18ರೊಳಗೆ ನಗರಕ್ಕೆ ಹಳದಿ ಮಾರ್ಗದ ಡ್ರೈವರ್‌ಲೆಸ್‌ ಮೆಟ್ರೋ: 4 ತಿಂಗಳ ಪರೀಕ್ಷೆ

| Published : Feb 07 2024, 01:47 AM IST

ಸಾರಾಂಶ

ನಮ್ಮ ಮೆಟ್ರೋ ಆರ್‌.ವಿ.ರಸ್ತೆ-ಬೊಮ್ಮಸಂದ್ರ ನಡುವಿನ ಹಳದಿ ಮಾರ್ಗಕ್ಕಾಗಿ ಚೀನಾದಿಂದ ಹೊರಟಿದ್ದ ಮೊದಲ ಚಾಲಕ ರಹಿತ ರೈಲು ಚೆನ್ನೈ ಬಂದರು ತಲುಪಿದ್ದು, ಫೆ.18ರೊಳಗೆ ಎಲೆಕ್ಟ್ರಾನಿಕ್‌ ಸಿಟಿಯ ಹೆಬ್ಬಗೋಡಿ ಡಿಪೋ ತಲುಪುವ ನಿರೀಕ್ಷೆಯಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಮ್ಮ ಮೆಟ್ರೋ ಆರ್‌.ವಿ.ರಸ್ತೆ-ಬೊಮ್ಮಸಂದ್ರ (19 ಕಿ.ಮೀ.) ನಡುವಿನ ಹಳದಿ ಮಾರ್ಗಕ್ಕಾಗಿ ಚೀನಾದಿಂದ ಹೊರಟಿದ್ದ ಮೊದಲ ಚಾಲಕ ರಹಿತ ರೈಲು ಚೆನ್ನೈ ಬಂದರು ತಲುಪಿದ್ದು, ಫೆ.18ರೊಳಗೆ ಎಲೆಕ್ಟ್ರಾನಿಕ್‌ ಸಿಟಿಯ ಹೆಬ್ಬಗೋಡಿ ಡಿಪೋ ತಲುಪುವ ನಿರೀಕ್ಷೆಯಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

ಗುರುವಾರ ರೈಲಿನ ಅನ್‌ಲೋಡಿಂಗ್‌ ಕಾರ್ಯ ಆರಂಭವಾಗಲಿದ್ದು, ಕಸ್ಟಮ್ಸ್‌ ಕ್ಲಿಯರೆನ್ಸ್‌ ಬಳಿಕ ಬೆಂಗಳೂರಿಗೆ ರಸ್ತೆ ಮಾರ್ಗವಾಗಿ ಬರಲಿದೆ. ರಾತ್ರಿ ವೇಳೆ ಮಾತ್ರ ಸಂಚಾರಕ್ಕೆ ಅನುಮತಿ ಇರುವುದರಿಂದ ಬೆಂಗಳೂರಿಗೆ ಬರಲು 10-12 ದಿನ ಬೇಕಾಗಬಹುದು ಎಂದು ಮೆಟ್ರೋ ಅಧಿಕಾರಿಗಳು ಹೇಳಿದರು.

ಹೆಬ್ಬಗೋಡಿಯಲ್ಲಿ ಜೋಡಣೆ:

ಹೊಸ ಮಾದರಿಯ ಬೋಗಿಯಾಗಿರುವ ಹಿನ್ನೆಲೆಯಲ್ಲಿ ಮೈನ್‌ಲೈನ್‌ಗೆ ತಂದು 15 ಬಗೆಯ ಪರೀಕ್ಷೆ ಮಾಡಲಾಗುವುದು. ಸುಮಾರು ನಾಲ್ಕು ತಿಂಗಳು ಟ್ರ್ಯಾಕ್‌, ಸಿಗ್ನಲ್‌, ಎಲೆಕ್ಟ್ರಿಕಲ್‌ ಸರ್ಕ್ಯೂಟ್‌ ಸೇರಿದಂತೆ ರೈಲಿನ ವೇಗ, ತಿರುವಿನ ವೇಗ, ನಿಲ್ಲುವ ಹಂತದ ವೇಗ ಸೇರಿ 37ಕ್ಕೂ ಹೆಚ್ಚಿನ ಬಗೆಯ ಪರೀಕ್ಷೆಗಳು ನಡೆಯಲಿವೆ. ಸುಮಾರು 45 ದಿನಗಳ ಪ್ರಾಯೋಗಿಕ ಸಂಚಾರ ನಡೆಸಲಾಗುವುದು.

