ಮುಂಡರಗಿ: ಸ್ವಾಸ್ಥ್ಯ ಬದುಕಿಗೆ ಯೋಗ ಮತ್ತು ಧ್ಯಾನ ಅತ್ಯವಶ್ಯಕ. ಇಂದಿನ ಒತ್ತಡದ ಬದುಕಿಗೆ ಯೋಗ, ಧ್ಯಾನ ಮತ್ತು ವ್ಯಾಯಾಮದ ತೀವ್ರ ಅವಶ್ಯಕತೆ ಇದೆ. ಯೋಗದಿಂದ ಮನುಷ್ಯನ ಆರೋಗ್ಯ ವೃದ್ಧಿಯಾಗುತ್ತದೆ ಎಂದು ದಿವಾಣಿ ನ್ಯಾಯಾಲಯದ ನ್ಯಾಯಾಧೀಶ ಬಸವರಾಜ ಹೇಳಿದರು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ ಮತ್ತು ವಕೀಲರ ಸಂಘಗಳ ಆಶ್ರಯದಲ್ಲಿ ಭಾನುವಾರ ನಡೆದ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಮನಸ್ಸಿನ ತಳಮಳ, ಅತಿಯಾದ ಕೋಪ, ಗ್ಯಾಸ್ಟ್ರಿಕ್, ಅಲರ್ಜಿಯಂತಹ ಕಾಯಿಲೆಗಳಿಂದ ಮುಕ್ತವಾಗಿ ಜೀವನ ನಡೆಸಲು ಯೋಗ ಒಂದು ಸರಳ ಮತ್ತು ಪರಿಣಾಮಕಾರಿ ವಿಧಾನ. ನಿತ್ಯ ಜೀವನದಲ್ಲಿ ನಾವು ಯೋಗ ಅಳವಡಿಸಿಕೊಳ್ಳುವ ಮೂಲಕ ಸುಂದರವಾಗಿ ಜೀವನ ಸಾಗಿಸಬಹುದಾಗಿದೆ ಎಂದರು.ಸಿಪಿಐ ಅಯ್ಯನಗೌಡ ಪಾಟೀಲ, ವಕೀಲರಾದ ಜಿ.ಜಿ. ಈಳಗೇರ, ಎನ್.ವಿ. ಹಿರೇಮಠ, ಎಂ.ವಿ. ಅರಳಿ, ಶಕೀಲಾಬಾನು ನಾಗರಳ್ಳಿ, ಎಂ.ಎಸ್. ಉಪ್ಪಿನಬೆಟಗೇರಿ ಹಾಗೂ ನ್ಯಾಯಾಲಯ, ಪೊಲೀಸ್, ಅರಣ್ಯ ಇಲಾಖೆ ಸಿಬ್ಬಂದಿ ಭಾಗವಹಿಸಿದ್ದರು. ಪರಿಸರ ಸಂರಕ್ಷಣೆಯ ಸದುದ್ದೇಶದೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸರ್ವರಿಗೂ ಸಸಿಗಳನ್ನು ವಿತರಿಸಲಾಯಿತು. ಗಂಗಾ ಯಾಳಗಿ ಮತ್ತು ಜ್ಯೋತಿ ಹಕ್ಕಂಡಿ ಯೋಗ ಕಾರ್ಯಕ್ರಮ ನಡೆಸಿಕೊಟ್ಟರು.ಯೋಗದಿಂದ ದೇಹ- ಮನಸ್ಸಿನ ಸಮತೋಲನ
ಶಿರಹಟ್ಟಿ: ಯೋಗವು ದೇಹ, ಮನಸ್ಸು ಮತ್ತು ಚಿಂತನೆಗಳಲ್ಲಿ ಸಮತೋಲನ ಬೆಳೆಸುವ ಜೀವನ ವಿಧಾನವಾಗಿದ್ದು, ಆರೋಗ್ಯಕರ ಬದುಕಿಗೆ ಪೂರಕವಾಗಿದೆ ಎಂದು ಯೋಗ ಮಾರ್ಗದರ್ಶಕ ಬಿ.ಎಸ್. ಗೋಣಿ ತಿಳಿಸಿದರು.ತಾಲೂಕಿನ ಮಜ್ಜೂರು ಗ್ರಾಮದ ಶ್ರೀ ಸತ್ಯಸಾಯಿ ವಾಣಿನಿಕೇತನ ಬಾಲಕಿಯರ ವಿದ್ಯಾಸಂಸ್ಥೆ ಗುರುಕುಲದಲ್ಲಿ ಭಾನುವಾರ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಿ ಮಾತನಾಡಿದರು. ದಿನವೂ ಸೂರ್ಯ ನಮಸ್ಕಾರ ಮಾಡುವುದರಿಂದ ನಮ್ಮ ದೇಹ ಮತ್ತು ಮನಸ್ಸು ಸ್ಥಿಮಿತದಲ್ಲಿರುತ್ತದೆ. ಮನಸ್ಸು ಮತ್ತು ಸ್ವಾಸ್ಥಕ್ಕೆ ಯೋಗ ಪರಿಣಾಮಕಾರಿಯಾಗಿದ್ದು, ಪ್ರತಿಯೊಬ್ಬರೂ ಯೋಗಾಭ್ಯಾಸ ಮಾಡಬೇಕು ಎಂದರು.ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷೆ ಡಾ. ಸೀಮಾ, ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.