ಸಾರಾಂಶ
ಕನ್ನಡಪ್ರಭ ವಾರ್ತೆ ಸಕಲೇಶಪುರ
ಎತ್ತಿನಹೊಳೆ ಕುಡಿಯುವ ನೀರು ಅರಸೀಕೆರೆ ತಲುಪುವ ಮೊದಲೇ ಚಿತ್ರದುರ್ಗ ತಲುಪಲಿದೆ. ಯೋಜನೆ ನೀಲನಕ್ಷೆಯಂತೆ ಚಿತ್ರದುರ್ಗ ಜಿಲ್ಲೆಗೆ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯಿಂದ ನೀರು ನೀಡುವ ಪ್ರಸ್ತಾವನೆ ಇಲ್ಲ. ಆದರೂ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ವಾಣಿವಿಲಾಸ ಸಾಗರಕ್ಕೆ ಎತ್ತಿನಹೊಳೆ ನೀರು ಹರಿಯಲಿದೆ.ಹೌದು ಇದು ಆಶ್ಚರ್ಯವಾದರೂ ಸತ್ಯ. ಸಕಲೇಶಪುರದಿಂದ ಆರಂಭವಾಗುವ ಈ ಯೋಜನೆಯ ನೀರು ಹರಿಯುವ ಕಾಲುವೆ ಸಕಲೇಶಪುರ ತಾಲೂಕು ವ್ಯಾಪ್ತಿಯಲ್ಲಿ ಮಾತ್ರ ಪೂರ್ಣಗೊಂಡಿದೆ. ಮುಂದಕ್ಕೆ ಕಾಲುವೆ ಕಾಮಗಾರಿ ಆಗದ ಕಾರಣ ಈಗಾಗಲೇ ಕಾಲುವೆಗೆ ಹರಿಸುತ್ತಿರುವ ನೀರು ಬೇಲೂರು ತಾಲೂಕಿನ ಮಾದಿಹಳ್ಳಿ ಹೋಬಳಿಯ ಬೆಟ್ಟದ ಆಲೂರು ಗ್ರಾಮದ ಸಮೀಪದ ಕಾಗೆಹಳ್ಳಕ್ಕೆ ಹರಿಯುತ್ತಿದೆ. ಅಲ್ಲಿಂದ ಹರಿಯುವ ನೀರು ವೇದಾವತಿ ಕಣಿವೆ ಮೂಲಕ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ವಾಣಿವಿಲಾಸ ಸಾಗರ ಸೇರಲಿದೆ. ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆ ತಾಲೂಕಿನಲ್ಲಿ ೯೮ ಕಿ.ಮೀ. ಪೈಪ್‌ಲೈನ್ ಮೂಲಕ ತಾಲೂಕಿನ ಗಡಿ ಗ್ರಾಮ ಹೆಬ್ಬನಹಳ್ಳಿಗೆ ತಲುಪಲಿದ್ದು, ಅಲ್ಲಿಂದ ತೆರೆದ ನಾಲೆಯ ಮೂಲಕ ಬೇಲೂರು, ಅರಸೀಕೆರೆ, ತಿಪಟೂರು ಮೂಲಕ ತುಮಕೂರು ಪ್ರವೇಶಿಸುವ ಎತ್ತಿನಹೊಳೆ ನೀರು ಒಟ್ಟಾರೆ ೨೭೦ ಕಿ.ಮೀ. ದೂರದವರೆಗೆ ತೆರೆದ ನಾಲೆಯ ಮೂಲಕ ಹರಿಯಲಿದೆ.
