ಮಾನವನ ಆರೋಗ್ಯ ಕಾಪಾಡುವ ಯೋಗ: ಡಾ.ಚೈತ್ರಾ

| Published : Jun 23 2024, 02:04 AM IST

ಸಾರಾಂಶ

ದೇಹದ ಸಾಮರಸ್ಯ, ಆಲೋಚನೆ, ದೇಹದಲ್ಲಿ ನಡೆಯುವ ಕ್ರಿಯೆಗಳ ನಡುವಿನ ಸಮತೋಲನ, ಸಂಯಮ ಹಾಗೂ ಏಕಾಗ್ರತೆಯನ್ನು ಪ್ರೇರೇಪಿಸುತ್ತದೆ.

ಬಳ್ಳಾರಿ: ಯೋಗವು ಮಾನವನ ಆರೋಗ್ಯ ಕಾಪಾಡುವಲ್ಲಿ ಮಹತ್ವದ ಕೊಡುಗೆ ನೀಡಿದೆ ಎಂದು ಉಡುಪಿಯ ರಾಷ್ಟ್ರ ಮಟ್ಟದ ಯೋಗಪಟು ಡಾ.ಚೈತ್ರಾ ಹೇಳಿದರು.

ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ‘ತನಗಾಗಿ ಮತ್ತು ಸಮಾಜಕ್ಕಾಗಿ ಯೋಗ’ ಎಂಬ ಧ್ಯೇಯ ವಾಕ್ಯದೊಂದಿಗೆ ಶುಕ್ರವಾರ ಆಯೋಜಿಸಿದ್ದ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಯೋಗ ಕೇವಲ ವ್ಯಾಯಾಮವಲ್ಲ. ಮನಸ್ಸು, ದೇಹ, ಆತ್ಮವನ್ನು ಸಂಯೋಜಿಸುತ್ತದೆ. ದೇಹದ ಸಾಮರಸ್ಯ, ಆಲೋಚನೆ, ದೇಹದಲ್ಲಿ ನಡೆಯುವ ಕ್ರಿಯೆಗಳ ನಡುವಿನ ಸಮತೋಲನ, ಸಂಯಮ ಹಾಗೂ ಏಕಾಗ್ರತೆಯನ್ನು ಪ್ರೇರೇಪಿಸುತ್ತದೆ. ಯೋಗದಿಂದಾಗಿ ಒತ್ತಡದ ಜೀವನ ನಿರ್ವಹಿಸಲು ಹಾಗೂ ಆರೋಗ್ಯ ಸುಧಾರಣೆಗೆ ಸಹಕಾರಿಯಾಗಿದೆ ಎಂದು ಹೇಳಿದರು.

ವಿಶ್ವವಿದ್ಯಾಲಯದ ಕುಲಸಚಿವ ಎಸ್.ಎನ್.ರುದ್ರೇಶ್ ಮಾತನಾಡಿ, ಯೋಗವು ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದೆ. ಯೋಗ ದಿನಾಚರಣೆಯು ವೈಯಕ್ತಿಕ ಆರೋಗ್ಯಕ್ಕಾಗಿ ಮಾತ್ರ ಸೀಮಿತವಾಗಿರದೇ ಸಮಾಜಕ್ಕೂ ಮಹತ್ವ ನೀಡಲಾಗಿದೆ. ಯೋಗವನ್ನು ನಮ್ಮಲ್ಲಿ ಅಳವಡಿಸಿಕೊಳ್ಳವುದರಿಂದ ಗುರಿ ಸಾಧನೆಗೆ ಸಹಕಾರಿಯಾಗಿದೆ ಎಂದು ತಿಳಿಸಿದರು.

ಒತ್ತಡ ನಿರ್ವಹಣೆಗಾಗಿ ಜನರು ಇಂದು ಯೋಗ ಅಳವಡಿಸಿಕೊಳ್ಳುತ್ತಿದ್ದಾರೆ. ನಮ್ಮ ವಿಶ್ವವಿದ್ಯಾಲಯದಲ್ಲಿ ಪ್ರತಿನಿತ್ಯ ಯೋಗಾಭ್ಯಾಸ ನಡೆಸಲಾಗುತ್ತದೆ. ಯೋಗಾಭ್ಯಾಸದಲ್ಲಿ ವಿದ್ಯಾರ್ಥಿಗಳು ಭಾಗವಹಿಸಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ತಿಪ್ಪೇರುದ್ರಪ್ಪ, ಯೋಗವು ದಿನಾಚರಣೆಗೆ ಮಾತ್ರ ಸೀಮಿತವಾಗದೇ ನಿತ್ಯವೂ ಯೋಗಭ್ಯಾಸದಲ್ಲಿ ತೊಡಗಿಸಿಕೊಳ್ಳಬೇಕು. ವಿವಿಯಲ್ಲಿ ಯೋಗ ಡಿಪ್ಲೋಮಾ ಆರಂಭಿಸಲಾಗಿದ್ದು, ಕಲಿಕೆಯ ಜೊತೆಗೆ ಯೋಗವನ್ನು ಅಧ್ಯಯನ ಮಾಡಬಹುದಾಗಿದೆ. ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ವಿವಿಯ ಯೋಗ ಅಧ್ಯಯನ ಉಪನ್ಯಾಸಕ ಮಹೇಶಬಾಬು ಯೋಗದ ವಿವಿಧ ಭಂಗಿಗಳ ಮೂಲಕ ಯೋಗಾಭ್ಯಾಸ ಮಾಡಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಡಾ.ಚೈತ್ರಾ ಯೋಗ ಪ್ರದರ್ಶಿಸಿದರು. ಯೋಗ ವಿದ್ಯಾರ್ಥಿಗಳಿಂದ ಯೋಗ ನೃತ್ಯ ಮಾಡಲಾಯಿತು.

ವಿವಿಯ ಸಿಂಡಿಕೇಟ್ ಸದಸ್ಯರಾದ ರಮೇಶ್ ಸವದಿ, ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ಸಂಯೋಜಕ ಡಾ.ಶಶಿಧರ ಕೆಲ್ಲೂರ ಸೇರಿದಂತೆ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ಡೀನರು, ಮುಖ್ಯಸ್ಥರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.