ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಶ್ರೀ ಪ್ರಸನ್ನ ಗಣಪತಿ ಆಸ್ಥಾನ ಮಂಟಪದಲ್ಲಿ "ಆರೋಗ್ಯಕ್ಕಾಗಿ ಯೋಗ ಶಿಬಿರ " ಆರಂಭವಾಗಿದೆ. ಸುಮಾರು ೧೩ ವರ್ಷಗಳಿಂದ ನಿರಂತರವಾಗಿ ಗಣಪತಿ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ೨೦ ದಿನಗಳ ಕಾಲ ಯೋಗಾಸನ, ಪ್ರಾಣಾಯಾಮ ಧ್ಯಾನದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ.ಪ್ರತಿವರ್ಷವು ನೀತಿ ಕಥೆಗಳು, ಹಾಸ್ಯ, ಆಟಗಳು, ಮನಸ್ಸಿಗೆ ಮುದ ನೀಡುವ ಹಳ್ಳಿಯ ಸೊಗಡನ್ನು ನೆನಪಿಸುವ ಉದ್ದೇಶದಿಂದ ಚಿಕ್ಕ ನಿಸರ್ಗ ಪ್ರವಾಸ, ಪರಿಸರ ಕಾಳಜಿಯಿಂದ ಗಿಡ ನೆಡುವ ಕಾರ್ಯಕ್ರಮ ಮನೆಮದ್ದುಗಳ ಮಹತ್ವ ತಿಳಿಸಿ ಬೆಳೆಸಲು ಔಷಧಿ ಸಸ್ಯಗಳ ವಿತರಣೆ ಇನ್ನೂ ಹೆಚ್ಚಿನ ಆರೋಗ್ಯದ ಅರಿವು ಮೂಡಿಸುವ ಉದ್ದೇಶದಿಂದ ಅನುಭವಿಗಳು, ವೈದ್ಯರನ್ನು ಕರೆಸಿ ಅವರಿಂದ ಉಪನ್ಯಾಸ ಕಾರ್ಯಕ್ರಮ ಕೂಡ ಏರ್ಪಡಿಸಲಾಗುತ್ತಿದೆ.
ಈ ಬಾರಿ ಗಣಪತಿ ಸೇವಾ ಸಮಿತಿ ವತಿಯಿಂದ ಪದ್ಮಭೂಷಣ ಡಾ.ಎಸ್.ಎಲ್. ಭೈರಪ್ಪನವರ ಸ್ಮರಣಾರ್ಥ ಆರೋಗ್ಯದ ಅರಿವು ಕಾರ್ಯಕ್ರಮವನ್ನು ಸೆ.೨೮ ಬೆಳಿಗ್ಗೆ ೬:೪೫ರಿಂದ ೮:೪೫ರವರೆಗೆ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಭೈರಪ್ಪ ತಾಲೂಕಿನವರೇ ಆಗಿರುವುದರಿಂದ ಅವರ ಸ್ಮರಣಾರ್ಥವಾಗಿ ಅ.೪ರಂದು ಶನಿವಾರ ಶ್ರೀ ಪ್ರಸನ್ನ ಗಣಪತಿ ಆಸ್ಥಾನ ಮಂಟಪದಲ್ಲಿ ಅವರ ೯೪ ವರ್ಷಗಳ ಜೀವಿತಾವಧಿಯ ನೆನಪಿಗಾಗಿ ೯೪ ಬಾಟಲ್ ರಕ್ತಸಂಗ್ರಹ ಮಾಡುವ ಗುರಿಯನ್ನು ಹೊಂದಲಾಗಿದೆ. ಸೇವಾ ಸಮಿತಿ ಮತ್ತು ಯೋಗ ಶಿಬಿರಾರ್ಥಿಗಳು ಅಲ್ಲದೆ ಸ್ಥಳೀಯ ಅನೇಕ ಸಂಘಸಂಸ್ಥೆಗಳವರು ಶ್ರೇಷ್ಠ ಸಾಹಿತಿಯ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸುವುದರ ಮೂಲಕ ರಕ್ತ ಸಂಗ್ರಹಿಸುವ ಕಾರ್ಯ ನಡೆಸಲಿದ್ದಾರೆ.