ಸಾರಾಂಶ
ಎಲೆಕ್ಟ್ರಾನಿಕ್ ಸಿಟಿ ಸಂಪರ್ಕಿಸುವ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಜನವರಿ ಎರಡನೇ ವಾರದಿಂದ ವಾಣಿಜ್ಯ ಸಂಚಾರ ಆರಂಭಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ಸಿದ್ಧತೆ ಮಾಡಿಕೊಂಡಿದೆ. ಆದರೆ, ಕೇವಲ ಮೂರು ರೈಲುಗಳಿರುವ ಹಿನ್ನೆಲೆಯಲ್ಲಿ ಪ್ರಮುಖವಾದ ಕೆಲವು ನಿಲ್ದಾಣಗಳಲ್ಲಿ ಮಾತ್ರ ನಿಲುಗಡೆ ಮಾಡುವ ಚಿಂತನೆ ನಡೆದಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಎಲೆಕ್ಟ್ರಾನಿಕ್ ಸಿಟಿ ಸಂಪರ್ಕಿಸುವ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಜನವರಿ ಎರಡನೇ ವಾರದಿಂದ ವಾಣಿಜ್ಯ ಸಂಚಾರ ಆರಂಭಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ಸಿದ್ಧತೆ ಮಾಡಿಕೊಂಡಿದೆ. ಆದರೆ, ಕೇವಲ ಮೂರು ರೈಲುಗಳಿರುವ ಹಿನ್ನೆಲೆಯಲ್ಲಿ ಪ್ರಮುಖವಾದ ಕೆಲವು ನಿಲ್ದಾಣಗಳಲ್ಲಿ ಮಾತ್ರ ನಿಲುಗಡೆ ಮಾಡುವ ಚಿಂತನೆ ನಡೆದಿದೆ.ಆರ್.ವಿ.ರಸ್ತೆ- ಬೊಮ್ಮಸಂದ್ರ ನಡುವಿನ 19 ಕಿ.ಮೀ ಉದ್ದದ ಈ ಮಾರ್ಗದಲ್ಲಿ 16 ನಿಲ್ದಾಣಗಳಿವೆ. ವಾಣಿಜ್ಯ ಸಂಚಾರ ಆರಂಭಕ್ಕೆ ಕನಿಷ್ಠ 8 ರೈಲುಗಳ ಅಗತ್ಯವಿದೆ. ಆದರೆ. ರೈಲುಗಳ ಕೊರತೆ ಕಾರಣದಿಂದ ಆರಂಭದಲ್ಲಿ ಮೂರು ರೈಲುಗಳೊಂದಿಗೆ ವಾಣಿಜ್ಯ ಸಂಚಾರ ಆರಂಭಿಸಲು ನಿರ್ಧರಿಸಲಾಗಿದೆ. ಎಲ್ಲ ನಿಲ್ದಾಣದಲ್ಲಿ ನಿಲುಗಡೆ ಮಾಡಿದರೆ ಇನ್ನಷ್ಟು ವಿಳಂಬವಾಗಲಿದೆ. ಹೀಗಾಗಿ ಮೊದಲ ಹಂತದಲ್ಲಿ ಎಲ್ಲ ನಿಲ್ದಾಣಗಳಲ್ಲೂ ನಿಲುಗಡೆ ಮಾಡದೆ ಪ್ರಮುಖ ನಿಲ್ದಾಣಗಳಲ್ಲಿ ಮಾತ್ರ ನಿಲ್ಲಿಸಲು ಚರ್ಚೆ ನಡೆದಿದೆ.
ಈ ಪೈಕಿ ಟರ್ಮಿನಲ್ ನಿಲ್ದಾಣಗಳಾದ ಆರ್.ವಿ.ರಸ್ತೆ ಹಾಗೂ ಬೊಮ್ಮಸಂದ್ರ ಸೇರಿ ಇನ್ಫೋಸಿಸ್ ಫೌಂಡೇಶನ್ ಕೋಣಪ್ಪನ ಅಗ್ರಹಾರ, ಸೆಂಟ್ರಲ್ ಸಿಲ್ಕ್ ಬೋರ್ಡ್, ಬಿಟಿಎಂ ಲೇಔಟ್, ಜಯದೇವ ಹಾಸ್ಪಿಟಲ್ ನಿಲ್ದಾಣಗಳಲ್ಲಿ ರೈಲುಗಳನ್ನು ನಿಲ್ಲಿಸುವ ಬಗ್ಗೆ ಸಂಚಾರ ನಿರ್ವಹಣಾ ತಂಡ ಚಿಂತನೆ ನಡೆಸಿದೆ. ಇದರಿಂದ 30 ನಿಮಿಷಕ್ಕೆ ಒಂದರಂತೆ ರೈಲುಗಳನ್ನು ಸಂಚರಿಸಲು ಸಾಧ್ಯ. ಹಂತ ಹಂತವಾಗಿ ರೈಲು ಸೇರ್ಪಡೆ ಎಲ್ಲ ನಿಲ್ದಾಣಗಳಲ್ಲೂ ರೈಲು ನಿಲುಗಡೆ ಮಾಡಲಾಗುವುದು ಎಂದು ಬಿಎಂಆರ್‌ಸಿಎಲ್ ಮೂಲಗಳು ತಿಳಿಸಿವೆ.ಹಳದಿ ಮಾರ್ಗದಲ್ಲಿ ವಾಣಿಜ್ಯ ಸಂಚಾರಕ್ಕೆ ಡಿಸೆಂಬರ್‌ನಲ್ಲಿ ರೈಲು ಸುರಕ್ಷತಾ ಆಯುಕ್ತರಿಂದ ಹಸಿರು ನಿಶಾನೆ ಸಿಗುವ ಸಾಧ್ಯತೆಯಿದೆ. ಹೀಗಾಗಿ ಜನವರಿಯಲ್ಲಿ ವಾಣಿಜ್ಯ ಸಂಚಾರ ನಡೆಸುವ ಸಿದ್ಧತೆಯನ್ನು ಮಾಡಿಕೊಂಡಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದರು.
ಈಗಾಗಲೇ ಫೆಬ್ರವರಿಯಲ್ಲಿ ಚೀನಾದಿಂದ ಬಂದ ಚಾಲಕರಹಿತ ರೈಲಿನ ಪ್ರಯೋಗಾರ್ಥ ಸಂಚಾರ ನಡೆದಿದೆ. ನವೆಂಬರ್ ತಿಂಗಳಾಂತ್ಯಕ್ಕೆ ತೀತಾಘರ್ ರೈಲ್ ಸಿಸ್ಟಮ್ಸ್ ಲಿ. ನಿಂದ ಮೊದಲ ರೈಲು ಹಾಗೂ ಡಿಸೆಂಬರ್ ನಲ್ಲಿ ಇನ್ನೊಂದು ರೈಲು ಬರುವ ಸಾಧ್ಯತೆಯಿದೆ.