ಸಾರಾಂಶ
ಮಂಗಳೂರು: ಕರಾವಳಿಯಲ್ಲಿ ಮುಂಗಾರು ಮಳೆ ಮುಂದುವರಿದಿದ್ದು, ಮಂಗಳವಾರ ಅಪರಾಹ್ನ ಮಳೆ ಬಿರುಸು ಪಡೆದುಕೊಂಡಿದೆ. ಇದೇ ವೇಳೆ ಜೂ.12ರಿಂದ 14ರ ವರೆಗೆ ಮೂರು ದಿನಗಳ ಕಾಲ ಕರಾವಳಿಯಲ್ಲಿ ಯೆಲ್ಲೋ ಅಲರ್ಟ್‌ನ್ನು ಭಾರತೀಯ ಹವಾಮಾನ ಇಲಾಖೆ ಘೋಷಿಸಿದೆ.
ದ.ಕ.ಜಿಲ್ಲೆಯಲ್ಲಿ ಮಂಗಳವಾರ ನಸುಕಿನ ಜಾವ ಸಾಧಾರಣ ಮಳೆಯಾಗಿದೆ. ಬಳಿಕ ಮಧ್ಯಾಹ್ನ ವರೆಗೆ ಅಲ್ಲಲ್ಲಿ ತುಂತುರು ಮಳೆಯಾಗಿದ್ದು ಬಿಟ್ಟರೆ ಇಡೀ ದಿನ ಮೋಡ ಕವಿದ ವಾತಾವರಣ, ಬಿಸಿಲು ಕಂಡುಬಂದಿದೆ. ಅಪರಾಹ್ನ ಜಿಲ್ಲೆಯಾದ್ಯಂತ ಮಳೆ ಕಾಣಿಸಿದ್ದು, ರಾತ್ರಿಯೂ ಮುಂದುವರಿದಿದೆ. ಉಳ್ಳಾಲ ಗರಿಷ್ಠ ಮಳೆ: ದ.ಕ.ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗಿನ ವರೆಗೆ ಉಳ್ಳಾಲದಲ್ಲಿ ಗರಿಷ್ಠ 86.3 ಮಿಲಿ ಮೀಟರ್ ಮಳೆ ದಾಖಲಾಗಿದೆ. ಜಿಲ್ಲೆಯ ದಿನದ ಸರಾಸರಿ ಮಳೆ 35.9 ಮಿ.ಮೀ. ಆಗಿದೆ.ಬೆಳ್ತಂಗಡಿ 23.5 ಮಿ.ಮೀ, ಬಂಟ್ವಾಳ 22.5 ಮಿ.ಮೀ, ಮಂಗಳೂರು 44.6 ಮಿ.ಮೀ, ಪುತ್ತೂರು 36.8 ಮಿ.ಮೀ, ಸುಳ್ಯ 43.4 ಮಿ.ಮೀ, ಮೂಡುಬಿದಿರೆ 36.1 ಮಿ.ಮೀ, ಕಡಬ 31.2 ಮಿ.ಮೀ. ಮೂಲ್ಕಿ 50 ಮಿ.ಮೀ. ಮಳೆ ದಾಖಲಾಗಿದೆ.