ರೈಲ್ವೆ ಸುರಕ್ಷತಾ ಮುಖ್ಯ ಆಯುಕ್ತರು ಹಾಗೂ ರೈಲ್ವೆ ಬೋರ್ಡ್‌ನಿಂದ ಒಪ್ಪಿಗೆ ಪಡೆದು ಆರ್‌ಡಿಎಸ್‌ಒ (ರಿಸರ್ಚ್‌ ಡಿಸೈನ್‌ ಆ್ಯಂಡ್‌ ಸ್ಟ್ಯಾಂಡರ್ಡ್‌ ಆರ್ಗನೈಸೇಶನ್‌) ಪ್ರಾಯೋಗಿಕ ಚಾಲನೆ ನಡೆಸಲಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.

ಆರು ಬೋಗಿಯ 15 ರೈಲುಗಳನ್ನು ಹಳದಿ ಮಾರ್ಗಕ್ಕಾಗಿ ಮೀಸಲಿಡಲು ತೀರ್ಮಾನಿಸಲಾಗಿದೆ. ಈ ಮಾರ್ಗದಲ್ಲಿ ಪೂರ್ಣ ಪ್ರಮಾಣದ ವಾಣಿಜ್ಯ ಸಂಚಾರಕ್ಕೆ ಕನಿಷ್ಠ ಎಂಟು ರೈಲುಗಳ ಅಗತ್ಯವಿದೆ. ಹೆಚ್ಚುವರಿ ರೈಲುಗಳ ಅಗತ್ಯವೂ ಇರುವುದರಿಂದ ಈ ಮಾರ್ಗ ಜನಸಂಚಾರ ಆರಂಭಕ್ಕೆ ಹೆಚ್ಚು ಸಮಯ ತಗುಲಲಿದೆ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

ಇನ್ನೊಂದು ಮೂಲ ಮಾದರಿಯ ರೈಲು ಚೀನಾದಿಂದ ಸಿಆರ್‌ಆರ್‌ಸಿ ಕಂಪನಿಯಿಂದ ಬರಬೇಕಿದೆ. ಅದಾದ ಬಳಿಕ ತೀತಾಘರ್‌ ರೈಲ್‌ ಫ್ಯಾಕ್ಟರಿ ಉಳಿದ 204 ರೈಲು ಬೋಗಿಗಳನ್ನು ರೂಪಿಸಿಕೊಡಲಿದೆ. 21 ರೈಲುಗಳನ್ನು ನೇರಳೆ ಹಾಗೂ ಹಸಿರು ಮಾರ್ಗಕ್ಕೆ ಮೀಸಲಿಡಲಾಗುವುದು. ಈ ರೈಲುಗಳ ವಿಳಂಬದ ಕಾರಣದಿಂದಲೆ ನೇರಳೆ, ಹಸಿರು ಮಾರ್ಗದಲ್ಲಿ ಜನದಟ್ಟಣೆ ಉಂಟಾಗುತ್ತಿದೆ. ಜೊತೆಗೆ ಹಸಿರು ಮಾರ್ಗದ ವಿಸ್ತರಣೆ ನಾಗಸಂದ್ರ-ಬಿಐಇಸಿ ನಡುವಣ ರೈಲು ಸಂಚಾರವೂ ವಿಳಂಬವಾಗಿದೆ ಎಂದು ಮೆಟ್ರೋ ಮೂಲಗಳು ತಿಳಿಸಿವೆ.