ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಯೋಗ- ಸಂಗೀತ ಸಹಿತ ಭಾರತೀಯರ ಜೀವನ ಶೈಲಿ, ಪದ್ಧತಿ ಅದ್ಭುತವಾಗಿದೆ ಎಂದು ನೂತನ ಸಂಸದ ಡಾ.ಕೆ.ಸುಧಾಕರ್ ತಿಳಿಸಿದರು.ನಗರದ ಸರ್. ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಪತಂಜಲಿ ಯೋಗ ಶಿಕ್ಷಣ ಸಮಿತಿ ಹಾಗೂ ಇತರ ಯೋಗ ಸಂಸ್ಥೆಗಳ ಸಹಯೋಗದೊಂದಿಗೆ ಆಯೋಜಿಸಿದ್ದ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಜಿಲ್ಲಾಮಟ್ಟದ ಕಾರ್ಯಕ್ರಮದಲ್ಲಿ ಬಾಗವಹಿಸಿ ಮಾತನಾಡಿ, ಭಾರತೀಯರ ಕೌಟುಂಬಿಕ ಪದ್ಧತಿ, ಆಹಾರ ಪದ್ಧತಿ ಮತ್ತು ವ್ಯಾಯಾಮ ಪದ್ಧತಿಗಳು ಅತ್ಯಂತ ವೈಶಿಷ್ಟ್ಯಪೂರ್ಣವಾಗಿವೆ ಎಂದರು.
ಇತ್ತೀಚಿನ ದಿನಗಳಲ್ಲಿ ಭಾರತೀಯರು ಬದಲಾದ ಜೀವನ ಶೈಲಿಗೆ ಮಾರು ಹೋಗುತ್ತಿದ್ದಾರೆ. ಯೋಗಾಸನ, ಪ್ರಾಣಾಯಾಮ, ಸಂಗೀತ ಮತ್ತು ಸಾಂಪ್ರದಾಯಿಕ ಆಹಾರ ಪದ್ಧತಿಗಳಿಂದ ದೂರವಾಗುತ್ತಿರುವುದು ದೌರ್ಭಾಗ್ಯವೇ ಸರಿ, ಪ್ರಧಾನಿ ನರೇಂದ್ರ ಮೋದಿ ಅವರು 2014ರ ನಂತರ ಯೋಗದ ಮಹತ್ವವನ್ನು ಸಾರಿ, ಸಾದರಪಡಿಸಿದರು. ಈ ಮೂಲಕ ಭಾರತೀಯರಲ್ಲಿ ದೇಸಿ ಯೋಗ ಪದ್ಧತಿ, ಆಹಾರ ಪದ್ಧತಿ, ಸಂಗೀತ - ಸಂಪ್ರದಾಯಗಳನ್ನು ಮರು ಪ್ರತಿಷ್ಠಾಪಿಸುತ್ತಿದ್ದಾರೆ ಎಂದು ಹೇಳಿದರು.ನರೇಂದ್ರ ಮೋದಿ ಅವರು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಘೋಷಿಸಿ, ಭಾರತೀಯರೆಲ್ಲ ಪಾಲಿಸುವಂತೆ ಪ್ರೇರೇಪಿಸಿದ್ದು, ಈಗ ಜಗತ್ತೇ ಮೋದಿ ಅವರ ಯೋಗ ಕಾರ್ಯಕ್ರಮವನ್ನು ಅನುಸರಿಸುತ್ತಿದೆ. ವಿವಿಧ ರಾಷ್ಟ್ರಗಳು ಯೋಗ ಆಚರಣೆಯಲ್ಲಿ ತೊಡಗಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿ ಜಮ್ಮು ಕಾಶ್ಮೀರದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳುವ ಮೂಲಕ ವಿಶೇಷತೆ ಮೆರೆದಿದ್ದಾರೆ. ಅಲ್ಲಿಯ ಜನರಿಗೆ ಒಂದು ಶಕ್ತಿ, ಧೈರ್ಯದ ಸಾಕಾರಮೂರ್ತಿಯಾಗಿ ಅವರೊಂದಿಗೆ ನಿಂತಿದ್ದಾರೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಯೋಗ ಪ್ರದರ್ಶಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಉನ್ನತ ಶಿಕ್ಷಣ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ. ಸಿ.ಸುಧಾಕರ್ ಮಾತನಾಡಿ, ಯೋಗಕ್ಕೆ ಐದು ಸಾವಿರ ವರ್ಷಗಳ ಇತಿಹಾಸವಿದೆ. ಯೋಗವು ಯಾವುದೇ ಜಾತಿ, ಧರ್ಮ, ಮತ, ಪಂಥಕ್ಕೆ ಸೀಮಿತವಾಗದೇ ಎಲ್ಲವನ್ನೂ, ಎಲ್ಲರನ್ನೂ ಮೀರಿಸುವ ವಿಶ್ವಕುಟುಂಬಿಯಾಗಿ ಹಾಗೂ ವಿಶ್ವ ಆರೋಗ್ಯಕ್ಕಾಗಿ ಸಾಕಾರಗೊಂಡಿದೆ. ನನಗೆ ಯೋಗ ಮಾಡುವ ಅಭ್ಯಾಸ ಮುದ್ದೇನಹಳ್ಳಿಯಲ್ಲಿ ವಿದ್ಯಾಬ್ಯಾಸ ಮಾಡುವಾಗಲಿಂದಲೂ ಇದೆ ಎಂದರು.ಯೋಗ ಶಿಕ್ಷಕ ಡಾ.ಎನ್.ಲೋಕನಾಥ್,ಆಸನಗಳ ನಿರ್ದೇಶನಗಳನ್ನು ನೀಡಿದರು. ಆಸನಗಳ ನಿರ್ದೇಶನಕ್ಕೆ ತಕ್ಕಂತೆ ಗಣ್ಯರು, ವಿದ್ಯಾರ್ಥಿಗಳು, ಯೋಗ ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು 45 ನಿಮಿಷಗಳ ಕಾಲ ವಿವಿಧ ಆಸನಗಳನ್ನು ಪ್ರದರ್ಶಿಸಿದರು. ಯೋಗ ಶಿಕ್ಷಕರಾದ ವೀಣಾ ಲೋಕನಾಥ್, ಸುಧಾ ನಾಗರಾಜ್, ಪೊಲೀಸ್ ನಾಗರಾಜ್, ಮಂಚನ ಬಲೆ ರವಿ,ಗೋವಿಂದ ಅವರು ಆಸನಗಳ ನಿರ್ದೇಶನಕ್ಕೆ ತಕ್ಕಂತೆ ಮಾದರಿಯಾಗಿ ಆಸನಗಳನ್ನು ನಿರಾಯಸವಾಗಿ ವೇದಿಕೆಯಿಂದ ಪ್ರದರ್ಶಿಸಿದರು. ಅವರನ್ನು ಇತರರು ಅನುಕರಿಸಿ ಯೋಗ ಕಾರ್ಯಕ್ರಮವನ್ನು ಯಶಸ್ವಿಯಾಗಿಸಿದರು.ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಪಿ. ಎನ್.ರವೀಂದ್ರ, ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಪ್ರಕಾಶ್ ಜಿ. ಟಿ.ನಿಟ್ಟಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ಎಲ್.