ಸಾರಾಂಶ
- ನಮ್ಮ ದಾವಣಗೆರೆ ಫೌಂಡೇಷನ್ ಪವನ್ ರೇವಣಕರ್ ಬೇಸರ । ಪಾಲಿಕೆ ವ್ಯಾಪ್ತಿ 24ನೇ ವಾರ್ಡ್‌ನಲ್ಲಿ ಜನಜಾಗೃತಿ ಕಾರ್ಯಕ್ರಮ - - - ಕನ್ನಡಪ್ರಭ ವಾರ್ತೆ, ದಾವಣಗೆರೆ
ಸ್ವಚ್ಛತೆ ಬಗ್ಗೆ ಪಾಲಿಕೆ ಆರೋಗ್ಯ ನಿರೀಕ್ಷಕರು, ದಪೇದಾರ, ಪೌರ ಕಾರ್ಮಿಕರೊಂದಿಗೆ ಸೇರಿ ನಮ್ಮ ದಾವಣಗೆರೆ ಫೌಂಡೇಷನ್‌ನಿಂದ ನಗರದ 24ನೇ ವಾರ್ಡ್‌ನಲ್ಲಿ ಶನಿವಾರ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.ಫೌಂಡೇಶನ್‌ನ ಪವನ್ ರೇವಣಕರ್ ಮಾತನಾಡಿ, ನಗರವನ್ನು ಸ್ವಚ್ಛವಾಗಿಡಲು ಪಾಲಿಕೆ ಶ್ರಮಿಸುತ್ತಿದೆ. ಆರೋಗ್ಯ ನಿರೀಕ್ಷಕರು, ದಫೇದಾರರು, ಪೌರಕಾರ್ಮಿಕರು ಆರೋಗ್ಯದ ಹಂಗು ತೊರೆದು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ, ಶಿಕ್ಷಿತರು, ಪ್ರತಿಷ್ಟಿತ ಬಡಾವಣೆಗಳ ಕೆಲ ನಿವಾಸಿಗಳು, ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಸುರಿಯುತ್ತಿದ್ದಾರೆ. ಇದು ಬೇಸರದ ಸಂಗತಿ ಎಂದರು.
ರಾತ್ರಿ ಹೊತ್ತು ಅಥವಾ ಬೆಳಗಿನ ಜಾವ ವಾಕ್ ನೆಪದಲ್ಲಿ ಕೈಯಲ್ಲೊಂದು ಕವರ್ ಹಿಡಿದು, ಎಲ್ಲೆಂದರಲ್ಲಿ ಎಸೆದು ಹೋಗುತ್ತಾರೆ. ಇನ್ನು ಕೆಲವರು ಬೈಕ್, ಕಾರಿನಲ್ಲೂ ಬಂದು ಕಸ ಎಸೆಯುತ್ತಿದ್ದಾರೆ. ಕೆಲವೆಡೆ ಟ್ರಾನ್ಸ್‌ಫಾರ್ಮರ್ ಕಂಬ, ಯುಜಿ ಕೇಬಲ್ ಜಂಕ್ಷನ್ ಬಾಕ್ಸ್‌ಗಳಿವೆ. ಅವುಗಳ ಬಳಿಯೂ ತ್ಯಾಜ್ಯ ವಿಲೇವಾರಿ ನಾಚಿಕೆಗೇಡಿನ ಸಂಗತಿ ಎಂದರು.