ಯೆಯ್ಯಾಡಿ ಕೆಪಿಟಿ ಐಟಿಐ ಬಳಿಯ ಶ್ರೀ ರಾಮ ಮಂದಿರದ ೧೦೦ನೇ ವರ್ಷದ ಸಂಭ್ರಮಾಚರಣೆ ಮತ್ತು ೮೮ನೇ ವರ್ಷದ ವಾರ್ಷಿಕ ಏಕಹಾ ಭಜನೋತ್ಸವ ಪ್ರಯುಕ್ತ ಅಖಂಡ ಭಜನಾ ಸಪ್ತಾಹ, ಸೀತಾರಾಮ ಕಲ್ಯಾಣೋತ್ಸವ, ಚಂಡಿಕಾ ಹೋಮ ಕಾರ್ಯಕ್ರಮ ‘ಶತಮಾನೋತ್ಸವ ಸಂಭ್ರಮ’ ೧೩ರಿಂದ ೨೨ರವರೆಗೆ ನಡೆಯಲಿದೆ.

ಮಂಗಳೂರು: ಯೆಯ್ಯಾಡಿ ಕೆಪಿಟಿ ಐಟಿಐ ಬಳಿಯ ಶ್ರೀ ರಾಮ ಮಂದಿರದ ೧೦೦ನೇ ವರ್ಷದ ಸಂಭ್ರಮಾಚರಣೆ ಮತ್ತು ೮೮ನೇ ವರ್ಷದ ವಾರ್ಷಿಕ ಏಕಹಾ ಭಜನೋತ್ಸವ ಪ್ರಯುಕ್ತ ಅಖಂಡ ಭಜನಾ ಸಪ್ತಾಹ, ಸೀತಾರಾಮ ಕಲ್ಯಾಣೋತ್ಸವ, ಚಂಡಿಕಾ ಹೋಮ ಕಾರ್ಯಕ್ರಮ ‘ಶತಮಾನೋತ್ಸವ ಸಂಭ್ರಮ’ ೧೩ರಿಂದ ೨೨ರವರೆಗೆ ನಡೆಯಲಿದೆ.

ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ತುಳಸಿದಾಸ್ ಉರ್ವ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನ.೧೨ರಂದು ಸಂಜೆ ೫ಕ್ಕೆ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಿಂದ ಹೊರಕಾಣಿಕೆ ಮೆರವಣಿಗೆ ಹೊರಟು ಪದವಿನಂಗಡಿ ಶ್ರೀ ದುರ್ಗಾಕಟ್ಟೆವರೆಗೆ ಸಾಗಿ ಅಲ್ಲಿಂದ ಮೇರಿಹಿಲ್, ಕೊಂಚಾಡಿ, ಯೆಯ್ಯಾಡಿ ಮೂಲಕ ಮಂದಿರಕ್ಕೆ ತಲುಪಲಿದೆ. ನ.೧೩ರಂದು ಬೆಳಗ್ಗೆ ೮ರಿಂದ ವೇದಮೂರ್ತಿ ದೇರೆಬೈಲ್ ವಿಠಲದಾಸ ತಂತ್ರಿ ಅವರ ನೇತೃತ್ವದಲ್ಲಿ ಸೀತಾರಾಮ ಕಲ್ಯಾಣೋತ್ಸವ ನೆರವೇರಲಿದೆ. ನ.೧೪ರಂದು ಸೂರ್ಯೋದಯದ ಸಮಯ ಬೆಳಗ್ಗೆ ೬.೨೦ಕ್ಕೆ ದೀಪ ಪ್ರಜ್ವಲನೆಯೊಂದಿಗೆ ಭಜನಾ ಸಪ್ತಾಹ ಪ್ರಾರಂಭಗೊಂಡು ನ.೨೧ರಂದು ಸೂರ್ಯೋದಯ ಪರ್ಯಂತ ನಡೆದು ಭಜನಾ ಮಂಗಲೋತ್ಸವ ನಡೆಯಲಿದೆ ಎಂದರು.

