿ ಅಧ್ಯಕ್ಷ ಶ್ಯಾಮ ಪಾತ್ರದ ತಿಳಿಸಿದರು.
ಮಲೆನಾಡು ಶೈಲಿಯಲ್ಲಿ ದೇವಸ್ಥಾನದ ಅಭಿವೃದ್ಧಿ, ಗೋಪುರ, ದ್ವಾರಬಾಗಿಲು ನಿರ್ಮಾಣ, 20 ಅಡಿ ಎತ್ತರದ ಎರಡು ಬೃಹತ್ ಆಂಜನೇಯ ಮೂರ್ತಿಗಳು, ಪಾರ್ಕಿಂಗ್ ವ್ಯವಸ್ಥೆ, ನದಿಯಲ್ಲಿ ಸಹಸ್ರಾರು ಭಕ್ತರು ಸ್ನಾನ ಮಾಡುವ ಕಾರಣ ಅಲ್ಲಿಂದ ದೇವಸ್ಥಾನದವರೆಗೆ ರಸ್ತೆ ನಿರ್ಮಾಣ, ಸ್ನಾನಘಟ್ಟ, ನದಿ ತೀರದ ಬಳಿ ಆಂಜನೇಯ ತೀರ್ಥ ಉದ್ಯಾನ, ರಾಷ್ಟ್ರೀಯ ಹೆದ್ದಾರಿಯಿಂದ ಎರಡು ಕಡೆ ದೇವಸ್ಥಾನಕ್ಕೆ ಆಗಮಿಸುವ ರಸ್ತೆ ನಿರ್ಮಿಸಲಾಗುತ್ತದೆ. ಸ್ಥಳೀಯ ಶಾಸಕ ಸಿ.ಎಸ್. ನಾಡಗೌಡರ ವಿಶೇಷ ಪ್ರಯತ್ನದ ಕಾರಣ, ಇದಕ್ಕಾಗಿ ವಿಶೇಷ ಅನುದಾನ ಮಂಜೂರು ಸಿಗುವ ಸಾಧ್ಯತೆಯಿದೆ ಎಂದು ತಿಳಿಸಿದರು.ಗ್ರಾಮದಲ್ಲಿ ಗ್ರಾಮದೇವತೆ ಸಮೀಪ ಪ್ರವಾಸೋದ್ಯಮ ಇಲಾಖೆಯಿಂದ ಸದ್ಯ ₹2 ಕೋಟಿ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣ ಆರಂಭಗೊಂಡಿದೆ, ಕೆಬಿಜೆಎನ್‌ಎಲ್‌ನಿಂದ ₹1.05 ಕೋಟಿ ವೆಚ್ಚದಲ್ಲಿ ನದಿ ತೀರದಲ್ಲಿ ಸ್ನಾನ ಗೃಹ ನಿರ್ಮಾಣ ಕಾಮಗಾರಿ ಶೀಘ್ರ ಪೂರ್ಣಗೊಳ್ಳಲಿದೆ. ಯಲಗೂರು ಆಂಜನೇಯನ ಕಾರ್ತಿಕೋತ್ಸವದ ಎರಡನೇ ದಿನ ಎಳೆಯುವ ತೇರು ಈಗ ಚಿಕ್ಕದಾಗಿದ್ದು, ಅದಕ್ಕಾಗಿ ನೂತನ ಮಾದರಿಯಲ್ಲಿ ₹60 ಲಕ್ಷ ವೆಚ್ಚದಲ್ಲಿ 35 ಅಡಿ ಎತ್ತರದ ರಥ ನಿರ್ಮಾಣಕ್ಕೆ ತೀರ್ಮಾನಿಸಲಾಗಿದೆ.