ಆರೋಗ್ಯವಂತರಾಗಿ ತಾವು ಮತ್ತು ತಮ್ಮ ಕುಟುಂಬ ಇರಬೇಕೆಂಬ ಉದ್ದೇಶದಿಂದ ಗಣಪತಿ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ಹೆಚ್ಚು ಕಾಳಜಿ ತೆಗೆದುಕೊಂಡು ಪರಿಸರ ಪ್ರೇಮಿ ಚ.ನಾ. ಅಶೋಕ ಹಾಗೂ ಗಜಾನನ ಮನೋಹರ್ ಅವರು ಶ್ರಮಿಸುತ್ತಿದ್ದಾರೆ. ವಿಶೇಷವೆಂದರೆ ರಕ್ತದಾನ ಶಿಬಿರ ಆಯೋಜಿಸಿದ ಪ್ರತಿವರ್ಷದಲ್ಲೂ ಸರಾಸರಿ ೭೦ರಿಂದ ನೂರಕ್ಕಿಂತಲೂ ಹೆಚ್ಚು ಯೂನಿಟ್ (ಬಾಟಲ್) ಸಂಗ್ರಹವಾಗುತ್ತಾ ಬಂದಿದೆ. ಗಣಪತಿ ಸೇವಾ ಸಮಿತಿ ಮತ್ತು ಯೋಗ ಬಂಧುಗಳ ಶ್ರಮದಿಂದ ಹಲವು ವರ್ಷಗಳಲ್ಲಿ ೧೨೦೦ ಕ್ಕಿಂತಲೂ ಹೆಚ್ಚು ಯೂನಿಟ್ ರಕ್ತದಾನ ವಾಗಿರುವುದು ಸಮಾಜಕ್ಕೆ ಇದೊಂದು ದೊಡ್ಡ ಕೊಡುಗೆ. ಚೇತನ್ ಗುರೂಜಿಯವರು ಹೀಗೆ ಅನೇಕ ಕಡೆ ಯೋಗ ಶಿಬಿರಗಳನ್ನು ನಡೆಸುತ್ತಾ ಸ್ಥಳೀಯರ ಸಹಕಾರದಿಂದ ೨೨ ವರ್ಷಗಳಲ್ಲಿ ಹತ್ತು ಸಾವಿರಕ್ಕಿಂತಲೂ ಹೆಚ್ಚು ಬಾಟಲ್ ರಕ್ತಸಂಗ್ರಹಿಸಿದ ದಾಖಲೆ ಇವರದು. ಈ ಕಾರ್ಯಕ್ಕೆ ಪ್ರೇರಣೆ ಅವರೇ ಸ್ವತಃ ೯೯ ಬಾರಿ ರಕ್ತದಾನ ಮಾಡಿ ಬೇರೆಯವರಿಗೂ ಸ್ಫೂರ್ತಿ ಆಗಿದ್ದಾರೆ.೧೦೦ನೇ ಬಾರಿ ರಕ್ತದಾನವನ್ನು ಅವರ ಹುಟ್ಟೂರಾದ ಅಡಗೂರಿನಲ್ಲಿ ನ. ೧೫ನೇ ತಾರೀಕು ಶನಿವಾರ ಹಮ್ಮಿಕೊಂಡಿದ್ದಾರೆ. ಇದಲ್ಲದೆ ಆ ದಿನ ಒಂದು ಸಾವಿರ ಬಾಟಲ್ ರಕ್ತ ಸಂಗ್ರಹ ಗುರಿ ಇಟ್ಟುಕೊಂಡು ಈಗಿನಿಂದಲೇ ಕಾರ್ಯಪ್ರವೃತ್ತರಾಗಿದ್ದಾರೆ. ಜೊತೆಗೆ ಸಾಮಾಜಿಕ ಕಳಕಳಿ ಉಳ್ಳವರಾಗಿರುವ ಇವರು ಆ ದಿನವೇ ನೇತ್ರ, ದಂತ, ಹೃದಯ, ಮೂಳೆ ಮತ್ತು ಕೀಲು ಅಲ್ಲದೆ ಆಯುರ್ವೇದ ಪದ್ಧತಿಯ ಚಿಕಿತ್ಸೆಯನ್ನು ಸುತ್ತಮುತ್ತಲ ಗ್ರಾಮಸ್ಥರಿಗೆ ಹಾಗೂ ಜಿಲ್ಲೆಯ ಜನರಿಗೆ ಅನುಕೂಲವಾಗಲಿ ಎಂದು ಸುಮಾರು ಮೂರರಿಂದ ನಾಲ್ಕು ಸಾವಿರ ಜನರಿಗೆ ಇದರ ಉಪಯೋಗವಾಗಲಿ ಎಂದು ವ್ಯವಸ್ಥೆ ಮಾಡಿದ್ದಾರೆ. ಅಲ್ಲದೆ ಬಂದಂತಹ ಎಲ್ಲರಿಗೂ ಊಟದ ವ್ಯವಸ್ಥೆಯನ್ನು ಏರ್ಪಡಿಸುವ ತೀರ್ಮಾನ ಕೈಗೊಂಡಿದ್ದಾರೆ.ಇಷ್ಟಲ್ಲದೆ ದೇಹದಾನ ಮತ್ತು ನೇತ್ರದಾನದ ನೋಂದಣಿ ವ್ಯವಸ್ಥೆಯನ್ನು ಮಾಡಿ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ. ಈ ಕಾರ್ಯಕ್ರಮಕ್ಕೆ ಅವರ ಶಿಬಿರದ ಲಾಭ ಪಡೆದುಕೊಂಡ ಜನ ಕರ್ನಾಟಕದ ಅನೇಕ ಭಾಗದಿಂದ ಬಂದು ರಕ್ತದಾನ ಮಾಡಲು ಬರುತ್ತಾರೆಂದು ತಿಳಿಸಿದ್ದಾರೆ. ಇಂತಹ ಅಪೂರ್ವ ಸಾಧಕರು ನಮ್ಮ ಜಿಲ್ಲೆ ಮತ್ತು ನಾಡಿನಲ್ಲಿ ಇರುವುದೊಂದು ವಿಶೇಷವೇ. ಹೀಗೆ ಇವರಿಂದ ಲಕ್ಷಾಂತರ ಜನರಿಗೆ ಯೋಗ ಮತ್ತು ಆರೋಗ್ಯದ ಮಾಹಿತಿ ಸಿಗುತ್ತಿರಲಿ ನಿರಂತರ ರಕ್ತದಾನ ಆರೋಗ್ಯ ಭಾಗ್ಯ ಕರುಣಿಸುವ ಉಚಿತ ತಪಾಸಣಾ ಶಿಬಿರಗಳನ್ನು ಏರ್ಪಡಿಸಿ ಸಾರ್ವಜನಿಕರಿಗೆ ಒಳ್ಳೆಯದನ್ನು ಮಾಡಲಿ ಎಂಬುದೇ ನಮ್ಮ ಆಶಯ.
------------------------------ ಹೇಳಿಕೆ:1ಯೋಗದಿಂದ ಮಾನಸಿಕ ನೆಮ್ಮದಿ, ಆರೋಗ್ಯ, ದೇಹ ಸದೃಢವಾಗಲಿದೆ.; ಅನೇಕ ಕಾಯಿಲೆಗಳಿಂದ ಮುಕ್ತರಾಗಿ ನೆಮ್ಮದಿಯ ಜೀವನವನ್ನು ನಡೆಸಬಹುದು. ಆದ್ದರಿಂದ ಪಟ್ಟಣದ ಪ್ರಸನ್ನ ಗಣಪತಿ ಪೆಂಡಾಲಿನವರು ಹಮ್ಮಿಕೊಂಡ ಅರ್ಥಪೂರ್ಣ ಕಾರ್ಯಕ್ರಮ ನಿಜಕ್ಕೂ ಸಾರ್ವಜನಿಕರಿಗೆ ಉಪಯುಕ್ತವಾಗಲಿದೆ.
- ಚೇತನ್ ಗುರೂಜಿ, ಖ್ಯಾತ ಯೋಗಗುರುಗಳು (27ಎಚ್ಎಸ್ಎನ್7ಎ)