ಸಾರಾಂಶ
ಮಾನಸಿಕ ಅಸ್ವಸ್ಥರಿಗೆ ಸೂಕ್ತ ಚಿಕಿತ್ಸೆ ನೀಡುವ ಜೊತೆಗೆ ಪುನರ್ವಸತಿ ಕಲ್ಪಿಸಲು ಪ್ರಯತ್ನಿಸಬೇಕಿದೆ. ಯೋಗದಿಂದ ಹಲವಾರು ಮಾನಸಿಕ ಕಾಯಿಲೆಗಳನ್ನು ಗುಣಪಡಿಸಿರುವ ಉದಾಹಣೆಗಳೂ ಸಹ ಇವೆ.
ಕನ್ನಡಪ್ರಭ ವಾರ್ತೆ ತುರುವೇಕೆರೆ
ಮಾನಸಿಕ ರೋಗಿಗಳಿಗೆ ಯೋಗ ಮದ್ದಾಗಿ ಕಾರ್ಯ ಮಾಡಲಿದೆ. ರೋಗಿಗಳಿಗೆ ಸೂಕ್ತ ಯೋಗ ಶಿಕ್ಷಣ ನೀಡುವುದರಿಂದ ಅವರಲ್ಲಿರುವ ಕಾಯಿಲೆಯನ್ನು ಗುಣಪಡಿಸಲು ಸಾಧ್ಯವಿದೆ ಎಂದು ನಿಮ್ಹಾನ್ಸ್‌ನ ಮನೋ ವೈದ್ಯಕೀಯ ಪ್ರಾಧ್ಯಾಪಕ ಡಾ.ಸಿ. ನವೀನ್ ಕುಮಾರ್ ಅಭಿಪ್ರಾಯಪಟ್ಟರು.ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಯ ಆಶ್ರಯದಲ್ಲಿ ನಡೆದ ಯೋಗ ಆಧಾರಿತ ವಿಸ್ತರಣಾ ಸೇವೆಗಳಿಗೆ ಚಾಲನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಮಾನಸಿಕ ಅಸ್ವಸ್ಥರಿಗೆ ಸೂಕ್ತ ಚಿಕಿತ್ಸೆ ನೀಡುವ ಜೊತೆಗೆ ಪುನರ್ವಸತಿ ಕಲ್ಪಿಸಲು ಪ್ರಯತ್ನಿಸಬೇಕಿದೆ. ಯೋಗದಿಂದ ಹಲವಾರು ಮಾನಸಿಕ ಕಾಯಿಲೆಗಳನ್ನು ಗುಣಪಡಿಸಿರುವ ಉದಾಹಣೆಗಳೂ ಸಹ ಇವೆ. ಭಾರತದಲ್ಲಿ ಶೇ. 75ರಷ್ಟು ಮಾನಸಿಕ ರೋಗಿಗಳಿಗೆ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ. ಮಾನಸಿಕ ರೋಗಿಗಳಿಗೆ ಮೊದಲು ಆತ್ಮಸೈರ್ಯ ತುಂಬುವ ಕಾರ್ಯ ಮಾಡಬೇಕು. ಅಲ್ಲದೇ ಯೋಗ ಎಂಬುದು ಚಿಕಿತ್ಸೆಗೆ ಬೇಕಾಗುವ ಮಾತ್ರೆಗಳನ್ನೂ ಮೀರಿ ಕೆಲಸ ಮಾಡುತ್ತದೆ ಎಂದರು.ನಿಮ್ಹಾನ್ಸ್ ನಿರ್ದೇಶಕಿ ಡಾ.ಪ್ರತಿಮಾ ಮೂರ್ತಿ ಮಾತನಾಡಿ, ಜನರು ಆರೋಗ್ಯವಂತರಾಗಲು ವೈಜ್ಞಾನಿಕವಾಗಿ ಚಿಂತನೆ ಮಾಡಬೇಕು. ಮೆದುಳಿಗೆ ಯೋಗದ ಮೂಲಕ ಸಧೃಢರಾಗಲು ಪ್ರೇರೇಪಿಸಬೇಕು. ಖಿನ್ನತೆ ನಿವಾರಣೆಗೆ ಟೆಲಿಮನಸ್ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಆಪ್ತ ಸಮಾಲೋಚನೆಗಾಗಿ 14416 ನ್ನು ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದರು. ಕಾರ್ಯಕ್ರಮದಲ್ಲಿ ಐಸಿಎಂಆರ್ ನ ಮಹಾ ನಿರ್ದೇಶಕ ಡಾ.ರಾಜೀವ್ ಬೆಹಲ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚಂದ್ರಶೇಖರ್, ಡಾ.ರವೀಂದ್ರ ನಾಯಕ್. ನಿಮ್ಹಾನ್ಸ್ ನ ಹೆಚ್ಚುವರಿ ಪ್ರಾಧ್ಯಾಪಕಿ ಡಾ.ಆರತಿ ಜಗನ್ನಾಥ್, ಸಹಾಯಕ ಪ್ರಾಧ್ಯಾಪಕ ಡಾ,ಶನಿವಾರಂ ರೆಡ್ಡಿ, ಪೂನಂ, ಡಾ.ಎ.ನಾಗರಾಜು, ತಾಲೂಕು ಆರೋಗ್ಯಾಧಿಕಾರಿ ಡಾ.ರಂಗನಾಥ್, ಸರ್ಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ನವೀನ್, ಮನಶಾಸ್ತ್ರಜ್ಞ ಹರೀಶ್ ಸೇರಿದಂತೆ ಆಸ್ಪತ್ರೆಯ ವೈದ್ಯರು ಭಾಗವಹಿಸಿದ್ದರು. 29 ಟಿವಿಕೆ 1 – ತುರುವೇಕೆರೆಯ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಯ ಆಶ್ರಯದಲ್ಲಿ ನಡೆದ ಯೋಗ ಆಧಾರಿತ ವಿಸ್ತರಣಾ ಸೇವೆಗಳಿಗೆ ಚಾಲನೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.