ವರ್ಷದ ಹಿಂದೆಯೇ ಪಾಲಿಕೆ ಸಹಯೋಗದಲ್ಲಿ ಅನೇಕ ಬ್ಲಾಕ್ ಸ್ಪಾಟ್ ಗುರುತಿಸಿ, ಸ್ವಚ್ಛಗೊಳಿಸಿ, ಜಾಗೃತಿ ಮೂಡಿಸುವ ಸಂದೇಶದೊಂದಿಗೆ ಪೇಂಟಿಂಗ್ ಮಾಡಿಸಲಾಗಿತ್ತು. ಜನ ಅಲ್ಲಿ ಬಿಟ್ಟರೂ ಬೇರೆಡೆ ಕಸ ಎಸೆಯುತ್ತಿದ್ದಾರೆ. ಇಂತಹ ವ್ಯವಸ್ಥೆ ಬದಲಾಗಬೇಕೆಂದರೆ ಪ್ರತಿಯೊಬ್ಬರೂ ಸ್ವಚ್ಛತೆ ಮಹತ್ವ ಅರಿತು, ಸರ್ಕಾರದೊಂದಿಗೆ ಕೈ ಜೋಡಿಸಬೇಕು. ನಗರವನ್ನು ಸ್ವಚ್ಚವಾಗಿಡುವುದು ಕೇವಲ ಪಾಲಿಕೆ ಜವಾಬ್ದಾರಿಯಷ್ಟೇ ಅಲ್ಲ. ಜನರ ಸಹಭಾಗಿತ್ವ, ಸಹಕಾರವೂ ಮುಖ್ಯ ಎಂಬುದು ಮರೆಯಬಾರದು ಎಂದು ಪವನ್ ಹೇಳಿದರು.
ಪಾಲಿಕೆ ಆರೋಗ್ಯ ನಿರೀಕ್ಷಕರಾದ ಮದನಕುಮಾರ್, ದಫೇದಾರ್ ಪರಶುರಾಮ, ತ್ರಿಮೂರ್ತಿ, ಪೌರ ಕಾರ್ಮಿಕರಾದ ನಾಗಮ್ಮ, ಸೋಮಮ್ಮ, ಅಂಜಿನಪ್ಪ, ಫಕೀರಪ್ಪ, ಮರಿಯಪ್ಪ ಇದ್ದರು.ನಮ್ಮ ದಾವಣಗೆರೆ ಫೌಂಡೇಷನ್‌ನ ಸಚಿನ್ ವರ್ಣೇಕರ್, ಅರುಣ ಕೋಟೆ, ಅರ್ಜುನ, ವಿಕಾಸ, ಚೇತನ, ಸೋಮಶೇಖರ, ರಘು ತೊಗಾಟ್, ಸಚ್ಚಿನ್ ಪಾಲ್ಗೊಂಡಿದ್ದರು. ಈ ಕಾರ್ಯಕ್ಕೆ ಸಹಕರಿಸಿದ ಪಾಲಿಕೆ ಸದಸ್ಯ ಕೆ.ಪ್ರಸನ್ನಕುಮಾರ ಅವರಿಗೆ ಕೃತಜ್ಞತೆ ಸಲ್ಲಿಸಲಾಯಿತು. ಸಂಸ್ಥೆಯಿಂದ ಡೆಂಘೀ ಜಾಗೃತಿ ಮೂಡಿಸಿದಂತೆ, ಸ್ವಚ್ಛತೆ ಕುರಿತು, ವಿವಿಧ ವಾರ್ಡ್‌ಗಳಲ್ಲಿ ಪಾಲಿಕೆ ಸದಸ್ಯರ ಸಹಯೋಗದಲ್ಲಿ ಜಾಗೃತಿ ಮೂಡಿಸಲು ಸಂಸ್ಥೆ ಮುಂದಾಗಿದೆ.
