ಚೈತನ್ಯ ತುಂಬುವ ಶಕ್ತಿ ಯೋಗಕ್ಕಿದೆ: ನ್ಯಾ. ಸಿದ್ಧರಾಮ

| Published : Jun 26 2024, 12:37 AM IST

ಸಾರಾಂಶ

ಕಾಯಿಲೆ ಹತ್ತಿರ ಸುಳಿಯದಂತೆ ಚೈತನ್ಯ ತುಂಬುವ, ಮನಸ್ಸು ಸದೃಢಗೊಳಿಸಬಲ್ಲ ಶಕ್ತಿ ಯೋಗಕ್ಕಿದೆ. ದೇಹವನ್ನು ಆರೋಗ್ಯವಾಗಿಟ್ಟುಕೊಳ್ಳಲು ಯೋಗ ಉತ್ತಮ ಉಪಾಯ ಎಂದು ಹಿರಿಯ ಶ್ರೇಣಿ ನ್ಯಾಯಾಧೀಶರಾದ ಸಿದ್ಧರಾಮ ಹೇಳಿದರು.

ಕನ್ನಡಪ್ರಭ ವಾರ್ತೆ ಶಹಾಪುರ

ಕಾಯಿಲೆ ಹತ್ತಿರ ಸುಳಿಯದಂತೆ ಚೈತನ್ಯ ತುಂಬುವ, ಮನಸ್ಸು ಸದೃಢಗೊಳಿಸಬಲ್ಲ ಶಕ್ತಿ ಯೋಗಕ್ಕಿದೆ. ದೇಹವನ್ನು ಆರೋಗ್ಯವಾಗಿಟ್ಟುಕೊಳ್ಳಲು ಯೋಗ ಉತ್ತಮ ಉಪಾಯ ಎಂದು ಹಿರಿಯ ಶ್ರೇಣಿ ನ್ಯಾಯಾಧೀಶರಾದ ಸಿದ್ಧರಾಮ ಹೇಳಿದರು.

ನಗರದ ಸಿಪಿಎಸ್ ಶಾಲಾ ಮೈದಾನ ಹಾಗೂ ಪೊಲೀಸ್ ಮೈದಾನದಲ್ಲಿ ಪತಂಜಲಿ ಯೋಗ ವಿಜ್ಞಾನ ತರಬೇತಿ ಕೇಂದ್ರ, ಶಹಾಪುರ, ವೈದ್ಯ ಶ್ರೀ ಸಮಗ್ರ ಆರೋಗ್ಯ ಕೇಂದ್ರ ಶಹಾಪುರ ಹಾಗೂ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸೇಡಂ ವತಿಯಿಂದ ನಡೆದ ಹತ್ತನೇ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಯೋಗ ಮಾಡುವುದರಿಂದ ಮನಸ್ಸು ಮತ್ತು ದೇಹ ಎರಡನ್ನೂ ಆರೋಗ್ಯವಾಗಿಟ್ಟುಕೊಳ್ಳಬಹುದು. ದೈನಂದಿನ ಜೀವನದಲ್ಲಿ ಪುರುಷರು ಮತ್ತು ಮಹಿಳೆಯರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು, ಮಾನಸಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಯೋಗ ಸೂಕ್ತ ಮಾರ್ಗದರ್ಶಕವಾಗಿದೆ ಎಂದರು.

ಮಕ್ಕಳ ಖ್ಯಾತ ವೈದ್ಯ ಡಾ. ಸುಧತ್ ದರ್ಶನಾಪುರ ಮಾತನಾಡಿ, ಮಾನಸಿಕ ಶಾಂತಿ ಯೋಗಾಸನಗಳ ಜೊತೆಗೆ ಸೂರ್ಯ ನಮಸ್ಕಾರ, ಪ್ರಾಣಾಯಾಮ, ಧ್ಯಾನ ಕೂಡ ಉತ್ತಮ ಪೂರಕ ಮಾರ್ಗ ಹೌದು. ಇದರಿಂದ ಚಂಚಲತೆ ದೂರವಾಗಿ, ಮಾನಸಿಕವಾಗಿ ಶಾಂತಿ ಲಭಿಸುವುದು, ಮನಸ್ಸನ್ನು ನಿಗ್ರಹಿಸುವ ಶಕ್ತಿ ವೃದ್ಧಿಯಾಗುವದು ಎಂದು ಅವರು ಹೇಳಿದರು.

ಯೋಗ ಗುರು ನರಸಿಂಹ ವೈದ್ಯ ಮಾತನಾಡಿದರು. ತಹಸೀಲ್ದಾರ್ ವಿಜಯೇಂದ್ರ ಹುಲಿ ನಾಯಕ್, ಡಾ. ವೆಂಕಟೇಶ್ ಬೈರಾವಡಗಿ, ಡಾ. ಬಸವರಾಜ ಹಾದಿಮನಿ, ಪಿಎಸ್ಐ ಸೋಮಲಿಂಗಪ್ಪ, ದೇವರಾಜ್ ಹೊನ್ನಾರೆಡ್ಡಿ, ಸೇರಿದಂತೆ ಅನೇಕ ಮುಖಂಡರು ಹಾಗೂ ಶಿಬಿರಾರ್ಥಿಗಳು ಭಾಗವಹಿಸಿದ್ದರು.