ಉತ್ತಮ ಆರೋಗ್ಯ, ಮನಸ್ಸಿನ ನೆಮ್ಮದಿಗೆ ಯೋಗ ಸಹಕಾರಿ: ವೈ.ವನಜಾ

| Published : Jun 22 2024, 12:47 AM IST

ಸಾರಾಂಶ

ಕಾರಟಗಿ ತಾಲೂಕಿನ ಬೇವಿನಹಾಳ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಜನತಾ ಕ್ಯಾಂಪ್‌ನಲ್ಲಿನ ಅಮೃತ ಸರೋವರ ಅಂಗಳದಲ್ಲಿ ಶುಕ್ರವಾರ ಅಂತಾರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಕಾರಟಗಿ

ನಿತ್ಯ ಯೋಗಾಭ್ಯಾಸ ಮಾಡುವುದರಿಂದ ಮನಸ್ಸು ಮತ್ತು ದೇಹ ಉತ್ಸಾಹದಿಂದ ಕೂಡಿರುತ್ತದೆ, ಆಯಸ್ಸು ವೃದ್ಧಿಯಾಗಲಿದೆ ಎಂದು ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕಿ ವೈ. ವನಜಾ ಹೇಳಿದರು.

ತಾಲೂಕಿನ ಬೇವಿನಹಾಳ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಜನತಾ ಕ್ಯಾಂಪ್‌ನಲ್ಲಿನ ಅಮೃತ ಸರೋವರ ಅಂಗಳದಲ್ಲಿ ಶುಕ್ರವಾರ ಆಯೋಜಿಸಲಾದ ಅಂತಾರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಾರತೀಯ ಪರಂಪರೆಯ ಯೋಗವನ್ನು ಇಂದು ವಿಶ್ವಾದ್ಯಂತೆ ಆಚರಣೆ ಮಾಡುತ್ತಿರುವುದು ನಮ್ಮೆಲ್ಲರ ಹೆಮ್ಮೆ. ನಮ್ಮ ಹಿರಿಯರು ದೈನಂದಿನ ಜೀವನದಲ್ಲಿ ಯೋಗಾಭ್ಯಾಸವನ್ನು ಅಳವಡಿಸಿಕೊಂಡಿದ್ದರು. ಅದರಂತೆ ನಾವೆಲ್ಲರೂ ಪ್ರತಿನಿತ್ಯದ ಕೆಲಸದ ಜೊತೆಗೆ ಯೋಗಾಭ್ಯಾಸ ಮಾಡುವುದು ರೂಢಿಸಿಕೊಳ್ಳಬೇಕು. ಯೋಗ ಮನಸ್ಸಿಗೆ ನೆಮ್ಮದಿ, ಉತ್ತಮ ಆರೋಗ್ಯಕ್ಕೆ ಸಹಕಾರಿ. ಪ್ರತಿದಿನ ದೈಹಿಕ ಚಟುವಟಿಕೆಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವ ಮೂಲಕ ಆರೋಗ್ಯವಂತರಾಗಿಲು ಯೋಗಾಭ್ಯಾಸ ಮಾಡಬೇಕು ಎಂದರು.

ಯೋಗ ತರಬೇತುದಾರರಾದ ವೆಂಕಟೇಶ ಕೆಂಚನಗುಡ್ಡ ಮಾತನಾಡಿ, ಯೋಗಾಭ್ಯಾಸಕ್ಕೆ ತನ್ನದೇಯಾದ ಶಕ್ತಿ ಇದೆ. ನೆಮ್ಮದಿ ಜೀವನ ಸಾಗಿಸಲು ಯೋಗ ಅತ್ಯಾವಶ್ಯಕ. ಪ್ರತಿನಿತ್ಯ ಕನಿಷ್ಠ ಒಂದರಿಂದ ಅರ್ಧಗಂಟೆ ಯೋಗಾಭ್ಯಾಸದಲ್ಲಿ ತೊಡಗಿಸಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಿ ಎಂದರು.

ನಂತರ ವಿವಿಧ ಬಗೆಯ ಯೋಗಾಸನಗಳನ್ನು ತಿಳಿಸಿಕೊಡುವ ಮೂಲಕ ಪ್ರದರ್ಶಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ರವಿ ಕುಮಾರ, ಮಂಜುನಾಥ ಕೋಟೆ, ಯಮನೂರಪ್ಪ ಕಂಬಳಿಹಾಳ, ನಾಗರಾಜ್ ನಾಗನಕಲ್, ಹೂವಪ್ಪ ಪನ್ನಾಪೂರ, ದೊಡ್ಡಪ್ಪ ಬೇವಿನಹಾಳ, ಪಿಡಿಒ ಪ್ರಕಾಶ್ ಹಿರೇಮಠ, ಗ್ರಾಮ ಲೆಕ್ಕಾಧಿಕಾರಿ ಗಂಗಪ್ಪ, ಪ್ರಮುಖರಾದ ಭೀಮಣ್ಣ ಬೋವಿ, ರಾಮ್ ಬಾಬು, ಕಾರ್ಯದರ್ಶಿ ಜಮೀಲ್ ಅಹಮದ್, ಐಇಸಿ ಸಂಯೋಜಕ ಸೋಮನಾಥಗೌಡ ಸೇರಿ ಶಾಲಾ ಶಿಕ್ಷಕರು, ಆಶಾ ಕಾರ್ಯಕರ್ತೆಯರು, ಶಾಲಾ ಮಕ್ಕಳು ಇದ್ದರು.