ಸಾರಾಂಶ
ಯೋಗವೆಂದರೇ ಇದೊಂದು ಧರ್ಮವಲ್ಲ, ಆರೋಗ್ಯವಂತ ಜೀವನದ ಪದ್ಧತಿಯಾಗಿದೆ. ಆರೋಗ್ಯ ಜೀವನಕ್ಕೆ ಯೋಗ, ಧ್ಯಾನ ಮತ್ತು ಪ್ರಾಣಾಯಾಮ ದಿವ್ಯ ಔಷಧಿಗಳಾಗಿವೆ. ಪ್ರತಿಯೊಬ್ಬರು ಪ್ರತಿ ದಿನ ಯೋಗವನ್ನು ರೂಢಿಸಿಕೊಂಡಾಗ ಆರೋಗ್ಯವಂತ ಸಮಾಜವನ್ನು ಕಟ್ಟಲು ಸಾಧ್ಯವಿದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಕನ್ನಡಪ್ರಭ ವಾರ್ತೆ ಅಥಣಿ
ಯೋಗವೆಂದರೇ ಇದೊಂದು ಧರ್ಮವಲ್ಲ, ಆರೋಗ್ಯವಂತ ಜೀವನದ ಪದ್ಧತಿಯಾಗಿದೆ. ಆರೋಗ್ಯ ಜೀವನಕ್ಕೆ ಯೋಗ, ಧ್ಯಾನ ಮತ್ತು ಪ್ರಾಣಾಯಾಮ ದಿವ್ಯ ಔಷಧಿಗಳಾಗಿವೆ. ಪ್ರತಿಯೊಬ್ಬರು ಪ್ರತಿ ದಿನ ಯೋಗವನ್ನು ರೂಢಿಸಿಕೊಂಡಾಗ ಆರೋಗ್ಯವಂತ ಸಮಾಜವನ್ನು ಕಟ್ಟಲು ಸಾಧ್ಯವಿದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.ಇಲ್ಲಿನ ಸರ್ಕಾರಿ ಪ್ರಥಮ ದರ್ಜೆಯ ಮಹಾವಿದ್ಯಾಲಯದ ಆವರಣದಲ್ಲಿ ಪತಂಜಲಿ ಯೋಗ ಸಮಿತಿ ಹಾಗೂ ತಾಲೂಕು ಆಡಳಿತ ವತಿಯಿಂದ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯೋಗ ರೋಗಮುಕ್ತ ಸಮಾಜಕ್ಕೆ ಸಹಕಾರಿಯಾಗಿದೆ. ಪುರಾತನ ಕಾಲದಲ್ಲಿ ನಮ್ಮ ಋುಷಿಮುನಿಗಳು ಕೂಡ ಯೋಗ, ಧ್ಯಾನ ಮತ್ತು ಪ್ರಾಣಾಯಾಮಗಳನ್ನು ರೂಢಿಸಿಕೊಂಡು ನೂರು ವರ್ಷಗಳನ್ನು ಆರೋಗ್ಯವಂತರಾಗಿ ಕಳೆಯುತ್ತಿದ್ದರು. ಆದರೆ, ಇಂದಿನ ನಮ್ಮ ಆಹಾರ ಪದ್ಧತಿ, ಜೀವನ ಶೈಲಿಯಿಂದ ಬದುಕು ವಿಷಕಾರಿಯಾಗುತ್ತಿದೆ. ಪತಂಜಲಿ ಯೋಗಪೀಠದ ರಾಮದೇವ್ ಬಾಬಾ ಅವರಂತಹ ಅನೇಕ ಯೋಗ ಗುರುಗಳು ಆರೋಗ್ಯವಂತ ಸಮಾಜವನ್ನು ಕಟ್ಟುವಲ್ಲಿ ದೇಶದ ಜನರಿಗೆ ತಮ್ಮ ಮಾರ್ಗದರ್ಶನ ನೀಡುತ್ತಿದ್ದಾರೆ. ಇದಲ್ಲದೇ ಆರೋಗ್ಯವಂತ ಮತ್ತು ಸದೃಢ ಭಾರತ ನಿರ್ಮಿಸಬೇಕೆಂಬ ಉದ್ದೇಶದಿಂದ ಕಳೆದ 9 ವರ್ಷಗಳ ಹಿಂದೆ ಕೇಂದ್ರ ಸರ್ಕಾರದ ಯೋಗವನ್ನು ವಿಶ್ವ ವ್ಯಾಪಿಸಿ ಪ್ರತಿ ವರ್ಷ ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಜಾರಿಗೆ ಬರುವಂತೆ ಮಾಡಲಾಗಿದೆ. ಯೋಗ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗದೇ ಪ್ರತಿದಿನ ನಮ್ಮ ಬದುಕಿನ ಒಂದು ಭಾಗವಾಗಬೇಕು ಎಂದು ತಿಳಿಸಿದರು.ಹಿಂದಿನ ಆಹಾರ ಪದ್ಧತಿಗೂ ಇಂದಿನ ಆಹಾರ ಪದ್ಧತಿಗೆ ಬಹಳಷ್ಟು ವ್ಯತ್ಯಾಸವಿದೆ. ಇಂದಿನ ಆಹಾರ ಎಲ್ಲ ಕಲುಷಿತವಾಗಿದ್ದು, ಹೈಬ್ರಿಡ್ ಬೀಜಗಳು ಇರುವುದರಿಂದ ಅತಿಯಾದ ರಸಗೊಬ್ಬರ ಮತ್ತು ಕ್ರಿಮಿನಾಶಕಗಳಿಂದ ಕೃಷಿ ಉತ್ಪನ್ನಗಳನ್ನು ಬೆಳೆದು ನಾವು ಆಹಾರದೊಂದಿಗೆ ವಿಷವನ್ನು ಸೇವಿಸುತ್ತಿದ್ದೇವೆ. ಇದರಿಂದ ರೋಗ-ರುಜಿನಿಗಳು ಹೆಚ್ಚಾಗಿದ್ದು, ಇಂದಿನ ಯುವ ಜನಾಂಗ ಮತ್ತು ಮಕ್ಕಳ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ತಿಳಿಸಿದರು.ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಶಾಂತಿನಾಥ ಬಳೋಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತಂಜಲಿ ಯೋಗ ಸಮಿತಿಯ ತಾಲೂಕು ಅಧ್ಯಕ್ಷ ಎಸ್.ಕೆ.ಹೊಳೆಪ್ಪನವರು ಯೋಗ ಪ್ರಾತ್ಯಕ್ಷಿತೆಯನ್ನು ನಡೆಸಿಕೊಟ್ಟರು. ನಂತರ ಇತ್ತೀಚಿಗೆ ಶಾಲಾ ಮಕ್ಕಳಿಗಾಗಿ ನಡೆಸಿದ ಯೋಗ ಸ್ಪರ್ಧೆಯ ವಿಜೇತರಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.ಮುಖ್ಯ ಅತಿಥಿಗಳಾಗಿ ತಹಸೀಲ್ದಾರ್ ವಾಣಿ.ಯು, ತಾ.ಪಂ ಅಧಿಕಾರಿ ಶಿವಾನಂದ ಕಲ್ಲಾಪುರ, ಅಭಿಯಂತರ ವೀರಣ್ಣ ವಾಲಿ, ರವೀಂದ್ರ ಮುರಗಾಲಿ, ನೌಕರರ ಸಂಘದ ಅಧ್ಯಕ್ಷ ರಾಮನಗೌಡ ಪಾಟೀಲ, ವಿಲಾಸ ಕಾಂಬಳೆ, ಅಮ್ಮಣ್ಣ ಕುರುಂದವಾಡ ಸೇರಿದಂತೆ ಇನ್ನಿತರ ಅಧಿಕಾರಿಗಳು, ವಿವಿಧ ಸಂಘಟನೆಯ ಮುಖಂಡರು, ವಿವಿಧ ಶಾಲೆಯ ಮಕ್ಕಳು ಮತ್ತು ಶಿಕ್ಷಕರು ಭಾಗವಹಿಸಿದ್ದರು. ಡಾ.ಆರ್.ಎಸ್.ದೊಡ್ಡ ನಿಂಗಪ್ಪಗೋಳ ಸ್ವಾಗತಿಸಿ, ವಂದಿಸಿದರು.
ನಮ್ಮ ಆಹಾರ ಪದ್ಧತಿ ಶುದ್ಧವಾಗಿರಬೇಕು. ನಮ್ಮ ರೈತರು ಸಾವಯುವ ಕೃಷಿ ಪದ್ಧತಿ ರೂಢಿಸಿಕೊಳ್ಳಬೇಕು. ನಮ್ಮ ಯುವಕರು, ವಿದ್ಯಾರ್ಥಿಗಳು ಸೇರಿದಂತೆ ಪ್ರತಿಯೊಬ್ಬರು ಪ್ರತಿದಿನ ಯೋಗವನ್ನು ಮೈಗೂಡಿಸಿಕೊಂಡು ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಸದೃಢತೆ ಹೊಂದಬೇಕು.-ಲಕ್ಷ್ಮಣ ಸವದಿ,
ಶಾಸಕರು.