ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಗರ
ಪ್ರತಿಯೊಬ್ಬ ವ್ಯಕ್ತಿಯೂ ದಿನ ನಿತ್ಯ ಯೋಗಾಸನ ಮಾಡುವುದರಿಂದ ಮಾನಸಿಕ ಮತ್ತು ದೈಹಿಕ ಒತ್ತಡಗಳಿಂದ ದೂರವಿರಬಹುದು. ಜೊತೆಗೆ ಧೀರ್ಘಾಯುಷ್ಯವನ್ನು ಪಡೆಯಬಹುದು ಎಂದು ಹಿಮಾಲಯ ಯೋಗಿ ಸದಾನಂದಗಿರಿ ಮಹಾರಾಜ್ ಸ್ವಾಮೀಜಿ ತಿಳಿಸಿದರು.ನಗರದ ಬಲಿಜ ಸಮುದಾಯ ಭವನದಲ್ಲಿ ರಾಮನಗರ ಪಿರಮಿಡ್ ಧ್ಯಾನ ಮಂದಿರದ ವತಿಯಿಂದ ಆಯೋಜಿಸಿದ್ದ ‘ಧ್ಯಾನಯೋಗ ಮತ್ತು ಪ್ರವಚನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮನುಷ್ಯನಿಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಕಾಯಿಲೆಗಳು ಬರುತ್ತಿರುವುದರಿಂದ, ನಾವು ಲಕ್ಷಾಂತರ ರು.ಗಳನ್ನು ಖರ್ಚು ಮಾಡಬೇಕಾಗಿದೆ. ಮನುಷ್ಯ ನಿಗೆ ಕೋಪವು ಅತೀ ದೊಡ್ಡ ಶತ್ರುವಾಗಿದ್ದು, ಇದನ್ನು ಯೋಗ ಮತ್ತು ಧ್ಯಾನಗಳಿಂದ ಮಾತ್ರ ಹೋಗಲಾಡಿಸಬಹುದು ಎಂದು ಹೇಳಿದರು.ಮಹಿಳೆಯರು ಮನೆ ಮತ್ತು ಕಚೇರಿ ಕೆಲಸದಲ್ಲಿ ಹೆಚ್ಚಿನ ಒತ್ತಡ ಇರುವುದರಿಂದ ದಿನ ನಿತ್ಯ ಯೋಗ ಮಾಡುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳ ಬಹುದು. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಶಿಸ್ತು,ಧ್ಯಾನ ರೂಢಿಸಿಕೊಳ್ಳಬೇಕು. ಅವು ನಿಮಗೆ ಶಕ್ತಿಯನ್ನು ತುಂಬುತ್ತವೆ. ವಿದ್ಯಾರ್ಥಿಗಳು ಕಲಿಕೆಯಲ್ಲಿ ಆಸಕ್ತಿ ಮೈಗೂಡಿಸಿಕೊಳ್ಳಬೇಕು, ಕೀಳರಿಮೆ ಹೊಂದಿ ಯಾವುದೇ ಸಂದರ್ಭದಲ್ಲಿಯೂ ಆತ್ಮವಿಶ್ವಾಸವನ್ನು ಕಳೆದುಕೊಳ್ಳಬಾರದು ಎಂದರು.
ಆಹಾರಕ್ಕಾಗಿ ಪ್ರಾಣಿಗಳನ್ನು ಸಾಕುವುದು ಮತ್ತು ಕೊಲ್ಲುವುದು ಪರಿಸರದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ಇದು ಮಾಲಿನ್ಯವನ್ನು ಸೃಷ್ಟಿಸುತ್ತದೆ ಮತ್ತು ಹವಾಮಾನ ಬದಲಾವಣೆಗೆ ಕೊಡುಗೆ ನೀಡುತ್ತದೆ. ಇದರಿಂದ ಜನರು ಪರಿಸರವನ್ನು ರಕ್ಷಿಸುವ ಮಾರ್ಗವಾಗಿ ಸಸ್ಯಾಹಾರವನ್ನು ಅನುಸರಿಸಬೇಕು. ಇತ್ತೀಚಿನ ದಿನಗಳಲ್ಲಿ ಮಾಂಸಾಹಾರಕ್ಕಿಂತ ಸಸ್ಯಾಹಾರ ಸೇವನೆ ಆರೋಗ್ಯಕ್ಕೆ ಮತ್ತು ಪರಿಸರಕ್ಕೆ ಒಳ್ಳೆಯದು ಎಂದು ಹೇಳಿದರು.ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಆರೋಗ್ಯದ ದೃಷ್ಟಿಯಿಂದ ಸಸ್ಯಾಹಾರಿ ಆಹಾರವನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಫೈಬರ್, ಧಾನ್ಯಗಳು, ಕಾಳುಗಳು, ಬೀಜಗಳು ಇತ್ಯಾದಿ ಹೃದಯ ಮತ್ತು ದೇಹದ ಆರೋಗ್ಯಕ್ಕೆ ಉತ್ತಮವಾದ ಕಾರಣ, ಸಸ್ಯ ಆಧಾರಿತ ಆಹಾರವು ಉತ್ತಮ ಹೃದಯದ ಆರೋಗ್ಯಕ್ಕೆ ಸಹಾಯ ಮಾಡುತ್ತದೆ ಎಂದು ಸಂಶೋಧನೆ ತೋರಿಸಿದೆ. ಇದು ಕಡಿಮೆ ರಕ್ತದೊತ್ತಡ, ಮೂಳೆಗಳನ್ನು ಸದೃಢಗೊಳಿಸುವುದು, ತೂಕ ನಿರ್ವಹಣೆ ಮತ್ತು ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ಸದಾನಂದಗಿರಿ ಮಹಾರಾಜ್ ಸ್ವಾಮೀಜಿ ಎಂದು ಹೇಳಿದರು.
ರಾಮನಗರ ಪಿರಮಿಡ್ ಧ್ಯಾನ ಕೇಂದ್ರದ ಮುಖ್ಯಸ್ಥ ಎನ್. ಕೃಷ್ಣಪ್ಪ ಮಾತನಾಡಿ, ಧ್ಯಾನ ಮತ್ತು ಯೋಗಾಸನ ಮಾಡುವುದರಿಂದ ಮನುಷ್ಯ ತಮ್ಮ ಜೀವಿತದ ಕೊನೆವರೆಗೂ ಯಾವುದೇ ಆರೋಗ್ಯದ ಸಮಸ್ಯೆಯಿಲ್ಲದೆ ಜೀವಿಸಬಹುದು ಎಂದು ತಿಳಿಸಿದರು.ರಾಮನಗರ ಪಿರಮಿಡ್ ಧ್ಯಾನ ಕೇಂದ್ರದಲ್ಲಿ ಪ್ರತಿದಿನ ಉಚಿತವಾಗಿ ಯೋಗ ತರಬೇತಿ ನೀಡುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು. ಪ್ರತಿಯೊಬ್ಬ ವ್ಯಕ್ತಿಯೂ ಇಂದು ಒತ್ತಡದಲ್ಲಿ ಬದುಕುತ್ತಿದ್ದಾನೆ. ಹಾಗಾಗಿ ಅವರು ಯೋಗಾಸನ ಮಾಡುವ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ವಕೀಲರಾದ ಗೋಪಾಲಗೌಡ, ಕಿರಣ್, ಶಿಕ್ಷಕ ವಿ.ಎಸ್. ಪ್ರಶಾಂತ್, ಪ್ರಭು ಉಪಸ್ಥಿತರಿದ್ದರು.