ಸಾರಾಂಶ
ನಗರದ ಗೋಕುಲ ಬಡಾವಣೆಯಲ್ಲಿ ನಾಗರಿಕ ಸಮಿತಿಯವರು ರಥಸಪ್ತಮಿ ಅಂಗವಾಗಿ ಪೂರ್ವಭಾವಿ ಯೋಗ ಅಭ್ಯಾಸ ಹಾಗೂ ಅಗ್ನಿಸ್ತೋತ್ರ ಹೋಮ ಏರ್ಪಡಿಸಿದ್ದರು.
ಕನ್ನಡಪ್ರಭ ವಾರ್ತೆ ತುಮಕೂರು
ನಗರದ ಗೋಕುಲ ಬಡಾವಣೆಯಲ್ಲಿ ನಾಗರಿಕ ಸಮಿತಿಯವರು ರಥಸಪ್ತಮಿ ಅಂಗವಾಗಿ ಪೂರ್ವಭಾವಿ ಯೋಗ ಅಭ್ಯಾಸ ಹಾಗೂ ಅಗ್ನಿಸ್ತೋತ್ರ ಹೋಮ ಏರ್ಪಡಿಸಿದ್ದರು. ಮಂಜುಳಾ, ಮರಿಬಸಪ್ಪ ಹಾಗೂ ಶಕುಂತಲ, ಪ್ರೇಮ್‌ಕುಮಾರ್ ಯಜ್ಞಧಾರಿಗಳಾಗಿ ಹೋಮಕಾರ್ಯದಲ್ಲಿ ಪಾಲ್ಗೊಂಡಿದ್ದರು. ಇದರ ಪ್ರಯುಕ್ತ ಪೂರ್ಣಾಹುತಿ, ವಿವಿಧ ಧಾರ್ಮಿಕ ವಿಧಿವಿಧಾನಗಳು, 108 ಸೂರ್ಯ ನಮಸ್ಕಾರ, ಸಾಮೂಹಿಕ ಯೋಗ ಅಭ್ಯಾಸ ಕಾರ್ಯಕ್ರಮ ನಡೆಯಿತು.ನಿವೃತ್ತ ಪ್ರಾಚಾರ್ಯ ಮರಿಬಸಪ್ಪ ಮಾತನಾಡಿ, ಭಾರತೀಯ ಧರ್ಮ, ಸಂಸ್ಕೃತಿ, ಪರಂಪರೆಯ ಭಾಗವಾಗಿ ಯೋಗ ಮಹತ್ವ ಪಡೆದಿದೆ. ಯೋಗ ಅಂತಾರಾಷ್ಟ್ರೀಯ ಮಟ್ಟದಲ್ಲೂ ಖ್ಯಾತಿ ಪಡೆದು ವಿಶ್ವ ಯೋಗ ದಿನ ಘೋಷಣೆಯಾಗಿ ವಿವಿಧ ದೇಶಗಳಲ್ಲಿ ಆಚರಣೆಯಾಗುತ್ತಿದೆ. ಶಿಸ್ತಿನ ಜೀವನಕ್ಕಾಗಿ ಪ್ರತಿಯೊಬ್ಬರೂ ಯೋಗಾಭ್ಯಾಸ ಮಾಡಿಕೊಳ್ಳಬೇಕು ಎಂದರು.ನಿತ್ಯ ಯೋಗ ಮಾಡುವುದರಿಂದ ದೈಹಿಕ, ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ. ಧಾರ್ಮಿಕ ಪರಂಪರೆಯ ಮೌಲ್ಯಗಳನ್ನು ಅನುಸರಿಸಿದಂತಾಗುತ್ತದೆ. ಯೋಗದಿಂದ ಅನೇಕ ಕಾಯಿಲೆಗಳು ದೂರವಾಗುತ್ತವೆ. ಆರೋಗ್ಯಕರ ಬದುಕು ನಮ್ಮದಾಗುತ್ತದೆ ಎಂದು ಹೇಳಿದರು.ಮುಖಂಡ ಪ್ರೇಮ್‌ಕುಮಾರ್ ಮಾತನಾಡಿ, ರಥ ಸಪ್ತಮಿ ಪ್ರಯುಕ್ತ ಸಾಮೂಹಿಕ ಯೋಗ ಅಭ್ಯಾಸ ನಡೆಸಲಾಗಿದೆ. ನಾಗರಿಕರು ಇದನ್ನೇ ನಿತ್ಯದ ಅಭ್ಯಾಸ ಮಾಡಿಕೊಂಡು ಶಿಸ್ತಿನ ಬದುಕು ರೂಪಿಸಿಕೊಳ್ಳಿ, ಯೋಗ ಅಭ್ಯಾಸದಲ್ಲಿ ತೊಡಗಿಕೊಳ್ಳಲು ಮಕ್ಕಳಿಗೆ ತಿಳಿಸಿ ಎಂದು ಹೇಳಿದರು.ಬಿಜೆಪಿ ಮುಖಂಡ ಪಿ.ಮೂರ್ತಿ, ಮುಖಂಡರಾದ ತ್ಯಾಗರಾಜು, ಮಲ್ಲಿಕಾರ್ಜುನ್, ನಂದಿನಿ, ಮಹದೇವಪ್ಪ ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು.