ಸಾರಾಂಶ
ಸದೃಢ ಸ್ವಾಸ್ತ್ಯ ಹಾಗೂ ಶಿಸ್ತುಬದ್ಧ ಜೀವನಕ್ಕಾಗಿ ಯೋಗ ಉಪಯುಕ್ತವಾಗಿದೆ ಸದೃಢ ಸ್ವಾಸ್ತ್ಯ ಹಾಗೂ ಶಿಸ್ತುಬದ್ಧ ಜೀವನಕ್ಕಾಗಿ ಯೋಗ ಉಪಯುಕ್ತವಾಗಿದೆ
ಕನ್ನಡಪ್ರಭ ವಾರ್ತೆ ಮೈಸೂರು
ಕೇಂದ್ರ ಸಂವಹನ ಇಲಾಖೆ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಭಾರತ ಸರ್ಕಾರ ಮೈಸೂರು ವತಿಯಿಂದ ನಗರದ ವಾಣಿವಿಲಾಸ ಅರಸು ಬಾಲಿಕ ಪ್ರೌಢಶಾಲೆಯಲ್ಲಿ 10ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಶುಕ್ರವಾರ ಆಚರಿಸಲಾಯಿತು.ನನಗಾಗಿ ಮತ್ತು ಸಮಾಜಕ್ಕಾಗಿ ಯೋಗ ಎಂಬ ಪರಿಕಲ್ಪನೆಯಲ್ಲಿ ಈ ಬಾರಿ ಯೋಗ ಕಾರ್ಯಕ್ರಮ ನಡೆಸಿ ಹಲವು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು.
ಕೇಂದ್ರ ಸಂವಹನ ಇಲಾಖೆ ನಿರ್ದೇಶಕಿ ಪಲ್ಲವಿ ಚಿಣ್ಯ ಮಾತನಾಡಿ, ಸದೃಢ ಸ್ವಾಸ್ತ್ಯ ಹಾಗೂ ಶಿಸ್ತುಬದ್ಧ ಜೀವನಕ್ಕಾಗಿ ಯೋಗ ಉಪಯುಕ್ತವಾಗಿದೆ. ವಿದ್ಯಾರ್ಥಿಗಳು ಪ್ರತಿದಿನ ಯೋಗಾಭ್ಯಾಸ ಮಾಡಿ ಆರೋಗ್ಯವಂತರಾಗಬೇಕು ಎಂದು ಕರೆ ನೀಡಿದರು.ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಒಂದು ತಾಸು ಸಾಮಾನ್ಯ ಯೋಗಾಸನ ಹಾಗೂ ಪ್ರಾಣಾಯಾಮವನ್ನು ಯೋಗ ಗುರು ನಾಗೇಂದ್ರಪ್ರಭು ನೇತೃತ್ವದಲ್ಲಿ ನಡೆಸಲಾಯಿತು.
ಇದೇ ವೇಳೆ ಯೋಗದಲ್ಲಿ ವಿಶ್ವಾದಾಖಲೆ ನಿರ್ಮಿಸಿದ, ಹಲವು ಸ್ಪರ್ಧೆಗಳಲ್ಲಿ ಚಿನ್ನದ ಪದಕ ಪಡೆದ ವಿದ್ಯಾರ್ಥಿನಿ ಜಿ. ಸೌರಭ ಅವರನ್ನು ಸನ್ಮಾನಿಸಲಾಯಿತು.ನುರಿತ ಯೋಗಪಟು ಅಂಕಿತಾ ಯೋಗಾಸನ ಪ್ರದರ್ಶನ ಮಾಡಿ ವಿದ್ಯಾರ್ಥಿಗಳಲ್ಲಿ ಸ್ಪೂರ್ತಿ ತುಂಬಿದರು. ಯೋಗ ದಿನದ ಅಂಗವಾಗಿ ರಂಗೋಲಿ, ಚಿತ್ರಕಲೆ ಹಾಗೂ ಯೋಗ ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕೇಂದ್ರ ಸಂವಹನ ಇಲಾಖೆ ಭಿತ್ತಿಪತ್ರಗಳ ಮೂಲಕ ವಿವಿಧ ಯೋಗಾಸನಗಳ ಜಾಗೃತಿ ಮೂಡಿಸಿತು.
ಕೇಂದ್ರ ಸಂವಹನ ಇಲಾಖೆ ಕ್ಷೇತ್ರ ಪ್ರಚಾರ ಅಧಿಕಾರಿ ಎಸ್.ಟಿ. ಶ್ರುತಿ, ಕ್ಷೇತ್ರ ಪ್ರಚಾರ ಸಹಾಯಕ ಪಿ. ದರ್ಶನ್, ಶಾಲೆಯ ಮುಖ್ಯಪಾಧ್ಯಾಯ ಎನ್. ಸುಬ್ರಮಣ್ಯ, ಶಿಕ್ಷಕರಾದ ಎಸ್. ತೇಜಾವತಿ, ಡಿ.ಆರ್. ನವೀನ್ ಮೊದಲಾದವರು ಇದ್ದರು.