ಸಾರಾಂಶ
ಕನ್ನಡಪ್ರಭ ವಾರ್ತೆ ಕನಕಗಿರಿ
ಜಡತ್ವ ತುಂಬಿರುವ ದೇಹಕ್ಕೆ ಯೋಗ ಅಗತ್ಯವಿದೆ ಎಂದು ತಾಪಂ ಕಾರ್ಯನಿರ್ವಾಹಕಾಧಿಕಾರಿ ಕೆ. ರಾಜಶೇಖರ ಹೇಳಿದರು.ಶುಕ್ರವಾರ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ತಾಲೂಕಿನ ಚಿಕ್ಕಡಂಕನಕಲ್ ಗ್ರಾಪಂ ವ್ಯಾಪ್ತಿಯ ಚಿರ್ಚನಗುಡ್ಡ ತಾಂಡಾ ಅಮೃತ ಸರೋವರದ ದಡದಲ್ಲಿ ಹಮ್ಮಿಕೊಂಡಿದ್ದ ಯೋಗ ಕಾರ್ಯಕ್ರಮದಲ್ಲಿ ಮಾತನಾಡಿದರು.ಇಂದಿನ ಧಾವಂತದ ಬದುಕಿನಲ್ಲಿ ನಿತ್ಯ ಸಮಸ್ಯೆಗಳೊಂದಿಗೆ ನಾವು ಹೋರಾಡಬೇಕಿದೆ. ಅದು ಮಾನಸಿಕ, ಆರ್ಥಿಕ ಅಥವಾ ಆರೋಗ್ಯದ ಸಮಸ್ಯೆಗಳಿರಬಹುದು. ಯೋಗ ಮೈಗೂಡಿಸಿಕೊಂಡರೆ ಇಂತಹ ಜಟಿಲ ಸಮಸ್ಯೆಗಳಿಗೆ ಎದೆಯೊಡ್ಡಿ ನಿಲ್ಲಬಹುದು. ಯೋಗ ಎಲ್ಲರಿಗೂ ಕೈಗೆಟುಕುವಂಥದ್ದು. ದುಬಾರಿ ಸಾಧನಗಳು ಬೇಕಿಲ್ಲ. ಹಣ ವ್ಯಯಿಸುವ ಅಗತ್ಯವೂ ಇಲ್ಲ. ಮಕ್ಕಳಿಂದ ವೃದ್ಧರ ವರೆಗೂ ಸರಳವಾಗಿ ಯೋಗ ಕಲಿಯಬಹುದು. ನೀರು, ಗಾಳಿ, ವಾತಾವಾರಣ ಕಲುಷಿತವಾಗಿರುವ ಇಂದಿನ ಕಾಲಘಟ್ಟದಲ್ಲಿ ಆರೋಗ್ಯಯುತ ಜೀವನಕ್ಕೆ ಯೋಗವೇ ಮದ್ದು ಎಂದು ತಿಳಿಸಿದರು.
ನಂತರ ಯೋಗ ಶಿಕ್ಷಕಿ ಅಂಬಿಕಾ ಬಾಯಿ ಅವರು ನೆರೆದಿದ್ದ ಎಲ್ಲರಿಗೂ ವಿವಿಧ ಆಸನಗಳನ್ನು ತಿಳಿಸಿ ಅವುಗಳ ಮಹತ್ವವನ್ನು ತಿಳಿಸಿಕೊಟ್ಟರು. ಬಳಿಕ ನರೇಗಾ ಕಾಯಕ ಬಂಧುಗಳಿಗೆ ಗ್ರಾಪಂ ವತಿಯಿಂದ ನೀರಿನ ಕ್ಯಾನ್ ಗಳನ್ನು ವಿತರಿಸಿದರು.ಪಿಡಿಒ ಈರಪ್ಪ, ಅಧ್ಯಕ್ಷೆ ನೀಲಮ್ಮ ಬಸವರಾಜ, ಉಪಾಧ್ಯಕ್ಷ ರಾಮಚಂದ್ರಗೌಡ, ತಾಲೂಕು ಐಇಸಿ ಸಂಯೋಜಕ ಶಿವಕುಮಾರ, ಕೂಲಿಕಾರರು, ಅಂಗನವಾಡಿ-ಆಶಾ ಕಾರ್ಯಕರ್ತೆಯರು, ಶಾಲಾ ಮಕ್ಕಳು, ಗ್ರಾಪಂ ಸಿಬ್ಬಂದಿ ಉಪಸ್ಥಿತರಿದ್ದರು.