ನಾಗೇಶ್, ಅಪರ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಐ. ಖಾಸಿಂ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಡಾ ಭಾಸ್ಕರ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ತಬಿಬಾ ಬಾನು, ಜಿಲ್ಲಾ ಅರೋಗ್ಯ ಅಧಿಕಾರಿ ಡಾ. ಎಸ್ ಮಹೇಶ್ ಕುಮಾರ್, ಡಿಡಿಪಿಐ ಬೈಲಾಂಜಿನಪ್ಪ ಮತ್ತಿತರರು ಇದ್ದರು.ಯೋಗಕ್ಕೆ ಗುರು ಅಯ್ಯಂಗಾರ್ ಕೊಡುಗೆ ಅನನ್ಯ: ಸಂಸದನಮ್ಮ ದೇಶದ ಪ್ರಾಚೀನ ಪರಂಪರೆಯಲ್ಲಿ ಪತಂಜಲಿ ಮಹರ್ಷಿಯವರಿಂದ ರೂಪುಗೊಂಡು,ಕೋಲಾರ ಜಿಲ್ಲೆಯಲ್ಲಿ ಜನಿಸಿದ ಬಿಕೆಎಸ್ ಅಯ್ಯಂಗಾರ್ ಅವರು ಜಾಗತಿಕವಾಗಿ ಯೋಗದ ಅಭ್ಯಾಸವನ್ನು ಕ್ರಾಂತಿಗೊಳಿಸಿದರು. ಆರೋಗ್ಯ ಸಮಸ್ಯೆಗಳಿಂದ ಕೂಡಿದ ಬಾಲ್ಯದ ಹೊರತಾಗಿಯೂ, ಅಯ್ಯಂಗಾರ್ ಅವರ ಯೋಗದ ಪಯಣ, ಅವರ ಸೋದರ ಮಾವ ಟಿ. ಕೃಷ್ಣಮಾಚಾರ್ಯರ ಮಾರ್ಗದರ್ಶನದಲ್ಲಿ, ಆರೋಗ್ಯಕ್ಕಾಗಿ ಅವರ ವೈಯಕ್ತಿಕ ಅನ್ವೇಷಣೆಯನ್ನು ಯೋಗಕ್ಕೆ ಜೀವಮಾನದ ಸಮರ್ಪಣೆಯಾಗಿ ಪರಿವರ್ತಿಸಿತು. ಅವರ ವಿಧಾನ, ಅಯ್ಯಂಗಾರ್ ಯೋಗ, ನಿಖರತೆ, ಜೋಡಣೆಯು ಅಭ್ಯಾಸಕಾರರು ಸರಿಯಾದ ಭಂಗಿಗಳನ್ನು ಸುರಕ್ಷಿತವಾಗಿ ಮತ್ತು ಪರಿಣಾಮಕಾರಿಯಾಗಿ ಸಾಧಿಸಲು ಸಹಕಾರಿಯಾಗಿವೆ. ಹೀಗೆ ಆಚರಣೆಗೆ ಬಂದ ಯೋಗಕ್ಕೆ ಶಿಕ್ಷಣಕ್ಕೆ ಇಂದು ಜಗತ್ತಿನಾದ್ಯಂತ ಬೇಡಿಕೆ ಮತ್ತು ಗೌರವವಿದ್ದು, ಯೋಗವನ್ನು ಮನುಕುಲಕ್ಕೆ ಕೊಡುಗೆಯಾಗಿ ನೀಡಿರುವ ಗೌರವಕ್ಕೆ ಭಾರತ ಪಾತ್ರವಾಗಿದೆ ಎಂದು ತಿಳಿಸಿದರು.
ದೇಶದ ಪ್ರಧಾನಮಂತ್ರಿ ನರೇಂದ್ರಮೋದಿಯವರ ಪ್ರಯತ್ನದಿಂದಾಗಿ 2015ರಿಂದ ಜೂನ್ 21ರ ದಿನವನ್ನು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಜಗತ್ತಿನ 180 ಕ್ಕೂ ಹೆಚ್ಚು ರಾಷ್ಟ್ರಗಳು ಆಚರಿಸುತ್ತಿವೆ. ಉತ್ತಮ ದೈಹಿಕ, ಮಾನಸಿಕ ಆರೋಗ್ಯಕ್ಕಾಗಿ ನಾವೆಲ್ಲರೂ ಪ್ರತಿದಿನ ಯೋಗಾಭ್ಯಾಸ ಮಾಡುವ ಪ್ರತಿಜ್ಞೆ ಮಾಡೋಣ ಎಂದು ಕರೆ ನೀಡಿದರು.