ಸಾರಾಂಶ
ಮೆಟ್ರೋ ರೈಲು ಟಿಕೆಟ್ ದರವನ್ನು ಪ್ರತಿ ವರ್ಷ ಗರಿಷ್ಠ ಶೇ.5ರಷ್ಟು ಹೆಚ್ಚಳ ಮಾಡಲು ಮೆಟ್ರೋ ರೈಲು ಟಿಕೆಟ್ ದರ ನಿಗದಿ ಸಮಿತಿ (ಎಫ್‌ಎಫ್‌ಸಿ) ಬಿಎಂಆರ್‌ಸಿಎಲ್‌ಗೆ ಶಿಫಾರಸು ಮಾಡಿದೆ.
ಬೆಂಗಳೂರು : ಮೆಟ್ರೋ ರೈಲು ಟಿಕೆಟ್ ದರವನ್ನು ಪ್ರತಿ ವರ್ಷ ಗರಿಷ್ಠ ಶೇ.5ರಷ್ಟು ಹೆಚ್ಚಳ ಮಾಡಲು ಮೆಟ್ರೋ ರೈಲು ಟಿಕೆಟ್ ದರ ನಿಗದಿ ಸಮಿತಿ (ಎಫ್‌ಎಫ್‌ಸಿ) ಬಿಎಂಆರ್‌ಸಿಎಲ್‌ಗೆ ಶಿಫಾರಸು ಮಾಡಿದೆ.
ಮೆಟ್ರೋ ರೈಲು ಟಿಕೆಟ್ ದರ ಪರಿಷ್ಕರಣೆ ಮಾಡಿ ಏಳು ತಿಂಗಳಾದರೂ ದರ ನಿಗದಿ ಸಮಿತಿಯ ವರದಿಯನ್ನು ಬಹಿರಂಗಪಡಿಸಿಲ್ಲ. ಹೀಗಾಗಿ, ವರದಿಯನ್ನು ಬಹಿರಂಗಪಡಿಸಲು ನಿರ್ದೇಶನ ನೀಡುವಂತೆ ಕೋರಿ ಸಂಸದ ತೇಜಸ್ವಿ ಸೂರ್ಯ ಅವರು ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಬರುವ ಒಂದು ದಿನ ಮೊದಲು ವರದಿಯನ್ನು ಬಿಎಂಆರ್‌ಸಿಎಲ್ ಬಹಿರಂಗಪಡಿಸಿದೆ.
ಏಳೂವರೆ ವರ್ಷಗಳಿಂದ ದರ ಹೆಚ್ಚಳ ಮಾಡದ ಹಿನ್ನೆಲೆಯಲ್ಲಿ ಇತ್ತೀಚೆಗೆ ಸಮಿತಿಯು ಟಿಕೆಟ್ ದರವನ್ನು ಒಟ್ಟಾರೆ ಸರಾಸರಿ ಶೇ.51.11ರಷ್ಟು ಹೆಚ್ಚಳ ಮಾಡಬಹುದು ಎಂದು ಶಿಫಾರಸು ಮಾಡಿತ್ತು. ಆದರೆ, ಬಿಎಂಆರ್‌ಸಿಎಲ್ ಮಾತ್ರ ಶೇ.71ರಷ್ಟು ಟಿಕೆಟ್ ದರ ಹೆಚ್ಚಿಸಿದೆ.
ಸಾಲ ಮತ್ತು ಬಡ್ಡಿ ಮರುಪಾವತಿ ಕಾರಣ ಟಿಕೆಟ್ ದರವನ್ನು ಶೇ.105ರಷ್ಟು ಹೆಚ್ಚಳ ಮಾಡಬೇಕು ಎಂದು ಬಿಎಂಆರ್‌ಸಿಎಲ್ ಪ್ರಸ್ತಾವನೆ ಸಲ್ಲಿಸಿತ್ತು ಎಂಬ ಮಾಹಿತಿ ಸಮಿತಿ ವರದಿಯಿಂದ ಬಹಿರಂಗವಾಗಿದೆ. ಅಂದರೆ ಕನಿಷ್ಠ ದರ ಸುಮಾರು 21 ರು. ಮತ್ತು ಗರಿಷ್ಠ 123 ರು.ಗೆ ಹೆಚ್ಚಿಸುವ ಪ್ರಸ್ತಾವನೆ ಸಲ್ಲಿಸಲಾಗಿತ್ತು.
