ಸಾರಾಂಶ
ಬೇಲೂರು: ಲಯನ್ಸ್ ಸೇವಾ ಸಂಸ್ಥೆ ಹಾಗೂ ಯೋಗ ಚೇತನ ಕೇಂದ್ರ ಅಡಗೂರು ಇವರ ಸಂಯುಕ್ತಾಶ್ರಯದಲ್ಲಿ ಜ. 2ರಿಂದ 14ರವರೆಗೆ ಆರೋಗ್ಯಕ್ಕಾಗಿ ಯೋಗ ಶಿಬಿರವನ್ನು ಪಟ್ಟಣ ಯಗಚಿ ಸೇತುವೆ ಮಂಜುನಾಥ ಕಲ್ಯಾಣ ಮಂಟಪ ಹಿಂಭಾಗದ ಲಯನ್ಸ್ ಭವನದಲ್ಲಿ ನಡೆಸಲಾಗುತ್ತದೆ ಎಂದು ಬೇಲೂರು ಲಯನ್ಸ್ ಸೇವಾ ಸಂಸ್ಥೆ ಅಧ್ಯಕ್ಷ ಡಾ.ಚಂದ್ರಮೌಳಿ ಹೇಳಿದರು.
ಪಟ್ಟಣದ ಲಯನ್ಸ್ ಭವನದಲ್ಲಿ ಮಾತನಾಡಿ, ಇತ್ತೀಚಿನ ಆಧುನಿಕ ಜೀವನ ಶೈಲಿಯ ಒತ್ತಡದಲ್ಲಿ ಬದುಕು ಕಳೆಯಬೇಕಾದ ಪರಿಸ್ಥಿತಿಯಿದೆ. ಇಂದಿನ ಜಂಕ್‌ಫುಡ್ ಆಹಾರ ಸೇವನೆ ಅನಾರೋಗ್ಯಕ್ಕೆ ದಾರಿ ಮಾಡಿಕೊಟ್ಟಿದೆ. ಆಹಾರ ಸೇವನೆ ಜಂಜಾಟದಲ್ಲಿರುವ ಆರೋಗ್ಯವನ್ನು ಸುಸ್ಥಿತಿ ಮತ್ತು ಸರಳ ಜೀವನ ಶೈಲಿ ಬದಲಾವಣೆಗೆ ಯೋಗ ಪರಮ ಔಷಧಿಯಾಗಿದೆ ಎಂದು ವೈಜ್ಞಾನಿಕವಾಗಿ ದೃಡಪಟ್ಟಿದೆ. ಇದರ ಮಹತ್ವವನ್ನು ಅರಿತು ವಿಶ್ವದಾದ್ಯಂತ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ ಎಂದರು.ಲಯನ್ಸ್ ಕ್ಲಬ್ ಸಾರ್ವಜನಿಕರಿಗೆ ಯೋಗದ ಮಹತ್ವ ಮತ್ತು ಸದೃಢ ಆರೋಗ್ಯ ಜೀವನ ನಡೆಸಲು 17 ದಿನಗಳ ಕಾಲ ಆರೋಗ್ಯಕ್ಕಾಗಿ ಯೋಗ, ಯೋಗಾಸನ, ಪ್ರಾಣಾಯಾಮ, ಧ್ಯಾನಶಿಬಿರ ಹೀಗೆ ಆರೋಗ್ಯವೃದ್ಧಿಗೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಆಸಕ್ತರು ಲಯನ್ಸ್ ಕ್ಲಬ್ ಪದಾಧಿಕಾರಿಗಳನ್ನು ಸಂಪರ್ಕಿಸಬಹುದು. ಬೇಲೂರು ಲಯನ್ಸ್ ಕ್ಲಬ್ ಆರೋಗ್ಯ, ಶಿಕ್ಷಣ, ಪರಿಸರ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸೇವಾ ಚಟುವಟಿಕೆಗಳನ್ನು ನಡೆಸುವ ಕಾರ್ಯವನ್ನು ನಡೆಸುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಶಿಬಿರ, ಉಚಿತ ಆರೋಗ್ಯ ಮೇಳಗಳನ್ನು ನಡೆಸುತ್ತಾ, ಶಿಕ್ಷಣಕ್ಕೆ ಅರ್ಥಿಕ ನೆರವು ನೀಡುತ್ತಾ ಬಂದಿದೆ. ಯೋಗ ಶಿಬಿರದಲ್ಲಿ ಪಟ್ಟಣದ ಜನತೆ ಭಾಗವಹಿಸುವ ಮೂಲಕ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ಯೋಗ ಶಿಕ್ಷಕ ಚೇತನ್ ಗುರೂಜಿ ಮಾತನಾಡಿ, ಲಯನ್ಸ್ ಭವನದಲ್ಲಿ 17 ದಿನಗಳ ಕಾಲ ಯೋಗ ಶಿಬಿರಕ್ಕೆ ಅವಕಾಶ ನೀಡಿದ್ದಾರೆ. ಪ್ರತಿನಿತ್ಯ ಬೆಳಿಗ್ಗೆ 5-30ರಿಂದ 7 ಗಂಟೆ ತನಕ ನಡೆಯುವ ಯೋಗ ಶಿಬಿರದಲ್ಲಿ ಆರೋಗ್ಯ, ಆಯಸ್ಸು, ಆನಂದ, ನೆಮ್ಮದಿ ಪಡೆಯಬಹುದು. ದೈಹಿಕ ಮತ್ತು ಮಾನಸಿಕ ಆರೋಗ್ಯದ ಸದೃಢತೆಗೆ ಇಂತಹ ಯೋಗ ಶಿಬಿರಗಳ ಸದ್ಬಳಕೆ ಮಾಡಿಕೊಳ್ಳಬೇಕಿದೆ. ಪ್ರತಿದಿನ ಒಂದಲ್ಲ ಒಂದು ವೈಶಿಷ್ಟಪೂರ್ಣತೆ ಕಾರ್ಯಕ್ರಮಗಳ ಜೊತೆಗೆ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಹೇಳಿದರು.