ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಕ್ಷೇತ್ರವನ್ನು ನಿರ್ಲಕ್ಷ್ಯ ಮಾಡುತ್ತಾ ಬಂದಿದೆ. ಅತಿ ಹೆಚ್ಚು ಕಾರ್ಮಿಕರಿದ್ದರೂ ಕೆ.ಆರ್.ಪೇಟೆ ಕ್ಷೇತ್ರಕ್ಕೆ ಕಾರ್ಮಿಕ ಶಾಲೆ ಮಂಜೂರು ಮಾಡದೆ ಅನ್ಯಾಯ ಮಾಡಿದೆ ಎಂದು ಶಾಸಕ ಎಚ್.ಟಿ.ಮಂಜು ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮದ್ದೂರು ತಾಲೂಕು ಹೊರತು ಪಡಿಸಿ ಅತಿ ಹೆಚ್ಚು ಕಾರ್ಮಿಕರು ಕೆ.ಆರ್.ಪೇಟೆ ವಿಧಾನ ಸಭಾ ಕ್ಷೇತ್ರದಲ್ಲಿದ್ದಾರೆ. ಹೇಮಗಿರಿ ಶುಗರ್ಸ್ , ಜಾಕಿ ಗಾರ್ಮೆಂಟ್ಸ್, ಫುಡ್ ಪಾರ್ಕ್ ಸೇರಿದಂತೆ ಹಲವು ದೊಡ್ಡ ಹಾಗೂ ಕಿರು ಉದ್ದಿಮೆಯ ಘಟಕಗಳಿವೆ ಎಂದರು.

ಈ ಉದಿಮೆಗಳಲ್ಲಿ ಕನಿಷ್ಠ ಎಂಟು ಸಾವಿರಕ್ಕೂ ಅಧಿಕ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಆದರೆ, ಸರ್ಕಾರ ನಿರೀಕ್ಷಿತ ಪ್ರಮಾಣದಲ್ಲಿ ಕಾರ್ಮಿಕರಿಲ್ಲದ ನೆರೆಯ ನಾಗಮಂಗಲ, ಶ್ರೀರಂಗಪಟ್ಟಣ ಮುಂತಾದ ಕ್ಷೇತ್ರಗಳಿಗೆ ಕಾರ್ಮಿಕ ಶಾಲೆ ಮಂಜೂರು ಮಾಡಿದೆ. ಇತರ ಕ್ಷೇತ್ರಗಳಿಗೆ ಕಾರ್ಮಿಕ ಶಾಲೆ ನೀಡಿದ್ದಕ್ಕೆ ನನ್ನ ವಿರೋಧವಿಲ್ಲ. ಆದರೆ, ಅತಿಹೆಚ್ಚು ಕಾರ್ಮಿಕರಿರುವ ಕ್ಷೇತ್ರಕ್ಕೆ ಶಾಲೆ ಕೊಡದೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಕಿಡಿಕಾರಿದರು.

ಕ್ಷೇತ್ರದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ. ನಾನು ಜೆಡಿಎಸ್ ಶಾಸಕನೆಂಬ ಏಕೈಕ ಕಾರಣಕ್ಕೆ ರಾಜ್ಯ ಸರ್ಕಾರ ಈ ಕ್ಷೇತ್ರದ ಅಭಿವೃದ್ದಿಗೆ ಸ್ಪಂದಿಸದೆ ತಾಲೂಕಿನ ಜನರನ್ನು ವಂಚಿಸುತ್ತಿದೆ. ರಾಜ್ಯ ಸರ್ಕಾರದ ನಡೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿರುವ ದ್ರೋಹ ತೀವ್ರ ಅಸಮಾಧಾನ ಹೊರಹಾಕಿದರು.