ತಾಲೂಕಿನಲ್ಲಿ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆ ಕಾಮಗಾರಿ ಪುರ್ಣಗೊಂಡಿದ್ದು ಯೋಜನೆಯ ಮುಖ್ಯ ಕೇಂದ್ರದಿಂದ ೪೨ ಕಿ.ಮೀವರೆಗೆ ನೀರು ಹರಿಯಲು ನಾಲೆ ಸಿದ್ಧಪಡಿಸಲಾಗಿದೆ. ಆದರೆ, ಅರಸೀಕೆರೆ ತಾಲೂಕು ಆರಂಭದಲ್ಲೇ ನಾಲೆ ಕಾಮಗಾರಿ ನಡೆಸಲು ಅರಣ್ಯ ಇಲಾಖೆ ಅಡ್ಡಿಪಡಿಸುತ್ತಿದ್ದು, ಅರಸೀಕೆರೆ ತಾಲೂಕಿನ ಐದಳ್ಳಕಾವಲು ಹಾಗೂ ರಾಮದೇವರ ಕಾವಲಿನಲ್ಲಿ ಮನೆಗಳಿದ್ದರೂ ಅರಣ್ಯ ಇಲಾಖೆ ಈ ಜಾಗ ತಮ್ಮ ವ್ಯಾಪ್ತಿಗೆ ಬರಲಿದೆ ಎಂದು ತಕರಾರು ಎತ್ತಿರುವುದರಿಂದ ಸುಮಾರು ಎರಡು ಕಿ.ಮೀ. ನಾಲೆ ಕಾಮಗಾರಿಗೆ ತಡೆಬಿದ್ದಿದೆ. ಇದಲ್ಲದೆ ತಿಪಟೂರು, ತುಮಕೂರು ತಾಲೂಕಿನ ಹಲವೆಡೆ ವಿವಿಧ ಕಾರಣದಿಂದ ನಾಲೆ ಕಾಮಗಾರಿ ಮಂದಗತಿಯಲ್ಲಿ ಸಾಗಿದೆ.ತುಮಕೂರು ಜಿಲ್ಲೆ ಶಿರಾ ತಾಲೂಕಿನ ಬೈರಗೊಂಡ್ಲು ಗ್ರಾಮದಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ಜಲಾಶಯಕ್ಕೂ ಸ್ಥಳೀಯರು ಭಾರಿ ವಿರೋಧ ವ್ಯಕ್ತಪಡಿಸಿದ್ದರಿಂದ ಸದ್ಯದ ಪರಿಸ್ಥಿತಿಯಲ್ಲಿ ಜಲಾಶಯ ನಿರ್ಮಾಣ ಕಾರ್ಯವನ್ನು ಕೈಬಿಡಲಾಗಿದ್ದು ಬದಲಿ ನಿರ್ಮಾಣ ಕಾರ್ಯ ಇನ್ನೂ ಚಿಂತನೆಯ ಹಾದಿಯಲ್ಲೆ ಇದೆ. ಆದರೆ, ಸರ್ಕಾರ ಈ ವರ್ಷವೆ ಎತ್ತಿನಹೊಳೆಯಿಂದ ನೀರೆತ್ತಲೇಬೇಕು ಎಂಬ ಹಠತೊಟ್ಟಿದ್ದು ಕಳೆದ ಆರು ತಿಂಗಳ ಅವಧಿಯಲ್ಲಿ ನೀರಾವರಿ ಸಚಿವರು ಸೇರಿದಂತೆ ಯೋಜನೆಗೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಪ್ರತಿ ತಿಂಗಳು ಭೇಟಿ ನೀಡುವ ಮೂಲಕ ಕಾಮಗಾರಿಗೆ ವೇಗ ನೀಡಿದ್ದರು. ಪರಿಣಾಮ ಯೋಜನೆ ಕಾಮಗಾರಿ ಬಹುತೇಕ ಮುಕ್ತಾಯಗೊಂಡಿದೆ.
ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಗಾಗಿ ತಾಲೂಕಿನಲ್ಲಿ ನಿರ್ಮಿಸಿರುವ ೮ ವಿಆರ್‌ಗಳ ಪೈಕಿ ೩ ವಿಆರ್‌ಗಳಿಂದ ಯಶಸ್ವಿಯಾಗಿ ತಾಲೂಕಿನ ಹೊರಭಾಗಕ್ಕೆ ನೀರು ಹರಿಸಲಾಗಿದ್ದು ಸೆಪ್ಟಂಬರ್ ತಿಂಗಳ ವೇಳೆಗೆ ಎಲ್ಲ ವಿಆರ್‌ಗಳಿಂದಲೂ ನೀರು ಎತ್ತುವ ಪ್ರಕ್ರಿಯೆ ಆರಂಭವಾಗಲಿದೆ. ನಿತ್ಯ ಒಂದೊಂದು ವಿಆರ್‌ಗಳಿಂದ ಪ್ರಯೋಗಿಕವಾಗಿ ನೀರು ಎತ್ತುವ ಪ್ರಕ್ರಿಯೆಗೆ ಈಗಾಗಲೇ ಚಾಲನೆ ನೀಡಲಾಗಿದೆ. ಹೀಗೆ ಪ್ರಯೋಗಿಕವಾಗಿ ಎತ್ತಲಾಗುವ ನೀರು ೭ ಕ್ಯೂಬಿಕ್ ಮೀಟರ್‌ನಷ್ಟಿದ್ದು, ಈ ಅಪಾರ ಪ್ರಮಾಣದ ನೀರು ಯೋಜನೆ ಮಾರ್ಗದಲ್ಲಿ ಹರಿಯಲು ಅವಕಾಶ ಇಲ್ಲದ ಕಾರಣ ಯೋಜನೆಯ ಮುಖ್ಯಕೇಂದ್ರದಿಂದ ೪೨ ಕಿ.