ನ.೧೫ರಂದು ಬೆಳಗ್ಗೆ ೮ರಿಂದ ೧೧.೩೦ರವರೆಗೆ ಚಂಡಿಕಾ ಹೋಮ ನಡೆಯಲಿದೆ. ೧೭ರಂದು ಬೆಳಗ್ಗೆ ೧೧.೩೦ಕ್ಕೆ ಗಣಪತಿ ದೇವರಿಗೆ ಅಪ್ಪದ ಪೂಜೆ ನಡೆಯಲಿದೆ. ನ.೨೨ರಂದು ಸಂಜೆ ೫ಕ್ಕೆ ಸ್ಥಳೀಯ ಅಂಗನವಾಡಿ ಮಕ್ಕಳಿಂದ ಹಾಗೂ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈವಿಧ್ಯ ಏರ್ಪಡಿಸಲಾಗಿದೆ. ಸಂಜೆ ೬ಕ್ಕೆ ಸಭಾ ಕಾರ್ಯಕ್ರಮದಲ್ಲಿ ವೇದಮೂರ್ತಿ ದೇರೆಬೈಲು ವಿಠಲದಾಸ ತಂತ್ರಿ ದೀಪ ಪ್ರಜ್ವಲನೆ ಮಾಡುವರು. ಕೇಮಾರಿನ ಶ್ರೀ ಈಶ ವಿಠಲದಾಸ ಸ್ವಾಮೀಜಿ, ಶ್ರೀ ಕ್ಷೇತ್ರ ಕಟೀಲಿನ ಅನಂತ ಪದ್ಮನಾಭ ಆಸ್ರಣ್ಣ ಆಶೀರ್ವಚನ ನೀಡುವರು. ಶ್ರೀ ರಾಮ ಮಂದಿರದ ಅರ್ಚಕ ಆಲಾಡಿ ನಾಗರಾಜ ಭಟ್ ಉಪಸ್ಥಿತರಿರುವರು. ಮಂದಿರದ ಅಧ್ಯಕ್ಷ ಕಮಲಾಕ್ಷ ಎ. ಬಂಗೇರ ಅಧ್ಯಕ್ಷತೆ ವಹಿಸುವರು. ಸಂಸದ ಕ್ಯಾ. ಬ್ರಿಜೇಶ್ ಚೌಟ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು ಎಂದು ಅವರು ವಿವರಿಸಿದರು.

ಪ್ರತಿದಿನ ರಾತ್ರಿ ೯ಕ್ಕೆ ಶ್ರೀರಾಮ ದೇವರಿಗೆ ರಂಗಪೂಜೆ ನಡೆಯಲಿದೆ. ೧೦೦ನೇ ವರ್ಷದ ಸಂಭ್ರಮಾಚರಣೆ ಅಂಗವಾಗಿ ಶ್ರೀ ಮಹಾಗಣಪತಿ, ಶ್ರೀರಾಮ, ಲಕ್ಷ್ಮಣ, ಸೀತಾ, ಮುಖ್ಯಪ್ರಾಣ ದೇವರ ಬಿಂಬಗಳಿಗೆ ಬೆಳ್ಳಿ ಕವಚ ಸಮರ್ಪಣೆ ನಡೆಯಲಿದೆ ಎಂದರು.ಅಧ್ಯಕ್ಷ ಕಮಲಾಕ್ಷ ಎ. ಬಂಗೇರ, ಗೌರವಾಧ್ಯಕ್ಷ ಪದ್ಮನಾಭ ಕೊಡಿಯಾಲ್‌ಬೈಲ್, ಸಂಘಟನಾ ಕಾರ್ಯದರ್ಶಿ ಹರಿಪ್ರಸಾದ್ ಅಜ್ಜಿಕಾನಕಟ್ಟೆ, ಉಪಾಧ್ಯಕ್ಷರಾದ ಮೋಹನ್ ಯೆಯ್ಯಾಡಿ, ದಿವ್ಯಾ ಸುನಿಲ್ ಕೊಪ್ಪಲಕಾಡು, ಮಾತೃಸಂಘದ ಅಧ್ಯಕ್ಷೆ ಸುಚಿತ್ರಾ ಶಿವಾನಂದ ಇದ್ದರು.