ಸಾರಾಂಶ
ಗದಗ ಸಿದ್ಧಲಿಂಗ ನಗರದಲ್ಲಿನ ಬಸವ ಯೋಗ ಮಂದಿರದಲ್ಲಿ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಯೋಗೋತ್ಸವ-24 ಕಾರ್ಯಕ್ರಮದ ಅಡಿಯಲ್ಲಿ ಒಂದು ವಾರ ಕಾಲ ನಡೆಯುವ ಉಚಿತ ಯೋಗ ತರಬೇತಿ ಶಿಬಿರ ಉದ್ಘಾಟಿಸಲಾಯಿತು.
ಗದಗ: ವ್ಯಾಪಾರ, ಉದ್ದಿಮೆ, ಇನ್ನಿತರ ವ್ಯವಹಾರಗಳಿಗೆ ಹಣಕಾಸು ವ್ಯವಸ್ಥೆ ಮೂಲ ಬಂಡವಾಳವಾಗಿರುವಂತೆ ನಿತ್ಯ ಬದುಕಿನ ವ್ಯಾಪಾರದಲ್ಲಿ ಸಂತೃಪ್ತಿ ಲಾಭ ಪಡೆಯಲು ಯೋಗ ಸಾಧನೆ ಅಗತ್ಯವಾಗಿದೆ ಎಂದು ಅಕ್ಕನ ಬಳಗದ ಅಧ್ಯಕ್ಷೆ ಲಲಿತಾ ಬಾಳಿಹಳ್ಳಿಮಠ ಹೇಳಿದರು.
ಇಲ್ಲಿಯ ಸಿದ್ಧಲಿಂಗ ನಗರದಲ್ಲಿನ ಬಸವ ಯೋಗ ಮಂದಿರದಲ್ಲಿ ಜಿಲ್ಲಾ ಆಯುಷ್ ಇಲಾಖೆ, ಎಸ್‌ವೈಬಿಎಂಎಸ್ ಯೋಗ ಪಾಠಶಾಲೆಯ ಬಸವ ಯೋಗ ಕೇಂದ್ರ ಮತ್ತು ಜಿಲ್ಲಾ ಯೋಗ ಒಕ್ಕೂಟ ಹಾಗೂ ಜಿಲ್ಲಾ ಅಮೆಚೂರ್ ಯೋಗಾಸನ ಕ್ರೀಡಾ ಸಂಸ್ಥೆ ಸಹಯೋಗದಲ್ಲಿ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಯೋಗೋತ್ಸವ-24 ಕಾರ್ಯಕ್ರಮಗಳ ಅಡಿಯಲ್ಲಿ ಒಂದು ವಾರ ಕಾಲ ನಡೆಯುವ ಉಚಿತ ಯೋಗ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಯೋಗ ಸಾಧನೆಯಿಂದ ನಮ್ಮ ದೇಹ, ಮನ, ಬುದ್ಧಿ, ಭಾವಗಳು ಸಮತೋಲನ ಸ್ಥಿತಿಯಲ್ಲಿರುವವು. ಇದರಿಂದ ನಾವು ಹೆಚ್ಚಿನ ಆಶೆ, ಆಮಿಷಗಳಿಗೆ ಬಲಿಯಾಗುವುದಿಲ್ಲ. ವಾಸ್ತವ ಅರಿತು ಜೀವನ ಸಾಗಿಸುವ ಅರಿವು ನಮ್ಮಲ್ಲಿ ಮೂಡುವುದು. ಈ ಅರಿವಿನಿಂದ ನೆಮ್ಮದಿಯ ಬದುಕು ನಮ್ಮದಾಗುವುದು ಮತ್ತು ಸದಾ ಸುಖದಿಂದಿರಲು ಸಾಧ್ಯವಾಗುವುದು. ಹೀಗಾಗಿ ಯೋಗ ಸಾಧನೆ ಸಂತೃಪ್ತಿ ಬದುಕಿಗೆ ಮೂಲ ಬಂಡವಾಳವಾಗಿದೆ ಎಂದರು.ಚೇಂಬರ್ ಆಫ್ ಕಾಮರ್ಸ್ ಮಹಿಳಾ ಘಟಕದ ಸಂಸ್ಥೆಯ ಅಧ್ಯಕ್ಷೆ ಸುವರ್ಣಾ ಮದರಿಮಠ ಮಾತನಾಡಿ, ಇಂದು ನಾವೆಲ್ಲ ಹೆಚ್ಚಿನ ಸಮಯ ಮತ್ತು ಶ್ರಮವನ್ನು ಹಣ ಗಳಿಕೆಗಾಗಿ ಉಪಯೋಗಿಸುತ್ತೇವೆ. ಗಳಿಸಿದ ಹಣವನ್ನು ಕಾಯಿಲೆ ಬಂದಾಗ ಖರ್ಚು ಮಾಡುತ್ತೇವೆ. ಇದರ ಬದಲಾಗಿ ಹೆಚ್ಚಿನ ಸಮಯ, ಶ್ರಮಗಳನ್ನು ಯೋಗ ಸಾಧನೆಗೆ ವಿನಿಯೋಗಿಸಿದರೆ ನಮಗೆ ಆರೋಗ್ಯ ಭಾಗ್ಯ ದೊರೆಯುವುದು ಎಂದರು.
ನಾಗರಾಜ ಅಡವಿ, ಶಿವನಗೌಡ ಗೌಡರ ಹಾಗೂ ವಿಜಯಲಕ್ಷ್ಮೀ ಆನೆಹೊಸೂರ ಯೋಗ ತರಬೇತಿ ಶಿಬಿರದ ಮಹತ್ವ ಕುರಿತು ಮಾತನಾಡಿದರು.ಸುನಂದಾ ಜಾನೋಪಂತರ ಪ್ರಾರ್ಥಿಸಿದರು. ವಿಜಯಲಕ್ಷ್ಮೀ ಮೇಕಳಿ ಸ್ವಾಗತಿಸಿದರು. ಪ್ರಾಚಾರ್ಯ ಕೆ.ಎಸ್. ಪಲ್ಲೇದ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಅಮೆಚೂರ್ ಯೋಗಾಸನ ಕ್ರೀಡಾ ಸಂಸ್ಥೆ ಕಾರ್ಯದರ್ಶಿ ಚೇತನ ಚುಂಚಾ ವಂದಿಸಿದರು.