ಸಾರಾಂಶ
ಯೋಗಕ್ಕೆ ಎಲ್ಲರನ್ನೂ ಒಂದುಗೂಡಿಸುವ ಶಕ್ತಿಯಿದೆ. ಯೋಗವು ಭಾರತ ಸಂಸ್ಕೃತಿಯ ಪ್ರತೀಕವೂ ಆಗಿದೆ.
ಬಳ್ಳಾರಿ: ತಾಲೂಕಿನ ಮೋಕದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 10ನೇ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ದೈಹಿಕ ಶಿಕ್ಷಣ ವಿಭಾಗದ ಸಹಯೋಗದಲ್ಲಿ ಯೋಗಾಭ್ಯಾಸ ಕಾರ್ಯಕ್ರಮ ಜರುಗಿತು.
ಕಾಲೇಜಿನ ದೈಹಿಕ ನಿರ್ದೇಶಕ ಶ್ರೀನಿವಾಸ ಸೂರ್ಯ ನಮಸ್ಕಾರದ 12 ಎಣಿಕೆಯ ಆಸನಗಳು, ಅರ್ಧ ಚಕ್ರಾಸನ, ಉತ್ಕಟಾಸನ, ಪಶ್ಚಿಮೋತ್ಥಾನಾಸನ, ಪರ್ವತಾಸನ, ಮಕರಾಸನ ಮತ್ತಿತರ ಯೋಗಾಸನಗಳನ್ನು ಹೇಳಿಕೊಟ್ಟು, ಪ್ರತಿಯೊಂದು ಯೋಗಾಸನಗಳ ಮಹತ್ವವನ್ನು ವಿದ್ಯಾರ್ಥಿಗಳಿಗೆ, ಸಿಬ್ಬಂದಿಗೆ ತಿಳಿಸಿದರು.ಕಾಲೇಜಿನ ಎಲ್ಲ ವಿದ್ಯಾರ್ಥಿಗಳು, ಅಧ್ಯಾಪಕರು, ಸಿಬ್ಬಂದಿ ಭಾಗವಹಿಸಿದ್ದರು.
ಚಾಲನೆ ನೀಡಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಪ್ರೊ.ಇಸ್ಮಾಯಿಲ್ ಮಕಂದಾರ್, ಯೋಗ ಎಂದರೆ ಆತ್ಮ ಮತ್ತು ಮನಸ್ಸುಗಳನ್ನು ಒಂದಾಗಿಸುವ ವಿಧಾನವಾಗಿದೆ. ಯೋಗಕ್ಕೆ ಎಲ್ಲರನ್ನೂ ಒಂದುಗೂಡಿಸುವ ಶಕ್ತಿಯಿದೆ. ಯೋಗವು ಭಾರತ ಸಂಸ್ಕೃತಿಯ ಪ್ರತೀಕವೂ ಆಗಿದೆ ಎಂದರು.ಸಾವಿರಾರು ವರ್ಷಗಳ ಇತಿಹಾಸ ಇರುವ ಯೋಗದ ಮಹತ್ವ ಸಾರುವ ಉದ್ದೇಶದಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಗುತ್ತಿದ್ದು, ಇದು ವಾರ್ಷಿಕ ಕಾರ್ಯಕ್ರಮವಾಗದೆ, ನಿತ್ಯವೂ ಯೋಗಾಭ್ಯಾಸದಲ್ಲಿ ವಿದ್ಯಾರ್ಥಿ-ಯುವಜನರು ಸೇರಿದಂತೆ ಎಲ್ಲ ವಯೋಮಾನದವರು ನಿರತರಾಗಬೇಕು ಎಂದು ಹೇಳಿದರು.
ಕಾಲೇಜಿನ ಕನ್ನಡ ಪ್ರಾಧ್ಯಾಪಕಿ ಡಾ.ಬಿ.ಜಿ.ಕಲಾವತಿ ಮಾತನಾಡಿ, ಭಾರತೀಯ ಯೋಗ ಪದ್ಧತಿಯನ್ನು ಇತರೆ ದೇಶಗಳು ಅನುಸರಿಸುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ. ಯೋಗ ಕಾಲ, ದೇಶಕ್ಕೆ ಸೀಮಿತವಾದುದ್ದಲ್ಲ. ದೇಹ ಮತ್ತು ಮನಸ್ಸನ್ನು ದಂಡಿಸುವ ಮೂಲಕ ಉತ್ತಮ ಆರೋಗ್ಯ ಪಡೆಯಲು ಬೇಕಾದ ಅತ್ಯುತ್ತಮ ಸೂತ್ರ ಎಂದರೆ ಯೋಗಾಭ್ಯಾಸವಾಗಿದೆ. ಯೋಗದಿಂದ ರೋಗಗಳು ದೂರವಾಗುತ್ತವೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಲು, ದೇಹವನ್ನು ಆರೋಗ್ಯವಾಗಿಟ್ಟುಕೊಳ್ಳಲು ವಿದ್ಯಾರ್ಥಿಗಳು ನಿತ್ಯವೂ ಮನೆಯಲ್ಲಿ ಯೋಗಾಭ್ಯಾಸ ಮಾಡಿ ಎಂದು ಸಲಹೆ ನೀಡಿದರು.ಕಾಲೇಜಿನ ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿ ಬಕಾಡೆ ಪಂಪಾಪತಿ, ಅಮಲ್ , ಪ್ರವೀಣ ಎಂ.ಎಂ.ಪಿ, ಮಹಮ್ಮದ್ ಅಸ್ಲಾಂ, ಆದರ್ಶ ಕೆ.ಎನ್, ಗ್ರಂಥಪಾಲಕ ಪಂಪಾಪತಿ.ಸಿ, ಡಾ.ಹರೀಶ್, ಬಸವರಾಜ.ಎಂ, ಸಾವಿತ್ರಮ್ಮ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))