ಪ್ರತಿ ವರ್ಷ ದರ ಪರಿಷ್ಕರಣೆ:
ಒಟ್ಟು ನಿಲ್ದಾಣಗಳ ಪೈಕಿ 10 ನಿಲ್ದಾಣಗಳ ಸ್ಲ್ಯಾಬ್ ಲೆಕ್ಕ ಹಾಕಿಕೊಂಡು ‘ವಾರ್ಷಿಕ ಸ್ವಯಂಚಾಲಿತ ದರ ಪರಿಷ್ಕರಣೆ ಸೂತ್ರ’ವನ್ನು (ಎಎಎಫ್‌ಆರ್‌ಎಫ್) ಪಾಲಿಸಬೇಕು. ಕಾರ್ಯಾಚರಣೆ ಮತ್ತು ನಿರ್ವಹಣೆ, ಸಾಲ ಮರುಪಾವತಿ, ಆಸ್ತಿಗಳ ನವೀಕರಣ ಸೇರಿ ಧೀರ್ಘಾವಧಿಗೆ ಸುಸ್ಥಿರತೆ ಕಾಪಾಡಿಕೊಳ್ಳುವಂತೆ ದರವನ್ನು ಬಿಎಂಆರ್‌ಸಿಎಲ್ ನಿಗದಿಪಡಿಸಬೇಕು. ಪಾರದರ್ಶಕವಾಗಿ ಮತ್ತು ಪ್ರಯಾಣಿಕರ ಸ್ನೇಹಿಯಾಗಿ ದರ ಪರಿಷ್ಕರಣೆ ಸೂತ್ರ ಪಾಲಿಸಬೇಕು ಎಂದು ಸಮಿತಿ ತನ್ನ ವರದಿಯಲ್ಲಿ ತಿಳಿಸಿದೆ.
ಪರಿಷ್ಕರಣೆಗೆ ಶೇ.51ರಷ್ಟು ಜನರ ವಿರೋಧ:
ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿದಾಗ ಬಂದ 1126 ಅಭಿಪ್ರಾಯಗಳಲ್ಲಿ ಶೇ.51ರಷ್ಟು ಜನ ಪರಿಷ್ಕರಣೆಗೆ ವಿರೋಧ ವ್ಯಕ್ತಪಡಿಸಿದ್ದರು. ಶೇ.27ರಷ್ಟು ಜನ ಬೆಂಬಲಿಸಿದರೆ, ಉಳಿದ ಶೇ.16ರಷ್ಟು ಜನ ಸಲಹೆಗಳನ್ನು ನೀಡಿದ್ದರು.
34,627 ಕೋಟಿ ರು. ಸಾಲ:
ಬಿಎಂಆರ್‌ಸಿಎಲ್‌ಗೆ 13,106 ಕೋಟಿ ರು. ಬಾಹ್ಯ ಸಾಲ ಮತ್ತು 21,521 ಕೋಟಿ ರು. ಆಂತರಿಕ ಸಾಲ ಸೇರಿ 34,627 ಕೋಟಿ ರು. ಸಾಲವಿದೆ. ಇದಕ್ಕಾಗಿ ವಾರ್ಷಿಕ 128 ಕೋಟಿ ರು. ಬಡ್ಡಿ ಮತ್ತು 463 ಕೋಟಿ ರು. ಅಸಲು ಪಾವತಿಸಲಾಗುತ್ತಿದೆ. ಮೆಟ್ರೋ 2, 2ಎ ಮತ್ತು 2ಬಿ ಹಂತಗಳು ಪೂರ್ಣಗೊಂಡು ಕಾರ್ಯಾಚರಣೆ ಆರಂಭವಾದರೆ, ಬಡ್ಡಿ ಮತ್ತು ಅಸಲು ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ.
ಶಿಫಾರಸುಗಳು
- ಪ್ರತಿ ವರ್ಷ ಗರಿಷ್ಠ ಶೇ.5ರಷ್ಟು ಟಿಕೆಟ್ ದರ ಹೆಚ್ಚಿಸಬಹುದು.
- ಕಾರ್ಡ್ ಬಳಸುವ ಪ್ರಯಾಣಿಕರಿಗೆ ದಟ್ಟಣೆ ಇಲ್ಲದ ಅವಧಿಯಲ್ಲಿ, ರಜಾ ದಿನಗಳಂದು ಟಿಕೆಟ್ ದರದಲ್ಲಿ ವಿನಾಯಿತಿ ನೀಡಬಹುದು.
