ಹೆಸರು ಬೆಳೆಗೆ ಬಾಧಿಸಿದ ಹಳದಿ ರೋಗ

| Published : Jul 03 2025, 11:48 PM IST

ಸಾರಾಂಶ

ಉತ್ತಮ ಮುಂಗಾರು ಪೂರ್ವ ಮಳೆ ಸುರಿದ್ದರಿಂದ ತಾಲೂಕಿನಲ್ಲಿ ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬಿತ್ತನೆ ಮಾಡಲಾಗಿದೆ. ಇದೀಗ ಮಳೆ ಕೊರತೆಯಿಂದ ಬೆಳೆ ಬಾಡುತ್ತಿದೆ. ಮತ್ತೊಂದೆಡೆ ಇರುವ ಅಲ್ಪಸಲ್ಪ ಬೆಳೆಗೂ ಹಳದಿ ರೋಗ ಕಾಣಿಸಿಕೊಂಡಿದೆ.

ಪರಶಿವಮೂರ್ತಿ ದೋಟಿಹಾಳ

ಕುಷ್ಟಗಿ:

ಹೆಸರು ಬೆಳೆಗೆ ಒಂದೆಡೆ ಮಳೆ ಕೊರತೆ ಮತ್ತೊಂದೆಡೆ ಹಳದಿ ರೋಗ (ನಂಜಾಣು) ಕಾಣಿಸಿಕೊಂಡಿದ್ದು ರೈತ ಸಮುದಾಯದಲ್ಲಿ ಆತಂಕ ಮೂಡಿಸಿದೆ.ಮುಂಗಾರು ಹಂಗಾಮಿಗೆ ತಾಲೂಕಿನ ದೋಟಿಹಾಳ, ಹಿರೇಮನ್ನಾಪೂರು, ಬಿಜಕಲ್, ಜುಮಲಾಪೂರು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಹೆಸರು ಬಿತ್ತನೆಯಾಗಿದೆ. ಈ ವೇಳೆಗೆ ಹವಾಮಾನ ವೈಪರೀತ್ಯ ತಡೆದುಕೊಳ್ಳುವ ಸಾಮರ್ಥ್ಯ ಕಡಿಮೆ ಇರುತ್ತದೆ. ಹೀಗಿರುವಾಗ ಹಳದಿ ರೋಗ ಕಾಣಿಸಿಕೊಂಡಿರುವುದು ರೈತರ ಆತಂಕ ಹೆಚ್ಚಿಸಿದೆ.

ಮಳೆ ಕೊರತೆ:

ಉತ್ತಮ ಮುಂಗಾರು ಪೂರ್ವ ಮಳೆ ಸುರಿದ್ದರಿಂದ ತಾಲೂಕಿನಲ್ಲಿ ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬಿತ್ತನೆ ಮಾಡಲಾಗಿದೆ. ಇದೀಗ ಮಳೆ ಕೊರತೆಯಿಂದ ಬೆಳೆ ಬಾಡುತ್ತಿದೆ. ಮತ್ತೊಂದೆಡೆ ಇರುವ ಅಲ್ಪಸಲ್ಪ ಬೆಳೆಗೂ ಹಳದಿ ರೋಗ ಕಾಣಿಸಿಕೊಂಡಿದೆ. ಇದು ರೈತರಿಗೆ ಗಾಯ ಮೇಲೆ ಬರೆ ಎಳೆದಂತೆ ಆಗಿದೆ. ಆರಂಭದಲ್ಲಿ ಹೊಲದ ಕೆಲ ಭಾಗದಲ್ಲಷ್ಟೇ ಕಾಣಿಸಿಕೊಳ್ಳುವ ಈ ರೋಗ ಆನಂತರ ಇಡೀ ಹೊಲಕ್ಕೆ ವ್ಯಾಪಿಸುತ್ತಿದೆ. ವೈರಸ್ ಮೂಲದ ರೋಗ ಇದಾಗಿದ್ದು, ವೈರಸ್‌ಗಳು ಗಾಳಿಯಲ್ಲಿ ಹಾರುವುದರಿಂದ ಪಕ್ಕದ ಹೊಲಗಳಿಗೂ ಬಾಧಿಸುತ್ತಿದೆ. ಕೆಲ ಹೊಲಗಳಲ್ಲಿ ಮೊಗ್ಗು ಮತ್ತು ಕುಡಿಗೆ ಕರಿಶೀರುಗಳು ಮೆತ್ತಿರುವುದು ಕಂಡುಬಂದಿದೆ. ಕರಿಶೀರುಗಳು ರಸ ಹೀರುವುದರಿಂದ ಬಳ್ಳಿಯ ಬೆಳವಣಿಗೆ ಕುಂಠಿತವಾಗಿ ಇಳುವರಿ ಕಡಿಮೆಯಾಗುತ್ತಿದೆ.