- - -ಬಾಕ್ಸ್ * ಕಸದವರು ಎನ್ನಿ ಬೇಜಾರಿಲ್ಲ, ಆದ್ರೆ ಎಲ್ಲೆಂದ್ರಲ್ಲಿ ಕಸ ಸುರಿಯಬೇಡಿ: ಮತ್ತೂರಮ್ಮ ಪೌರ ಕಾರ್ಮಿಕರಾದ ಮತ್ತೂರಮ್ಮ ಮಾತನಾಡಿ, ನಮಗೆಲ್ಲರೂ ಕಸದವರು, ಕಸದವರು ಅಂತಾರೆ. ಅದಕ್ಕೆಲ್ಲಾ ನಮಗೆ ಬೇಜಾರಿಲ್ಲ. ನಗರದಲ್ಲಿ ಸ್ವಚ್ಛತೆ ಕಾಪಾಡೋದು ನಮ್ಮ ಕಾಯಕ. ಆದರೆ, ಎಲ್ಲಿ ಬೇಕೋ ಅಲ್ಲಿ ಮಧ್ಯರಾತ್ರಿ 3-4 ಗಂಟೆಗೆ ಕಸ ಎಸೆದು ಹೋಗುತ್ತಾರೆ. ನಾಯಿಗಳು ಕಸದ ಚೀಲಗಳನ್ನು ಎಳೆದಾಡುತ್ತವೆ. ಕಸದ ರಾಶಿ ಚೆಲ್ಲಾಪಿಲ್ಲಿ ಆಗಿರುತ್ತದೆ. ಪಕ್ಕದಲ್ಲಿಯೇ ಕರೆಂಟ್ ಬಾಕ್ಸ್ ಇರುತ್ತದೆ. ಹರಡಿದ ಆ ಕಸವೆಲ್ಲಾ ನಮ್ಮ ಕೈಯಲ್ಲೇ ಬಾಚುತ್ತೇವೆ. ಕರೆಂಟ್ ಹೊಡೆಯುವ ಭಯ ನಮಗೆ ಸದಾ ಕಾಡುತ್ತದೆ ಎಂದು ಅಳಲು ತೋಡಿಕೊಂಡರು. ನಿಮ್ಮಗಳಂತೆಯೇ ನಮಗೂ ಮನೆ, ಮಕ್ಕಳು, ಪರಿವಾರ ಇದೆ. ವಿದ್ಯಾವಂತರು, ಬುದ್ಧಿವಂತರು, ಶ್ರೀಮಂತರು ಹೀಗೆ ಪ್ರತಿಯೊಬ್ಬ ಸಾರ್ವಜನಿಕರು ಅರ್ಥ ಮಾಡಿಕೊಳ್ಳಲಿ. ಪಾಲಿಕೆಯಿಂದ ಪ್ರತಿ ನಿತ್ಯ ಮನೆ ಬಾಗಿಲಿಗೆ ಕಸ ಸಂಗ್ರಹಿಸಲು ವಾಹನ ಬರುತ್ತದೆ. ಆದರೂ, ಕಸದ ಗಾಡಿಗೆ ಕಸ ಹಾಕದ ಜನರು ಅಲ್ಲಿ ಕಸ ಹಾಕದೇ, ಇಲ್ಲಿ ಬಂದು ಎಸೆಯುತ್ತಾರೆ. ದಯಮಾಡಿ ಕಸವನ್ನು ಎಲ್ಲೆಂದರಲ್ಲಿ ಎಸೆಯಬೇಡಿ ಎಂದು ಮನವಿ ಮಾಡಿದರು.
- - - -3ಕೆಡಿವಿಜಿ11, 12, 13:ಎಲ್ಲೆಂದರಲ್ಲಿ ಕಸ ಸುರಿಯದೆ, ಸ್ವಚ್ಛತೆ ಕಾಪಾಡಲು ಸಹಕರಿಸಿ ಎಂದು ದಾವಣಗೆರೆ 24ನೇ ವಾರ್ಡ್‌ನಲ್ಲಿ ಪಾಲಿಕೆ ಅಧಿಕಾರಿ, ದಪೇದಾರ, ಪೌರ ಕಾರ್ಮಿಕರು ನಮ್ಮ ದಾವಣಗೆರೆ ಫೌಂಡೇಷನ್‌ನ ಪವನ್ ರೇವಣಕರ್ ನೇತೃತ್ವದಲ್ಲಿ ವಿವಿಧೆಡೆ ತೆರಳಿದ ನಾಗರಿಕರಿಗೆ ಮನವಿ ಮಾಡಿದರು.