ಉಡುಪಿ ಜಿಲ್ಲೆಯಲ್ಲಿ ಮಂಗಳವಾರವೂ ಉತ್ತಮ ಮಳೆಯಾಗಿದೆ. ದಿನವಿಡೀ ಮೋಡ ಕವಿದ ವಾತಾವರಣದ ನಡುವೆ ಆಗಾಗ್ಗೆ ಬಿರುಸಿನ ಮಳೆ ಸುರಿದಿದೆ. ಗಾಳಿ ಮಳೆಯಿಂದ ಜಿಲ್ಲೆಯಲ್ಲಿ ಸುಮಾರು 8 ಮನೆಗಳಿಗೆ ಹಾನಿಯಾಗಿದೆ.ಇನ್ನೂ ಎರಡು ದಿನ ಭಾರಿ ಮಳೆಯಾಗುವ ಮುನ್ನೆಚ್ಚರಿಕೆಯ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಇಂದು ಮತ್ತು ನಾಳೆ ಕರಾವಳಿಯಲ್ಲಿ 64 ಮಿ.ಮೀ.ಯಿಂದ 114 ಮಿ.ಮೀ.ನಷ್ಟು ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಜಿಲ್ಲೆಯ ನದಿಗಳು ತುಂಬಿದ್ದು, ರೈತರು ಕೃಷಿ ಕಾರ್ಯದಲ್ಲಿ ತೊಡಗಿದ್ದಾರೆ. ಕುಂದಾಪುರ, ಬೈಂದೂರು ಭಾಗಗಳಲ್ಲಿ ಬಿತ್ತನೆ ಕಾರ್ಯ ಕೂಡ ಆರಂಭವಾಗಿದೆ.ಸೋಮವಾರದ ಮಳೆಗೆ ಕುಂದಾಪುರ ತಾಲೂಕಿನ ಬೇಳೂರು ಗ್ರಾಮದ ಶಂಕರ ರಾಮ ದೇವಾಡಿಗ ಅವರ ಮನೆಗೆ 45,000 ರು., ಬಸ್ರೂರು ಗ್ರಾಮದ ಚಂದ್ರಕಲಾ ಕಿಣಿ ಅವರ ಮನೆಗೆ 25,000 ರು., ಕಾವ್ರಡಿ ಗ್ರಾಮದ ಸಲಿಮಾಬಿ ಅವರ ಮನೆಗೆ 25,000 ರು., ಕಾರ್ಕಳ ತಾಲೂಕಿನ ಕಡ್ತಲ ಗ್ರಾಮದ ಸುಶೀಲ ನಾಯ್ಕ್ ಅವರ ಮನೆಗೆ ಸಿಡಿಲು ಬಡಿದು 10,000 ರು., ಕಾಪುತಾಲೂಕಿನ ನಡ್ಸಾಲು ಗ್ರಾಮದ ನಜೀರ್ ಅವರ ಮನೆಯ ಮೇಲೆ ಮರ ಬಿದ್ದು 25,000 ರು., ಬ್ರಹ್ಮಾವರ ತಾಲೂಕಿನ ಕುಮೃಗೋಡು ಗ್ರಾಮದ ಅಮೃತ ಕಲಾ ರೈ ಅವರ ಮನೆಗೆ 45,000 ರು., ಹಿಲಿಯಾಣ ಗ್ರಾಮದ ಶಾಮಿಮ್ ಬಾನು ಅವರ ಮನೆಯ ಮೇಲೆ ಮರ ಬಿದ್ದು 8,000 ರು., ನಾಲ್ಕೂರು ಗ್ರಾಮದ ಪಾಂಡು ನಾಯ್ಕ ಅವರ ಮನೆಗೆ ಸಿಡಿಲು ಬಡಿದು 40,000 ರು. ನಷ್ಟ ಸಂಭವಿಸಿದೆ.ಸೋಮವಾರ ರಾತ್ರಿ ಉಡುಪಿ ಜಿಲ್ಲಾದ್ಯಂತ ಸರಾಸರಿ 35.50 ಮಿ.ಮೀ. ಮಳೆಯಾಗಿದೆ. ತಾಲೂಕುವಾರು ಕಾರ್ಕಳ 37.60, ಕುಂದಾಪುರ 39.40, ಉಡುಪಿ 35.20, ಬೈಂದೂರು 19.50, ಬ್ರಹ್ಮಾವರ 50.50, ಕಾಪು 51.90, ಹೆಬ್ರಿ 23.90 ಮಿ.ಮೀ. ಮಳೆಯಾಗಿದೆ.