ಸಾರಾಂಶ
ಯಲ್ಲಾಪುರ: ಪಟ್ಟಣದ ಕಾಳಮ್ಮನಗರದಲ್ಲಿ ಪರಿಶಿಷ್ಟ ಪಂಗಡ, ಜಾತಿ ಹಾಗೂ ಇತರೆ ವರ್ಗದ ಮನೆಗಳಿಗೆ ವಿದ್ಯುತ್ ಸಂಪರ್ಕ ಇಲ್ಲದ ವಿಷಯವು ವಿಧಾನ ಪರಿಷತ್ತಿನಲ್ಲಿ ಪ್ರತಿಧ್ವನಿಸಿತು.
ಈ ವಿಚಾರವನ್ನು ಸೋಮವಾರ ಸದನದಲ್ಲಿ ಪ್ರಸ್ತಾಪಿಸಿದ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಸಮಸ್ಯೆಗೊಂದು ಪರಿಹಾರ ಒದಗಿಸುವಲ್ಲಿ ಕಾರಣರಾದರು.ವಿಷಯ ಪ್ರಸ್ತಾಪಿಸಿದ ಶಾಂತಾರಾಮ ಸಿದ್ದಿ, ಯಲ್ಲಾಪುರದ ಕಾಳಮ್ಮನಗರದಲ್ಲಿ ಪರಿಶಿಷ್ಟ ಪಂಗಡದ ೧೫, ಪ.ಜಾತಿಯ ೯ ಹಾಗೂ ಇತರೆ ವರ್ಗದ ೨೩ ಮನೆಗಳಿಗೆ ವಿದ್ಯುತ್ ಸಂಪರ್ಕವೇ ಇಲ್ಲ. ಸ್ವಾತಂತ್ರ‍್ಯ ಬಂದು ೭೮ ವರ್ಷಗಳು ಕಳೆದರೂ ವಿದ್ಯುತ್ ಸಂಪರ್ಕ ಇಲ್ಲದೇ ಇರುವುದು ನಾಚಿಕೆಗೇಡಿನ ಸಂಗತಿ ಎಂದು ವಿವರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಇಂಧನ ಸಚಿವ ಕೆ.ಜೆ.ಜಾರ್ಜ್, ವಿಷಯ ಸರ್ಕಾರದ ಗಮನಕ್ಕೆ ಬಂದಿದೆ. ಆದರೆ ತಾಂತ್ರಿಕವಾಗಿ ಸಮಸ್ಯೆಯಿದೆ. ಆ ಜನರೆಲ್ಲ ಖಾಸಗಿ ಜಾಗದಲ್ಲಿದ್ದು, ವಿದ್ಯುತ್ ಸಂಪರ್ಕ ಕಲ್ಪಿಸಲು ಜಾಗದ ಮಾಲೀಕನೆಂದು ಹೇಳಿಕೊಂಡವರ ತಕರಾರು ಇದೆ. ವಿದ್ಯುತ್ ನೀಡಲು ಪ.ಜಾತಿ, ಪಂಗಡದ ಜನರೆಲ್ಲ ಆ ಸ್ಥಳದಲ್ಲಿ ವಾಸ್ತವ್ಯ ಮಾಡುವ ಬಗ್ಗೆ ದಾಖಲಾತಿಯ ಅಗತ್ಯವಿದೆ. ಆ ಬಗ್ಗೆ ಸ್ಥಳೀಯ ಆಡಳಿತದಿಂದ ಧೃಢೀಕರಣ ಪತ್ರ ನೀಡಿದಲ್ಲಿ ತಕ್ಷಣ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದೆಂದರು.ಇದಕ್ಕೆ ಮಧ್ಯ ಪ್ರವೇಶಿಸಿದ ಶಾಂತಾರಾಮ ಸಿದ್ದಿ, ಜಾಗದ ಮಾಲೀಕನೆಂದು ಹೇಳಿಕೊಂಡವರ ತಕರಾರು ಇಲ್ಲಿ ಪ್ರಸ್ತುತವಲ್ಲ. ಅದು ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿದೆ. ಬಡವರಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದಕ್ಕೂ, ಆ ವಿಷಯಕ್ಕೂ ಸಂಬಂಧವಿಲ್ಲ. ಕಾಳಮ್ಮನಗರದಲ್ಲಿ ವಾಸಿಸುತ್ತಿರುವ ಆ ಜನರು ಮನೆ, ಆಧಾರ್ ಕಾರ್ಡ್, ಪಡಿತರ ಚೀಟಿ, ನೀರಿನ ಸಂಪರ್ಕ ಹೊಂದಿದ್ದಾರೆ. ಇದೆಲ್ಲವೂ ಸರ್ಕಾರದ ವ್ಯವಸ್ಥೆಯೇ ಅಲ್ಲವೆ? ಈ ವ್ಯವಸ್ಥೆಗಳನ್ನು ಹೊಂದಿದ ಆಧಾರದ ಮೇಲೆ ವಿದ್ಯುತ್ ಸಂಪರ್ಕ ನೀಡುವುದಕ್ಕೇನು ಸಮಸ್ಯೆ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಚಿವರು, ಈ ಎಲ್ಲ ದಾಖಲೆಗಳನ್ನು ಹೊಂದಿರುವುದು ನನ್ನ ಗಮನಕ್ಕಿರಲಿಲ್ಲ. ಇದೇ ಆಧಾರದ ಮೇಲೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದು ಭರವಸೆ ನೀಡಿದರು. ಪರಿಶಿಷ್ಟ ಪಂಗಡದವರ ಸಮಸ್ಯೆಗಳನ್ನು ಹೇಳಿಕೊಳ್ಳುವುದು ಯಾರಲ್ಲಿ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತಿದೆ. ಇಲಾಖೆಗೆ ಪ್ರತ್ಯೇಕ ಸಚಿವರಿಲ್ಲ. ಮುಖ್ಯಮಂತ್ರಿಗಳೇ ಖಾತೆಯನ್ನು ಹೊಂದಿದ್ದು, ನಮಗೆ ಬೇಕಾದಾಗ ಅವರನ್ನು ಭೇಟಿ ಮಾಡಿ ಸಮಸ್ಯೆ ಹೇಳಿಕೊಳ್ಳಲು ಆಗುವುದಿಲ್ಲ ಎಂದು ಶಾಂತಾರಾಮ ಸಿದ್ದಿ ಅಸಮಾಧಾನ ವ್ಯಕ್ತಪಡಿಸಿದರು.