ಯಲ್ಲಾಪುರ ಪಪಂ ಸಾಮಾನ್ಯ ಸಭೆಯಲ್ಲಿ ಗ್ರಾಮದೇವಿ ಜಾತ್ರೆಯದ್ದೇ ಸದ್ದು

| Published : May 17 2025, 01:19 AM IST

ಯಲ್ಲಾಪುರ ಪಪಂ ಸಾಮಾನ್ಯ ಸಭೆಯಲ್ಲಿ ಗ್ರಾಮದೇವಿ ಜಾತ್ರೆಯದ್ದೇ ಸದ್ದು
Share this Article
  • FB
  • TW
  • Linkdin
  • Email

ಸಾರಾಂಶ

ಜಾತ್ರೆಯ ಲೆಕ್ಕದ ವಿವರದ ಕುರಿತು ಹಿಂದಿನ ಸಭೆಯಲ್ಲಿ ಚರ್ಚೆಯೇ ನಡೆಯದ ವಿಷಯಗಳನ್ನು ಠರಾವಿನಲ್ಲಿ ಸೇರಿಸಿದ ಕುರಿತು ಸದಸ್ಯ ರಾಧಾಕೃಷ್ಣ ನಾಯ್ಕ ಆಕ್ಷೇಪ ವ್ಯಕ್ತಪಡಿಸಿದರು.

ಯಲ್ಲಾಪುರ: ಇಲ್ಲಿನ ಪಟ್ಟಣ ಪಂಚಾಯಿತಿ ಸಭಾಭವನದಲ್ಲಿ ಮೇ ೧೬ ರಂದು ನಡೆದ ಸಾಮಾನ್ಯ ಸಭೆಯಲ್ಲೂ ಹಿಂದಿನ ಯಲ್ಲಾಪುರ ಗ್ರಾಮದೇವಿ ಜಾತ್ರೆಯ ಖರ್ಚು ವೆಚ್ಚದ ಕುರಿತಾದ ಚರ್ಚೆಯೇ ಹೆಚ್ಚಿನ ಮಹತ್ವ ಪಡೆಯಿತೇ ವಿನಃ ಉಳಿದ ವಿಷಯದ ಚರ್ಚೆ ವಿಶೇಷವಾಗಿ ಲೆಕ್ಕಕ್ಕೆ ಬಾರದೇ ಹೋಯಿತು.

ಜಾತ್ರೆಯ ಲೆಕ್ಕದ ವಿವರದ ಕುರಿತು ಹಿಂದಿನ ಸಭೆಯಲ್ಲಿ ಚರ್ಚೆಯೇ ನಡೆಯದ ವಿಷಯಗಳನ್ನು ಠರಾವಿನಲ್ಲಿ ಸೇರಿಸಿದ ಕುರಿತು ಸದಸ್ಯ ರಾಧಾಕೃಷ್ಣ ನಾಯ್ಕ ಆಕ್ಷೇಪ ವ್ಯಕ್ತಪಡಿಸಿದರು. ಜಾತ್ರೆಯಲ್ಲಿ ೧೫ ಅಂಗಡಿ ಜಾಗಗಳನ್ನು ಒಬ್ಬರಿಗೇ ನೀಡುವಂತೆ ಅಧ್ಯಕ್ಷರು ಹೇಳಿದ್ದರು ಎಂಬ ಮಾತನ್ನು ಸಭೆಯಲ್ಲಿ ನಾನು ಹೇಳಿಯೇ ಇಲ್ಲ. ಹರಾಜು ಇಲ್ಲದೇ ಹಾಗೆ ಒಬ್ಬರಿಗೇ ನೀಡಲು ಸಾಧ್ಯವೂ ಇಲ್ಲ. ಪ್ರಸ್ತಾಪವೇ ಆಗದ ವಿಚಾರವನ್ನು ಠರಾವಿನಲ್ಲಿ ಹೇಗೆ ಸೇರಿಸುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಪಂ ಸಿಬ್ಬಂದಿ ಸಮಜಾಯಿಷಿ ನೀಡುವ ಯತ್ನ ನಡೆಸಿದರೂ ಅದು ಸಾಧ್ಯವಾಗಲಿಲ್ಲ. ಜಾತ್ರೆಯ ಸಂದರ್ಭದಲ್ಲಿ ಯಾವ ಸಿಬ್ಬಂದಿ ಏನೇನು ಕೆಲಸ ಮಾಡಿದ್ದೀರಿ ಎಂದು ಸದಸ್ಯರು ಪ್ರಶ್ನಿಸಿದರು. ಅದಕ್ಕೆ ಉತ್ತರಿಸುವಾಗ ಸಿಬ್ಬಂದಿ ನಾಗರತ್ನಾ ನಾಯ್ಕ, ಪೂರ್ವಭಾವಿ ಸಭೆ, ಹರಾಜು ಪ್ರಕ್ರಿಯೆಯ ದಾಖಲೆಗಳು ಇರುವ ಪೆನ್ ಡ್ರೈವನ್ನು ಜಾತ್ರೆಯ ನಂತರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯ ಸೋಮು ನಾಯ್ಕಗೆ ನೀಡಿರುವುದಾಗಿ ತಿಳಿಸಿದರು. ಇದನ್ನು ಪ್ರತಿಕ್ರಿಯಿಸಿದ ಸೋಮು ನಾಯ್ಕ, ಜಾತ್ರೆಗೆ ಸಂಬಂಧಿಸಿದ ಯಾವ ಪೆನ್ ಡ್ರೈವನ್ನೂ ನನಗೆ ನೀಡಿಲ್ಲ. ಸಭೆಯಲ್ಲೇ ಪೆನ್ ಡ್ರೈವ್ ನೀಡಿರುವುದಾದಲ್ಲಿ ಉಪಸ್ಥಿತರಿದ್ದ ಸದಸ್ಯರಿಗೆಲ್ಲ ಈ ವಿಷಯ ತಿಳಿಯಬೇಕಿತ್ತು. ಯಾರಿಗೂ ತಿಳಿದಿಲ್ಲ ಎಂದು ಪೆನ್ ಡ್ರೈವ್ ಪಡೆದಿರುವುದನ್ನು ನಿರಾಕರಿಸಿದರು. ಅದಕ್ಕೆ ನಾಗರತ್ನಾ ನಾಯ್ಕ ಪುನಃ ಉತ್ತರಿಸುವಲ್ಲಿ ವಿಫಲರಾದರು.