- ಕ್ರೀಡೆ ಮತ್ತು ಇತರ ಕಾರ್ಯಕ್ರಮಗಳಾದಾಗ ಪ್ರೀಮಿಯಂ ದರದಲ್ಲಿ ಕ್ಯೂಆರ್ ಕೋಡ್ ಟಿಕೆಟ್ ಮಾರಬೇಕು.
- ಶಿಕ್ಷಣ ಸಂಸ್ಥೆಗಳೊಂದಿಗೆ ಮಾತನಾಡಿ ವಿದ್ಯಾರ್ಥಿಗಳಿಗೆ ಮಾಸಿಕ ಗ್ರೂಪ್ ಟಿಕೆಟ್ ವಿತರಿಸಬೇಕು.
- ಸುರಂಗಗಳಲ್ಲಿ ಜಾಹೀರಾತು ಅಳವಡಿಸಿ ಆದಾಯ ಸಂಗ್ರಹಿಸುವ ಬಗ್ಗೆ ಯೋಚಿಸಬೇಕು.
- ಲಗೇಜು ಇಡಲು ಕ್ಲಾಕ್ ರೂಮ್ ನಿರ್ಮಿಸಿ ಅದರ ಮೂಲಕ ಶುಲ್ಕ ಸಂಗ್ರಹಿಸಬೇಕು.
- ಫೀಡರ್ ಬಸ್ ಸೇವೆ ಹೆಚ್ಚಿಸಬೇಕು, ಮೆಟ್ರೋ ಆಸ್ತಿ ಅಭಿವೃದ್ಧಿ ಮೂಲಕ ಆದಾಯದ ದಾರಿ ಹುಡುಕಬೇಕು.
ಡಿಸ್ಕೌಂಟ್‌ಗೆ ಶಿಫಾರಸು ಮಾಡಿದ್ದ
ಸಮಿತಿ: ಸಂಸದ ತೇಜಸ್ವಿ ಸೂರ್ಯ
ನಷ್ಟ ಹಾಗೂ ದರ ನಿಗದಿ ಸಮಿತಿಯ ಶಿಫಾರಸುಗಳ ನೆಪ ಹೇಳಿ ಬಿಎಂಆರ್‌ಸಿಎಲ್ ಟಿಕೆಟ್ ದರವನ್ನು ಬರೋಬ್ಬರಿ ಶೇ.130ರಷ್ಟು ಹೆಚ್ಚಿಸಿತ್ತು. ಆದರೆ, ದರ ಕಡಿಮೆ ಮಾಡುವಂತೆ ಸಂಸತ್ತಿನಲ್ಲಿ ನನ್ನ ಮನವಿ ಹಾಗೂ ಸಾರ್ವಜನಿಕರ ತೀವ್ರ ವಿರೋಧದಿಂದ ದರ ಹೆಚ್ಚಳವನ್ನು ಶೇ.71ಕ್ಕೆ ಇಳಿಸಲಾಗಿದೆ ಎಂದು ಸಂಸದ ತೇಜಸ್ವಿ ಸೂರ್ಯ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ವರದಿ ಬಹಿರಂಗ ಕೋರಿ ಹೈಕೋರ್ಟ್ ಮೆಟ್ಟಿಲೇರಿದ ಬಳಿಕ, ವಿಚಾರಣೆಗೆ ಒಂದು ದಿನ ಬಾಕಿ ಇರುವಾಗ ವರದಿಯನ್ನು ಬಿಡುಗಡೆ ಮಾಡಲಾಗಿದೆ. ಪ್ರಯಾಣಿಕರಿಗೆ ಕೈಗೆಟುಕವ ದರದಲ್ಲಿ ಟಿಕೆಟ್ ಲಭ್ಯತೆ ಮತ್ತು ಬಿಎಂಆರ್‌ಸಿಎಲ್‌ಗೂ ಅನುಕೂಲವಾಗುವಂತಹ ಸೂತ್ರವನ್ನು ಸಮಿತಿ ನೀಡಿತ್ತು. ಭಾನುವಾರ ಮತ್ತು ರಾಷ್ಟ್ರೀಯ ರಜಾ ದಿನಗಳಂದು ಡಿಸ್ಕೌಂಟ್ ನೀಡಲು ಕೋರಿತ್ತು ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.