ಯೋಗದಿಂದ ಮಾನಸಿಕ, ದೈಹಿಕ ಆರೋಗ್ಯ ವೃದ್ಧಿ: ಅನಿಲ ಬಡಿಗೇರ

| Published : Jun 23 2024, 02:08 AM IST

ಸಾರಾಂಶ

ಶಿರಹಟ್ಟಿ ತಾಲೂಕು ಕ್ರೀಡಾಂಗಣದಲ್ಲಿ ಶುಕ್ರವಾರ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಯಿತು. ತಹಸೀಲ್ದಾರ್‌ ಅನಿಲ್‌ ಬಡಿಗೇರ ಭಾಗವಹಿಸಿ ಮಾತನಾಡಿ, ಮನಸ್ಸು ಮತ್ತು ಸ್ವಾಸ್ಥಕ್ಕೆ ಯೋಗ ಪರಿಣಾಮಕಾರಿಯಾಗಿದ್ದು, ಪ್ರತಿಯೊಬ್ಬರೂ ಯೋಗಾಭ್ಯಾಸ ಮಾಡಬೇಕು ಎಂದು ಹೇಳಿದರು.

ಶಿರಹಟ್ಟಿ: ಯೋಗದಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯ ವೃದ್ಧಿಯಾಗುತ್ತದೆ. ಯೋಗಾಭ್ಯಾಸ ಮಾಡುವುದರಿಂದ ಉತ್ತಮ ಆರೋಗ್ಯಕರ ಜೀವನ ಸಾಗಿಸಲು ಸಾಧ್ಯವಾಗುತ್ತದೆ ಎಂದು ತಹಸೀಲ್ದಾರ್ ಅನಿಲ ಬಡಿಗೇರ ಹೇಳಿದರು.

ತಾಲೂಕು ಆಡಳಿತ, ಶಿರಹಟ್ಟಿ ತಾಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಪಟ್ಟಣ ಪಂಚಾಯಿತಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಪೊಲೀಸ್ ಇಲಾಖೆ ಸಹಯೋಗದಲ್ಲಿ ಶುಕ್ರವಾರ ತಾಲೂಕು ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ೧೦ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ದಿನವೂ ಸೂರ್ಯ ನಮಸ್ಕಾರ ಮಾಡುವುದರಿಂದ ನಮ್ಮ ದೇಹ ಮತ್ತು ಮನಸ್ಸು ಸ್ಥಿಮಿತದಲ್ಲಿರುತ್ತದೆ. ಮನಸ್ಸು ಮತ್ತು ಸ್ವಾಸ್ಥಕ್ಕೆ ಯೋಗ ಪರಿಣಾಮಕಾರಿಯಾಗಿದ್ದು, ಪ್ರತಿಯೊಬ್ಬರೂ ಯೋಗಾಭ್ಯಾಸ ಮಾಡಬೇಕು ಎಂದು ಹೇಳಿದರು.

ಸಂಪತ್ತಿಗಿಂತ ಆರೋಗ್ಯ ಅತ್ಯಮೂಲ್ಯವಾಗಿರುವುದರಿಂದ ಪ್ರತಿಯೊಬ್ಬರೂ ತಪ್ಪದೇ ಯೋಗ ಮಾಡುವ ಮೂಲಕ ಶರೀರ ಮತ್ತು ಮನಸ್ಸನ್ನು ಸದೃಢವಾಗಿಟ್ಟುಕೊಳ್ಳಬಹುದು. ಹಿಂದಿನ ಕಾಲದಲ್ಲಿ ಎಲ್ಲರೂ ದೈಹಿಕವಾಗಿ ಶ್ರಮ ಪಡುತ್ತಿದ್ದರು. ಆಧುನಿಕ ಯುಗದಲ್ಲಿ ಭೋಗದ ಜೀವನಕ್ಕೆ ಮಾರುಹೋಗುತ್ತಿರುವುದರಿಂದ ರೋಗಕ್ಕೆ ತುತ್ತಾಗುತ್ತಿದ್ದಾರೆ. ಅದಕ್ಕಾಗಿ ದಿನಕ್ಕೆ ಒಂದು ಗಂಟೆಯಾದರೂ ಯೋಗ ಮಾಡುವ ಅಭ್ಯಾಸ ಮೈಗೂಡಿಸಿಕೊಳ್ಳಬೇಕು. ಇದರಿಂದ ಸದಾ ಲವಲವಿಕೆಯಿಂದಿರಬಹುದು ಎಂದು ಹೇಳಿದರು.

ಪಪಂ ಮುಖ್ಯಾಧಿಕಾರಿ ಸಿದ್ದರಾಯ ಕಟ್ಟಿಮನಿ ಮಾತನಾಡಿ, ಅನಾದಿ ಕಾಲದಿಂದಲೂ ಒಂದಲ್ಲ ಒಂದು ರೀತಿಯ ರೋಗ ಮನುಕುಲಕ್ಕೆ ಕಾಟ ಕೊಡುತ್ತಿದೆ. ದೇಹವನ್ನು ದಂಡಿಸಿ ಯಾರು ಬದುಕುತ್ತಾರೋ ಅಂತಹವರು ಮಾತ್ರ ರೋಗ ಹಿಮ್ಮೆಟ್ಟಿಸಲು ಸಾಧ್ಯ. ಮನುಷ್ಯನಿಗೆ ಆರೋಗ್ಯವೇ ಮಹಾಭಾಗ್ಯ. ಯೋಗಾಸನದಿಂದ ನಮ್ಮ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಯೋಗ ಪದ್ಧತಿ ಭಾರತದ ಆಸ್ತಿ. ಯೋಗಾಭ್ಯಾಸ ರೂಢಿಸಿಕೊಳ್ಳುವುದರಿಂದ ಆರೋಗ್ಯಕರ ಜೀವನ ಸಾಗಿಸಬಹುದು. ಯೋಗವು ನಮ್ಮ ದೇಶದ ಪುರಾತನ ಕಲೆ. ಋಷಿಗಳು ಯೋಗವನ್ನು ಅಳವಡಿಸಿಕೊಂಡಿದ್ದರು. ದಿನನಿತ್ಯ ಯೋಗಾಸನ ಮಾಡುವುದರಿಂದ ರೋಗಗಳನ್ನು ದೂರ ಇಡಬಹುದು ಎಂದು ಹೇಳಿದರು.

ಕಪ್ಪತಮಲ್ಲಯ್ಯನ ಯೋಗ ಪತಂಜಲಿ ಬಸವ ಜ್ಞಾನ ಆಶ್ರಮದ ವೀರೇಶ ಗುರುಜಿ ಯೋಗ ಧ್ಯಾನದ ಬಗ್ಗೆ ಮಾರ್ಗದರ್ಶನ ಮಾಡಿದರು. ಪಿಎಸ್‌ಐ ಶಿವಾನಂದ ಲಮಾಣಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್. ನಾಯಕ, ಸಮಾಜ ಕಲ್ಯಾಣ ಇಲಾಖೆಯ ಶರಣಯ್ಯ ಕುಲಕರ್ಣಿ, ಕೌಸಿಕ ದಳವಾಯಿ, ಎಂ.ಕೆ. ಲಮಾಣಿ, ಎನ್.ಎನ್. ಸಾವಿರಕುರಿ, ಹನುಮೇಶ ಕೊಂಡಿಕೊಪ್ಪ, ಕೆ.ಎ. ಬಳಿಗೇರ ಹಾಗೂ ಶಾಲಾ ವಿದ್ಯಾರ್ಥಿಗಳು ಇದ್ದರು.