ಮೀ. ದೂರದ ಬೇಲೂರು ತಾಲೂಕು ಮಾದಿಹಳ್ಳಿ ಹೋಬಳಿಯ ಬೆಟ್ಟದ ಆಲೂರು ಗ್ರಾಮ ಸಮೀಪದ ಕಾಗೆಹಳ್ಳಕ್ಕೆ ನೀರನ್ನು ಹರಿಬಿಡಲಾಗುತ್ತಿದೆ. ಅಲ್ಲಿಂದ ಹರಿಯುವ ನೀರು ವೇದಾವತಿ ಕಣಿವೆ ಮೂಲಕ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ವಾಣಿವಿಲಾಸ ಸಾಗರ ಸೇರಲಿದೆ. ಇದರಿಂದಾಗಿ ಯೋಜನೆಯ ಮೊದಲ ಫಲಾನುಭವಿ ತಾಲೂಕಾಗಬೇಕಿದ್ದ ಅರಸೀಕೆರೆಗಿಂತ ಮುಂಚಿತವಾಗಿ ಚಿತ್ರದುರ್ಗದ ಜನತೆ ಎತ್ತಿನಹೊಳೆ ನೀರಿನ ಫಲಾನುಭವಿಗಳಾಗಲಿದ್ದಾರೆ.ಯೋಜನೆಗೆ ೧೦ ವರ್ಷ: ೨೦೧೪ರ ಮಾರ್ಚ್ ತಿಂಗಳಿನಲ್ಲಿ ೮ ಸಾವಿರ ಕೋಟಿ ರು. ವೆಚ್ಚದಲ್ಲಿ ಆರಂಭವಾದ ಕಾಮಗಾರಿ ಹಂತಹಂತವಾಗಿ ಯೋಜನಾ ವೆಚ್ಚಹೆಚ್ಚಾಗುವ ಮೂಲಕ ೨೩ ಸಾವಿರ ಕೋಟಿಗೆ ತಲುಪಿದ್ದು ೨೦೨೪ ಮಾರ್ಚ್ ತಿಂಗಳಿಗೆ ಯೋಜನೆಗೆ ೧೦ ವರ್ಷ ತುಂಬಿದೆ. ಯೋಜನೆಯ ವ್ಯವಸ್ಥಾಪಕ ನಿರ್ದೇಶಕ ಸಣ್ಣಚಿತ್ತಯ್ಯನವರ ಪ್ರಕಾರ ಮಾರ್ಚ್ ೨೦೨೭ಕ್ಕೆ ಎತ್ತಿನಹೊಳೆ ಕುಡಿಯುವ ನೀರಿನ ಕಾಮಗಾರಿ ಸಂಪೂರ್ಣ ಮುಕ್ತಾಯದ ಗುರಿಹೊಂದಲಾಗಿದೆ. ಆದರೆ, ಯೋಜನೆಯ ಆರಂಭದ ನೀಲನಕ್ಷೆಯಂತೆ ಬೈರಗೊಂಡ್ಲು ಜಲಾಶಯ ನಿರ್ಮಾಣ ಕಾಮಗಾರಿಗೆ ಟೆಂಡರ್ ಸಹ ಇದುವರೆಗೆ ನಡೆಯದಾಗಿದ್ದು ಜಲಾಶಯ ನಿರ್ಮಾಣಕ್ಕೆ ಭಾರಿ ವಿರೋಧ ಇರುವ ಕಾರಣ ಜಲಾಶಯ ನಿರ್ಮಾಣವನ್ನೆ ಕೈಬಿಡಲಾಗಿದೆ ಎನ್ನಲಾಗುತ್ತಿದೆ. ಜಲಾಶಯ ನಿರ್ಮಾಣವಾಗದೆ ಎತ್ತಿನಹೊಳೆ ನೀರು ಎಲ್ಲಿಗೆ ಹರಿಸುವುದು ಎಂಬ ಜಿಜ್ಞಾಸೆ ಅಧಿಕಾರಿಗಳ ವಲಯದಲ್ಲಿದ್ದು, ಯೋಜನೆ ಮುಕ್ತಾಯಕ್ಕೆ ಮತ್ತಷ್ಟು ವರ್ಷಗಳು ಹಿಡಿಯಲಿದ್ದು ವೆಚ್ಚವು ಹೆಚ್ಚಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಹೆಸರು ಹೇಳದ ಹಿರಿಯ ಅಧಿಕಾರಿಗಳು.* ಹೇಳಿಕೆ
ಅರಸೀಕೆರೆ ತಾಲೂಕಿನಲ್ಲಿ ನಾಲೆ ಕಾಮಗಾರಿಗೆ ವಿವಿಧ ಅಡ್ಡಿಗಳು ಇರುವ ಕಾರಣ ತಾತ್ಕಾಲಿಕವಾಗಿ ವೇದಾವತಿ ಕಣಿವೆ ಮೂಲಕ ವಾಣಿವಿಲಾಸ ಸಾಗರಕ್ಕೆ ನೀರು ಹರಿಸಲಾಗುವುದು.ವೆಂಕಟೇಶ್, ಇಇ ವಿಶ್ವೇಶ್ವರಯ್ಯ ಜಲನಿಗಮ ನಿಯಮಿತ, ಸಕಲೇಶಪುರ.