ಸಾರಾಂಶ
ಕನ್ನಡಪ್ರಭ ವಾರ್ತೆ ಆನೇಕಲ್ ಹಳದಿ ಮಾರ್ಗ ಮೆಟ್ರೋ ರೈಲು ಹಾಲಿ ಬೊಮ್ಮಸಂದ್ರದವರೆಗೆ ಇದ್ದು ಚಂದಾಪುರದಿಂದ ಅತ್ತಿಬೆಲೆ ಗಡಿಗೆ ವಿಸ್ತರಣೆಗಾಗಿ ಸದನದಲ್ಲಿ ಮಾಡಿದ ಪ್ರಸ್ತಾಪಕ್ಕೆ ಡಿಸಿಎಂ ಶಿವಕುಮಾರ್ ಅವರು ಪೂರ್ಣ ಪ್ರಮಾಣದಲ್ಲಿ ಹಸಿರು ನಿಶಾನೆ ತೋರಿದ್ದು ಕೇಂದ್ರಕ್ಕೆ ಯಥಾವತ್ ಪ್ರಸ್ತಾವನೆ ಕಳಿಸಲಾಗಿದೆ ಎಂದು ಆನೇಕಲ್ ಶಾಸಕ ಬಿ. ಶಿವಣ್ಣ ತಿಳಿಸಿದರು.ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ತಾಲೂಕಿನಲ್ಲಿ 5 ಕೈಗಾರಿಕಾ ಪ್ರದೇಶಗಳಿದ್ದು ದಿನನಿತ್ಯ ಲಕ್ಷಾಂತರ ಜನರು ಓಡಾಡುತ್ತಾರೆ. ಬನ್ನೇರುಘಟ್ಟ ಮಾರ್ಗದಲ್ಲಿ ಗೊಟ್ಟಿಗೆರೆವರೆವಿಗೂ ಮೆಟ್ರೋ ಕಾಮಗಾರಿ ನಡೆದಿದ್ದು ಅದನ್ನು ರಾಷ್ಟ್ರೀಯ ಉದ್ಯಾನವನ, ಬನ್ನೇರುಘಟ್ಟ, ಜಿಗಣಿ, ಆನೇಕಲ್ ವರೆಗೆ ವಿಸ್ತರಿಸಲು ಕೋರಲಾಗಿದೆ. ವಿಶೇಷವೆಂದರೆ ಸೂರ್ಯನಗರ ನಾಲ್ಕನೇ ಹಂತದಲ್ಲಿ ನಿರ್ಮಾಣ ಆಗಲಿರುವ ದೇಶದ ಬೃಹತ್ ಕ್ರೀಡಾಂಗಣಕ್ಕೂ ಸಂಪರ್ಕ ಕಲ್ಪಿಸಲು ಮನವಿ ಮಾಡಲಾಗಿದೆ. ಇವೆಲ್ಲಕ್ಕೂ ಬಹುತೇಕ ಅನುದಾನ ಬಿಡುಗಡೆ ಹಾಗೂ ಯೋಜನೆ ಅನುಷ್ಠಾನಕ್ಕೆ ಸಹಕಾರ ನೀಡಿದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ವಸತಿ ಸಚಿವರು ಮತ್ತು ಮಾರ್ಗದರ್ಶನ ನೀಡಿದ ಮಾಜಿ ಸಂಸದ ಡಿ.ಕೆ. ಸುರೇಶ್ ಸೇರಿದಂತೆ ಎಲ್ಲಾ ನಾಯಕರಿಗೆ ಅಭಿನಂದನೆ ಸಲ್ಲಿಸುವೆ ಎಂದರು.