ಸುದೀರ್ಘ ಶಸ್ತ್ರಚಿಕಿತ್ಸೆ; ಶ್ವಾಸಕೋಶದಲ್ಲಿದ್ದ 40ಕ್ಕೂ ಹೆಚ್ಚು ಕ್ಯಾನ್ಸರ್‌ ಗೆಡ್ಡೆಗಳನ್ನು ಹೊರತೆಗೆದ ವೈದ್ಯ ತಂಡ

| Published : Feb 10 2024, 01:46 AM IST

ಸುದೀರ್ಘ ಶಸ್ತ್ರಚಿಕಿತ್ಸೆ; ಶ್ವಾಸಕೋಶದಲ್ಲಿದ್ದ 40ಕ್ಕೂ ಹೆಚ್ಚು ಕ್ಯಾನ್ಸರ್‌ ಗೆಡ್ಡೆಗಳನ್ನು ಹೊರತೆಗೆದ ವೈದ್ಯ ತಂಡ
Share this Article
  • FB
  • TW
  • Linkdin
  • Email

ಸಾರಾಂಶ

ಶ್ವಾಸಕೋಶದಲ್ಲಿ 40ಕ್ಕೂ ಹೆಚ್ಚು ಕ್ಯಾನ್ಸರ್ ನಿಕ್ಷೇಪಗಳನ್ನು ಯಶಸ್ವಿಯಾಗಿ ದೇರಳಕಟ್ಟೆ ಯೆನೆಪೋಯ ವೈದ್ಯರ ತಂಡ ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದಿದೆ. ಆಸ್ಪತ್ರೆಯ ಸಾಧನೆ ದೇಶದಲ್ಲೇ ಮೊದಲು ಎಂದು ವೈದ್ಯರ ತಂಡ ತಿಳಿಸಿದೆ.

ಕನ್ನಡಪ್ರಭ ವಾರ್ತೆ ಉಳ್ಳಾಲ

ಸುಮಾರು ಹತ್ತು ಗಂಟೆಗಳ ಸುದೀರ್ಘವಾದ ಶಸ್ತ್ರಚಿಕಿತ್ಸೆಯ ಮೂಲಕ 9 ವರ್ಷದ ಮಗುವಿನ ಶ್ವಾಸಕೋಶದಲ್ಲಿ 40ಕ್ಕೂ ಹೆಚ್ಚು ಕ್ಯಾನ್ಸರ್ ನಿಕ್ಷೇಪಗಳನ್ನು ಯಶಸ್ವಿಯಾಗಿ ದೇರಳಕಟ್ಟೆ ಯೆನೆಪೋಯ ವೈದ್ಯರ ತಂಡ ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದಿದೆ. ಆಸ್ಪತ್ರೆಯ ಸಾಧನೆ ದೇಶದಲ್ಲೇ ಮೊದಲು ಎಂದು ವೈದ್ಯರ ತಂಡ ತಿಳಿಸಿದೆ.

ದೇರಳಕಟ್ಟೆ ಯೆನೆಪೋಯ ಸಂಸ್ಥೆಯಲ್ಲಿ ಶುಕ್ರವಾರ ವೈದ್ಯರ ತಂಡ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಶಸ್ತ್ರಚಿಕಿತ್ಸೆಯ ೯ ದಿನಗಳಲ್ಲೇ ಮಗು ಚೇತರಿಕೆಯನ್ನು ಪಡೆದುಕೊಂಡಿದೆ. 9 ವರ್ಷದ ಹೆಣ್ಣುಮಗುವಿನ ದೇಹದ 4 ವಿವಿಧ ಭಾಗಗಳಾದ ಕಣ್ಣು, ತೊಡೆಯ ಮೂಳೆ, ಕರುಳು ಮತ್ತು ಶ್ವಾಸಕೋಶ ಕ್ಯಾನ್ಸರ್‌ನಿಂದ ಬಳಲುತ್ತಿದ್ದಳು. ತನ್ನ 9 ನೇ ತಿಂಗಳಿನಲ್ಲಿ ಮದುರೈ ಮತ್ತು ಹೈದರಾಬಾದ್ ನಲ್ಲಿ ಕಣ್ಣಿನ ಅರ್ಬುದ ರೋಗಗಕ್ಕೆ ಚಿಕಿತ್ಸೆ ಪಡೆದಿದ್ದಳು. 2021 ರಲ್ಲಿ ತೊಡೆ ಮೂಳೆಯ ಅರ್ಬುದ ರೋಗಗಕ್ಕೆ ಕೊಚ್ಚಿಯ ಲೇಕ್ ಶೋರ್ ಆಸ್ಪತ್ರೆ ಮತ್ತು ಎಸ್‌ವಿಟಿ ಆಸ್ಪತ್ರೆ ತಿರುವನಂತಪುರದಲ್ಲಿ ಚಿಕಿತ್ಸೆ ಪಡೆದಿದ್ದಳು. 2022ರಲ್ಲಿ ಕೊಚ್ಚಿಯಲ್ಲಿ ಶ್ವಾಸಕೋಶದ ದ್ವಿತೀಯಕಗಳಿಗೆ (ಶ್ವಾಸಕೋಶಕ್ಕೆ ಹರಡುವಿಕೆಗೆ) ಚಿಕಿತ್ಸೆ ಹಾಗೂ 2023ರಲ್ಲಿ ತಿರುವನಂತಪುರದ ಸರ್ಕಾರಿ ಕಾಲೇಜಿನಲ್ಲಿ ಕರುಳಿನ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದು, ನಂತರ ಮಿತ್ರ ಆಸ್ಪತ್ರೆ ಕ್ಯಾಲಿಕಟ್‌ನಲ್ಲಿ ಚಿಕಿತ್ಸೆ ಮುಂದುವರಿಸಿದರು. ಈ ಸಮಯದಲ್ಲಿ ಶ್ವಾಸಕೋಶದ ದ್ವಿತೀಯಕಗಳ ಕ್ಯಾನ್ಸರ್ ಮತ್ತೆ ಉಲ್ಬಣಗೊಂಡಿದ್ದು, ಕಂಡುಬಂದು ಇದಕ್ಕೆ ಹೆಚ್ಚಿನ ಶಸ್ತ್ರಚಿಕಿತ್ಸೆಯ ಅಗತ್ಯವಿರುವುದಾಗಿ ಸೂಚಿಸಲಾಗಿತ್ತು.

