ಕರ್ನಾಟಕ, ಗೋವಾ, ಮಹಾರಾಷ್ಟ್ರ ಸೇರಿದಂತೆ ಲಕ್ಷಾಂತರ ಭಕ್ತರ ಆರಾಧ್ಯ ದೇವತೆ ಸವದತ್ತಿಯ ಯಲ್ಲಮ್ಮನ ಗುಡ್ಡ ಸುಕ್ಷೇತ್ರವು ಪ್ರಾಧಿಕಾರದ ವಿಶೇಷ ಮುತುವರ್ಜಿಯಿಂದ ಬಣದ ಹುಣ್ಣಿಮೆ ಯಶಸ್ವಿಗೊಳಿಸಲು ಸಕಲ ಸೌಲಭ್ಯಗಳೊಂದಿಗೆ ಸಜ್ಜುಗೊಂಡಿದೆ.
ಕನ್ನಡಪ್ರಭ ವಾರ್ತೆ ಬೆಳಗಾವಿ
ಕರ್ನಾಟಕ, ಗೋವಾ, ಮಹಾರಾಷ್ಟ್ರ ಸೇರಿದಂತೆ ಲಕ್ಷಾಂತರ ಭಕ್ತರ ಆರಾಧ್ಯ ದೇವತೆ ಸವದತ್ತಿಯ ಯಲ್ಲಮ್ಮನ ಗುಡ್ಡ ಸುಕ್ಷೇತ್ರವು ಪ್ರಾಧಿಕಾರದ ವಿಶೇಷ ಮುತುವರ್ಜಿಯಿಂದ ಬಣದ ಹುಣ್ಣಿಮೆ ಯಶಸ್ವಿಗೊಳಿಸಲು ಸಕಲ ಸೌಲಭ್ಯಗಳೊಂದಿಗೆ ಸಜ್ಜುಗೊಂಡಿದೆ.ಈ ಕುರಿತು ನಡೆದ ಅಧಿಕಾರಿಗಳ ಪೂರ್ವಭಾವಿ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಸಿದ್ಧತೆಗಳ ಕುರಿತು ಮಾಹಿತಿ ನೀಡಿದ ಶ್ರೀ ರೇಣುಕಾ ಯಲ್ಲಮ್ಮ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಿದ್ದು ಹುಲ್ಲೋಳಿ, ಚಳಿಗಾಲ ಇರುವುದರಿಂದ ಭಕ್ತರಿಗೆ 28 ಸ್ನಾನಗೃಹಗಳಲ್ಲಿ ಬಿಸಿನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ. ರಾತ್ರಿ ಹೊತ್ತು ಭಕ್ತರಿಗೆ ಪ್ರಖರ ಬೆಳಕಿಗಾಗಿ 41 ಹೈಮಾಸ್ಟ್ ಲೈಟ್ ವ್ಯವಸ್ಥೆ ಮಾಡಲಾಗಿದೆ. ಭಕ್ತರಿಗೆ ಅನುಕೂಲವಾಗಲು 50 ಕಡೆ ಚಾರ್ಜಿಂಗ್ ಪಾಯಿಂಟ್‌ಗಳನ್ನು ಗುರುತಿಸಲಾಗಿದೆ. ವಾಹನಗಳ ಸುಗಮ ಸಂಚಾರ ಮತ್ತು ನಿಲುಗಡೆಗಾಗಿ ಮಾರ್ಗಸೂಚಿ ಮಾಡಲಾಗಿದೆ. ಚಕ್ಕಡಿಗಳಲ್ಲಿಯೂ ಹೆಚ್ಚಿನ ಸಂಖ್ಯೆಯ ಭಕ್ತರು ಬರುವುದರಿಂದ ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದರು.
ಭಕ್ತರಿಗೆ ಅಲ್ಲಲ್ಲಿ ಕುಡಿಯುವ ನೀರಿನ ಅರವಟ್ಟಿಗೆಗಳನ್ನು ನಿರ್ಮಿಸಲಾಗಿದೆ. ಬಂದೋಬಸ್ತ್‌ಗಾಗಿ ಸಾವಿರ ಪೊಲೀಸ್ ಸಿಬ್ಬಂದಿಯನ್ನು ನೇಮಿಸಲಾಗಿದೆ. ವಿಶೇಷವಾಗಿ ಭಕ್ತಸ್ನೇಹಿ ಸಂಪರ್ಕ ಕೇಂದ್ರ ತೆರೆಯಲಾಗುತ್ತಿದ್ದು, ಈ ಮೂಲಕ ಮಾಹಿತಿ ನೀಡುವುದು ಸೇರಿದಂತೆ ಕೇಂದ್ರ ಸಂಪರ್ಕಿಸುವ ಭಕ್ತರ ಸಮಸ್ಯೆಗಳಿಗೆ ತಕ್ಷಣ ಪರಿಹಾರ ಸೂಚಿಸಲಾಗುವುದು ಎಂದು ವಿವರಿಸಿದರು.ಬೆಳಗ್ಗೆ ಹಾಗೂ ಸಂಜೆಯ ಪೂಜಾ ಸಮಯ ಹೊರತುಪಡಿಸಿ ಉಳಿದಂತೆ ಎಲ್ಲಾ ಸಮಯದಲ್ಲೂ ಭಕ್ತರಿಗೆ ದೇವಿಯ ದರ್ಶನಕ್ಕೆ ಅವಕಾಶ ನೀಡಲಾಗುವುದು. ಒಟ್ಟಾರೆ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಭಕ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರಾಧಿಕಾರವು ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಕ್ಷೇತ್ರಕ್ಕೆ ಆಗಮಿಸುವ ಭಕ್ತರು ಹಾಗೂ ಕರ್ತವ್ಯನಿರತ ಸಿಬ್ಬಂದಿ ಪರಸ್ಪರ ಸಮನ್ವಯತೆ ಮತ್ತು ಸೌಜನ್ಯತೆಯಿಂದ ವರ್ತಿಸಿ ಶಾಂತಿ ಶಿಸ್ತನ್ನು ಕಾಪಾಡಬೇಕು ಎಂದು ಇದೆ ವೇಳೆ ಅವರು ಮನವಿ ಮಾಡಿದರು.
ಸಭೆಯಲ್ಲಿ ಉಪ ಕಾರ್ಯದರ್ಶಿ ನಾಗರತ್ನ ಚೋಳಿನ್, ಡಿವ್ಯೆಎಸ್ಪಿ ಚಿದಂಬರಂ ಸಿಪಿಐ ಸುರೇಶ್ ಬಂಡೆಗುಂಬಲ ಸೇರಿದಂತೆ ಇತರೆ ಅಧಿಕಾರಿಗಳು ಸಿಬ್ಬಂದಿ ಉಪಸ್ಥಿತರಿದ್ದರು.