ನಿಯಂತ್ರಣಕ್ಕೆ ಕ್ರಮ:

ರೋಗಕ್ಕೆ ತುತ್ತಾದ ಬೆಳೆಯನ್ನು ಪ್ರಾರಂಭ ಹಂತದಲ್ಲಿಯೇ ಗುರುತಿಸಿ ಕಿತ್ತು ಮಣ್ಣಿನಲ್ಲಿ ಹೂಳಬೇಕು. ರೋಗಪೀಡಿತ ಗಿಡ ಕಿತ್ತು ಸುಟ್ಟು ಹಾಕುವುದರಿಂದ ರೋಗದ ಸೋಂಕು ಕಡಿಮೆಯಾಗುತ್ತದೆ. ಬಿತ್ತಿದ 3ರಿಂದ 4 ವಾರಗಳ ನಂತರ ಡೈಪೆಂಧೂರಾನ್ 50 ಡಬ್ಲ್ಯೂಪಿ 1 ಗ್ರಾಂ./ಲೀ ಅಥವಾ ಬೇವಿನ ಕಷಾಯ 5 ಮಿ.ಲೀ/1ಲೀ ನೀರಿನಲ್ಲಿ ಬೆರೆಸಿ 7 ದಿನಗಳ ಅಂತರದಲ್ಲಿ ಸಿಂಪಡಿಸುವುದು ಸೂಕ್ತ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.ರೈತರ ಅಳಲು

ಹೆಸರು ಬೆಳೆ ಉತ್ತಮವಾಗಿ ಬೆಳೆದಿದ್ದು ಈ ಬಾರಿ ಹೆಚ್ಚು ಇಳುವರಿ ಬರಲಿದೆ ಎಂದು ನಿರೀಕ್ಷೆ ಇಟ್ಟುಕೊಂಡಿದ್ದೇವು. ಬಳಿಕ ಸಕಾಲಕ್ಕೆ ಮಳೆಯಾಗಲಿಲ್ಲ. ಇದೀಗ ಇರುವ ಬೆಳೆಗೂ ಹಳದಿ ರೋಗ ಬಾಧಿಸಿದೆ. ಹೀಗಾಗಿ ಬಿತ್ತನೆ ಮಾಡಿದ ಖರ್ಚು ಬರುತ್ತದೆಯೋ ಇಲ್ಲವೋ ಎಂಬ ಆತಂಕ ಶುರುವಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.ಹೆಸರು ಬೆಳೆಗೆ ಹಳದಿ ರೋಗ ಕಾಣಿಸಿಕೊಂಡಲ್ಲಿ ಅಂತಹ ಗಿಡಗಳನ್ನು ಸುಟ್ಟು ಹಾಕಬೇಕು. ಇದು ವೈರಸ್‌ನಿಂದ ಬರುತ್ತಿದ್ದು ಡೈಫೆಂಥಿಯುರಾನ್ ಅನ್ನು ಪ್ರತಿ ಲೀಟರ್ ನೀರಿಗೆ 1 ಗ್ರಾಂನಂತೆ ಸೇರಿಸುವ ಮೂಲಕ ಸಿಂಪಡಣೆ ಮಾಡಿ ಹಳದಿ ರೋಗ ನಿಯಂತ್ರಿಸಬಹುದು.

ನಾಗರಾಜ ಕಾತರಕಿ ಸಹಾಯಕ ನಿರ್ದೇಶಕ ಕೃಷಿ ಇಲಾಖೆ ಕುಷ್ಟಗಿ