ಸರ್ಕಾರಿ ಕಡತವನ್ನು ಸದಸ್ಯರ ಕೈಗೆ ನೀಡಲು ಅವಕಾಶವಿದೆಯೇ ಎಂದು ರಾಧಾಕೃಷ್ಣ ನಾಯ್ಕ ಪ್ರಶ್ನಿಸಿದರು. ಹರಾಜು ಪ್ರಕ್ರಿಯೆ ಚಿತ್ರೀಕರಣ ಮಾಡಿದವರಿಂದ ಮೂರು ಪೆನ್ ಡ್ರೈವ್ ಪಡೆಯಲಾಗಿದೆ. ಆ ಪೆನ್ ಡ್ರೈವ್‌ಗಳು ಎಲ್ಲಿ ಹೋಯಿತೆಂದು ಸೋಮು ನಾಯ್ಕ ಕೇಳಿದರು. ಕೊನೆಗೂ ಇತ್ಯರ್ಥವಾಗದೇ ಪೆನ್ ಡ್ರೈವ್ ಪ್ರಕರಣಕ್ಕೆ ತೆರೆ ಬಿದ್ದಿತು.

ಮುಖ್ಯಾಧಿಕಾರಿ ಕುಮಾರ ನಾಯ್ಕ ಮಾತನಾಡಿ, ಜಾತ್ರೆಗೆ ಸಂಬಂಧಿಸಿದಂತೆ ಎಲ್ಲ ಸಿಬ್ಬಂದಿ ಸರಿಯಾದ ಮಾಹಿತಿ ನೀಡಬೇಕು. ನುಣುಚಿಕೊಳ್ಳಲು ಯತ್ನಿಸಿದರೆ ತನಿಖೆ ನಡೆಸುವುದು ಅನಿವಾರ್ಯ. ಆಗ ಕೈಗೊಳ್ಳುವ ಕ್ರಮಕ್ಕೆ ಯಾರೂ ಹೊಣೆಯಲ್ಲ ಎಂದು ಸಿಬ್ಬಂದಿಗೆ ಎಚ್ಚರಿಸಿದರು.

ಜಾತ್ರೆಯ ಹರಾಜು ಪ್ರಕ್ರಿಯೆಯ ₹೧೩ ಲಕ್ಷ ಅವ್ಯವಹಾರದ ಬಗ್ಗೆ ಸಿಬ್ಬಂದಿ ಬೇಕಾದಲ್ಲಿ ಅವಕಾಶ ಸರಿಯಾದ ಮಾಹಿತಿ ನೀಡಬೇಕು. ಇಲ್ಲವಾದಲ್ಲಿ ತನಿಖೆಯ ಮೂಲಕವೇ ಸತ್ಯ ಹೊರಬರುವಂತೆ ಮಾಡೋಣ ಎಂದು ಸೋಮು ನಾಯ್ಕ ತಿಳಿಸಿದರು.

ಅಧ್ಯಕ್ಷೆ ನರ್ಮದಾ ನಾಯ್ಕ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉಪಾಧ್ಯಕ್ಷ ಅಮಿತ್ ಅಂಗಡಿ, ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಅಲಿ, ಸದಸ್ಯರು, ಸಿಬ್ಬಂದಿ ಭಾಗವಹಿಸಿದ್ದರು.