ತಾಲೂಕಿನ ಬಹುತೇಕ ಎಲ್ಲಾ ಕೆರೆ ಕಟ್ಟೆಗಳನ್ನು ಹೇಮಾವತಿ ನದಿ ನೀರಿನಿಂದ ತುಂಬಿಸುವ ಐಚನಹಳ್ಳಿ ಏತ ನೀರಾವರಿ ಮತ್ತು ಗೂಡೇ ಹೊಸಹಳ್ಳಿ ಏತ ನೀರಾವರಿ ಯೋಜನೆಗಳು ಪೂರ್ಣಗೊಂಡಿಲ್ಲ. ಅಪೂರ್ಣಗೊಂಡಿರುವ ಏತ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಸರ್ಕಾರ ಅಗತ್ಯ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಂತೇಬಾಚಹಳ್ಳಿ ಹೋಬಳಿಯಲ್ಲಿ ಈ ಹಿಂದೆ ಅತಿವೃಷ್ಠಿಯಿಂದ ಹಾನಿಗೀಡಾದ ಕೆರೆ ಕಟ್ಟೆಗಳು ಮತ್ತು ರಸ್ತೆ ಹಾಗೂ ಸೇತುವೆಗಳ ಪುನರ್ ನಿರ್ಮಾಣಕ್ಕೂ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಗೆ ತಮಗೆ ಬೇಕಾದ ಪಕ್ಷದ ಶಾಸಕರನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕಿಲ್ಲವೆ?. ಕಾಂಗ್ರೆಸ್ ಸರ್ಕಾರ ಮಲತಾಯಿ ಧೊರಣೆ ಬದಲಾವಣೆಯಾಗಬೇಕು. ತಾಲೂಕಿನ ಅಭಿವೃದ್ದಿಗೆ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ತಾಲೂಕಿನ ಹೆರಗನಹಳ್ಳಿ, ಬಿದರಹಳ್ಳಿ, ಅಣ್ಣೆಚಾಕನಹಳ್ಳಿ ಸೇರಿದಂತೆ ಹೇಮಾವತಿ ಹಾಗೂ ಕೆ.ಆರ್.ಎಸ್ ನದಿ ಪಾತ್ರದ ಹಲವು ಹಳ್ಳಿಗಳನ್ನು ಶೀತಪೀಡಿತ ಗ್ರಾಮಗಳೆಂದು ಘೋಷಿಸಿದ್ದು, ಇಲ್ಲಿನ ಸಾವಿರಾರು ರೈತರು ತಮ್ಮ ಜಮೀನಿನ ಹಾಗೂ ಮನೆಯ ಖಾತೆಗಳೇ ಆಗದೇ ಪರಿತಪಿಸುತ್ತಿದ್ದಾರೆ. ಮಕ್ಕಳು ಮೊಮ್ಮೊಕ್ಕಳಿಗೆ ಜಮೀನುಗಳನ್ನು, ಮನೆಗಳನ್ನು ಹಂಚಿಕೊಡಲು ದಾಖಲೆಗಳೇ ಇಲ್ಲದಂತಾಗಿವೆ ಎಂದರು.

ಕಂದಾಯ ಸಚಿವರಿಗೆ ಈ ಬಗ್ಗೆ ಎಲ್ಲಾ ದಾಖಲೆಗಳನ್ನು ನೀಡಿದ್ದೇನೆ. ಪ್ರಸಕ್ತ ಅಧಿವೇಶನದಲ್ಲೂ ಶೀತಪೀಡಿತ ಗ್ರಾಮಗಳ ಸಮಸ್ಯೆ ಪ್ರಸ್ತಾಪಿಸಿ ಸರ್ಕರದ ಗಮನ ಸೆಳೆದಿದ್ದೇನೆ. ಸರ್ಕಾರ ತಕ್ಷಣವೇ ಅಗತ್ಯ ಕ್ರಮ ವಹಿಸಿ ಶೀತಪೀಡಿತ ಗ್ರಾಮಗಳನ್ನು ಕಂದಾಯ ಗ್ರಾಮಗಳೆಂದು ಘೋಷಿಸಿ ಅಲ್ಲಿನ ಜನರ ಸಮಸ್ಯೆನ್ನು ಪರಿಹರಿಸುವಂತೆ ಶಾಸಕ ಎಚ್.ಟಿ.ಮಂಜು ಆಗ್ರಹಿಸಿದರು.