ರೋಗಿಯ ಸಂಬಂಧಿಕರು ಮಂಗಳೂರಿನ ಡಾ.ಜಲಾಲುದ್ದೀನ್ ಅಕ್ಬರ್ ಅವರ ಬಳಿ ಚಿಕಿತ್ಸೆ ಪಡೆಯಲು ಆದ್ಯತೆ ನೀಡಿರುವುದರಿಂದ, ಪ್ರಕರಣವನ್ನು ಜುಲೇಖಾ ಯೆನೆಪೋಯ ಇನ್‌ಸ್ಟಿಟ್ಯೂಟ್ ಆಫ್ ಆಂಕೊಲಾಜಿ ಟ್ಯೂಮರ್ ಬೋರ್ಡ್‌ನಲ್ಲಿ ಚರ್ಚಿಸಲಾಯಿತು. ಅದರಂತೆ ೧೦ ಗಂಟೆಗಳ ದೀರ್ಘ ಶಾಸ್ತ್ರಚಿಕಿತ್ಸೆಯಿಂದ ಶ್ವಾಸಕೋಶ ಹಾಗೂ ಎರಡು ಪಕ್ಕೆಲುಬುಗಳಿಂದ ಎಲ್ಲ ಗೆಡ್ಡೆಗಳನ್ನು, ತೆಗೆದು ಭಾರತದಲ್ಲೇ ಶಸ್ತ್ರಚಿಕಿತ್ಸೆಯ ಮೂಲಕ ಅತೀ ಹೆಚ್ಚು ಗೆಡ್ಡೆಗಳನ್ನು ತೆಗೆದ ಕೀರ್ತಿಗೆ ತಂಡ ಭಾಜನವಾಗಿದೆ.

ಅಪರೂಪದ ಯಶಸ್ವಿ ಶಸ್ತ್ರಚಿಕಿತ್ಸೆಯ ಮಾರ್ಗದರ್ಶನವನ್ನು ಯೆನೆಪೋಯ ಪರಿಗಣಿತ ವಿ.ವಿ.ಯ ಕುಲಪತಿ ಡಾ.ವಿಜಯಕುಮಾರ್ ಎಂ ಮಾರ್ಗದರ್ಶನದಲ್ಲಿ ಡಾ.ಜಲಾಲುದ್ದೀನ್ ಅಕ್ಬರ್ ನೇತೃತ್ವದಲ್ಲಿ, ಡಾ.ರೋಹನ್ ಶೆಟ್ಟಿ, ಡಾ.ಎಚ್.ಟಿ.ಅಮರ್ ರಾವ್, ಡಾ.ನೂರ್ ಮೊಹಮ್ಮದ್ ಅವರನ್ನೊಳಗೊಂಡ ಶಸ್ತ್ರಚಿಕಿತ್ಸಾ ತಂಡ, ಅರಿವಳಿಕೆ ತಜ್ಞರಾದ ಡಾ. ತಿಪ್ಪೇಸ್ವಾಮಿ ನೇತೃತ್ವದಲ್ಲಿ ಡಾ.ಸಂದೇಶ್( ಪೀಡಿಯಾಟ್ರಿಕ್ ವಿಭಾಗ) ಡಾ. ಡಾ.ಆದರ್ಶ್ (ಪಲ್ಮನಾಲಜಿ ವಿಭಾಗ), ಡಾ. ವಿನೀತ್ (ಇಂಟೆನ್ಸಿವಿಸ್ಟ್) ಇವರುಗಳು ಭಾಗವಹಿಸಿದ್ದರು.

ಸುದ್ದಿಗೋಷ್ಠಿಯಲ್ಲಿ ಯೆನೆಪೊಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಹಬೀಬ್ ರೆಹಮಾನ್ ಎ.ಎ. ಇದ್ದರು.