₹1650 ಕೋಟಿ ವೆಚ್ಚದ ಕ್ರೀಡಾಂಗಣಸೂರ್ಯನಗರ 4ನೇ ಹಂತದಲ್ಲಿ ದೇಶದಲ್ಲೇ ಅತಿ ದೊಡ್ಡ ಕ್ರೀಡಾಂಗಣ ನಿರ್ಮಿಸಲು ಸಚಿವ ಸಂಪುಟದಲ್ಲಿ ಒಪ್ಪಿಗೆ ದೊರೆತಿದ್ದು ಡಿಪಿಆರ್ ನಡೆದಿದೆ. ಸುಸಜ್ಜಿತ ಒಳಾಂಗಣ ಮತ್ತು ಹೊರಾಂಗಣ ಕ್ರೀಡಾಕೂಟಗಳನ್ನು ನಡೆಸಬಹುದಾದಂತಹ ಉತ್ತಮ ಕ್ರೀಡಾಂಗಣವನ್ನು ನಿರ್ಮಿಸಲು ಸಕಾರಾತ್ಮಕ ಒಪ್ಪಿಗೆ ದೊರೆತಿದೆ. ಕ್ರೀಡಾಪಟುಗಳು ತಂಗಲು, ತರಬೇತಿ ಪಡೆಯಲು, ಅಂತಾರಾಷ್ಟ್ರೀಯ ಕ್ರೀಡೆಗಳನ್ನು ನಡೆಸಲು ಅನುವಾಗುವಂತಹ ಸುಸಜ್ಜಿತ ಅತ್ಯಾಧುನಿಕ ಕೊಠಡಿಗಳನ್ನು ನಿರ್ಮಿಸಲು ನೀಲ ನಕ್ಷೆ ಸಿದ್ಧವಿದೆ. ಪೂರ್ಣಪ್ರಮಾಣದ ಅನುಷ್ಠಾನಕ್ಕೆ ₹1650 ಕೋಟಿ ಮೊತ್ತ ಬಿಡುಗಡೆಗೆ ಅನುಮೋದನೆ ದೊರೆತಿದ್ದು ಸಚಿವ ಸಂಪುಟಕ್ಕೆ ಅಭಿನಂದನೆ ತಿಳಿಸಿದರು. ದೊಮ್ಮಸಂದ್ರದಲ್ಲಿ 100 ಹಾಸಿಗೆ ಆಸ್ಪತ್ರೆ:ಸರ್ಜಾಪುರ ರಸ್ತೆಯ ದೊಮ್ಮಸಂದ್ರದಲ್ಲಿ 100 ಹಾಸಿಗೆ ಪ್ರಮಾಣದ ಆಸ್ಪತ್ರೆಯನ್ನು ನಿರ್ಮಿಸಲು ₹17 ಕೋಟಿ ಬಿಡುಗಡೆಯಾಗಿದ್ದು ಕಾಮಗಾರಿ ಪ್ರಗತಿಯಲ್ಲಿದೆ. ತಾಲೂಕಿನ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ ಇಎಸ್ಐ ಆಸ್ಪತ್ರೆಯ ಪ್ರಸ್ತಾವನೆಯನ್ನು ಅಂದಿನ ಪ್ರಧಾನಿ ಮನಮೋಹನ ಸಿಂಗ್ ಅವಧಿಯಲ್ಲಿ ಕೇಂದ್ರ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಲ್ಲಿಸಿದ್ದ ಪ್ರಸ್ತಾವನೆಗೆ ಮಂಜೂರಾತಿ ದೊರೆತಿದ್ದು ಅಂದಾಜು ₹215 ಕೋಟಿ ವೆಚ್ಚದ ಕಾಮಗಾರಿಯಿಂದ ಜನತೆಗೆ ವೈದ್ಯಕೀಯ ಚಿಕಿತ್ಸೆ ದೊರೆಯಲಿದೆ. ವೈದ್ಯರ ಗ್ರಾಮೀಣ ಸೇವೆ ಕಡ್ಡಾಯವಾದಲ್ಲಿ ಜನತೆಗೆ ಉತ್ತಮ ಅರೋಗ್ಯ ಭಾಗ್ಯ ಲಭಿಸಲಿದೆ. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಇಂಡ್ಲವಾಡಿ ನಾಗರಾಜ್, ಪದ್ಮನಾಭ, ಮದ್ದೂರಪ್ಪ ಕನಕರಾಜ್, ಗೌರೀಶ್, ಬಾಬು, ಯಲ್ಲಪ್ಪ ಮತ್ತಿತರರು ಭಾಗವಹಿಸಿದ್ದರು.