ಸ್ಪರ್ಧಾತ್ಮಕ ಜಗತ್ತಿನಲ್ಲಿರುವ ನಾವು ಹಣಗಳಿಸುವ ಸಲುವಾಗಿ ಒತ್ತಡದ ಜೀವನ ನಡೆಸುವ ಮೂಲಕ ಹಲವು ಕಾಯಿಲೆಗಳಿಗೆ ತುತ್ತಾಗುತ್ತಿದ್ದೇವೆ. ಯುವ ಸಮುದಾಯ ಅಧಿಕ ರಕ್ತದೊತ್ತಡ ಹಾಗೂ ಸಕ್ಕರೆ ಕಾಯಿಲೆಗೆ ಸಿಲುಕುತ್ತಿದೆ. ಒತ್ತಡದಿಂದಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ನಾಗಮಂಗಲ
ದೇಹ ಮತ್ತು ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಿ ಆರೋಗ್ಯಯುತ ಜೀವನ ರೂಪಿಸಿಕೊಳ್ಳಲು ಯೋಗ ಒಂದು ಅತ್ಯುತ್ತಮ ವಿಧಾನ ಎಂದು ಅನುಸಂಧಾನ ಸಂಸ್ಥಾನದ ಸಹಾಯಕ ನಿರ್ದೇಶಕ ಡಾ.ಎಚ್.ಎಸ್.ವಾದಿರಾಜ್ ಅಭಿಪ್ರಾಯಪಟ್ಟರು.ತಾಲೂಕಿನ ಶೀರಾಪಟ್ಟಣ (ಎಂ.ಹೊಸೂರು ಗೇಟ್) ಬಳಿಯ ಕೇಂದ್ರೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಅನುಸಂಧಾನ ಸಂಸ್ಥಾನದ ಆವರಣದಲ್ಲಿ ಭಾನುವಾರ ಬೆಳಿಗ್ಗೆ ಪತಂಜಲಿ ಮಹರ್ಷಿಯವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ 12ನೇ ಅಂತಾರಾಷ್ಟ್ರೀಯ ಯೋಗ ದಿನ ಉದ್ಘಾಟಿಸಿ ಮಾತನಾಡಿದರು.
ಸ್ಪರ್ಧಾತ್ಮಕ ಜಗತ್ತಿನಲ್ಲಿರುವ ನಾವು ಹಣಗಳಿಸುವ ಸಲುವಾಗಿ ಒತ್ತಡದ ಜೀವನ ನಡೆಸುವ ಮೂಲಕ ಹಲವು ಕಾಯಿಲೆಗಳಿಗೆ ತುತ್ತಾಗುತ್ತಿದ್ದೇವೆ. ಯುವ ಸಮುದಾಯ ಅಧಿಕ ರಕ್ತದೊತ್ತಡ ಹಾಗೂ ಸಕ್ಕರೆ ಕಾಯಿಲೆಗೆ ಸಿಲುಕುತ್ತಿದೆ. ಒತ್ತಡದಿಂದಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.ಹುಟ್ಟು ಸಾವಿನ ನಡುವೆಯ ಕ್ಷಣಿಕ ಜೀವನದಲ್ಲಿ ಯಾರನ್ನೂ ದ್ವೇಷಿಸದೆ ಎಲ್ಲರೊಂದಿಗೆ ಹೊಂದಾಣಿಕೆ ಸಹಬಾಳ್ವೆಯಿಂದ ಬದುಕಬೇಕೆಂಬುದನ್ನು ಯೋಗದಿಂದ ಅರ್ಥೈಸಿಕೊಳ್ಳಬಹುದು. ಹಾಗಾಗಿ ಮಕ್ಕಳು ಹಾಗೂ ಹಿರಿಯರು ಪ್ರತಿನಿತ್ಯ ಒಂದು ಗಂಟೆ ಯೋಗಾಭ್ಯಾಸ ಮಾಡುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗಿ ಆರೋಗ್ಯವಂತ ಜೀವನ ನಡೆಸಬಹುದು ಎಂದರು.
ಸಹಜವಾದ ಜೀವನಕ್ಕೆ ಯೋಗ ಎಂಬ ಧ್ಯೇಯವಾಕ್ಯದೊಂದಿಗೆ ಈ ಬಾರಿ 12ನೇ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಗುತ್ತಿದೆ. ಯೋಗ ಮಾಡುವುದರಿಂದ ನಾವು ಸಹಜವಾದ ವಯಸ್ಸನ್ನು ತಲುಪಬಹುದು. ಶಾಲಾ ಹಂತದಲ್ಲಿಯೇ ಮಕ್ಕಳು ಯೋಗ ಮಾಡುವುದನ್ನು ಅಭ್ಯಾಸ ಮಾಡಿದಲ್ಲಿ ಕಲಿಕಾ ಗುಣಮಟ್ಟವೂ ಹೆಚ್ಚಾಗಿ, ಶಿಸ್ತು, ಸಂಯಮ ಹಾಗೂ ತಾಳ್ಮೆಯನ್ನು ಮೈಗೂಡಿಸಿಕೊಂಡು ದೇಹದ ಎಲ್ಲ ಅಂಗಾಂಗಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಬಹುದು. ಆಧುನಿಕ ಜೀವನ ಶೈಲಿಯಿಂದ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ಇವೆಲ್ಲಕ್ಕೂ ಯೋಗ ಒಂದೇ ಪರಿಹಾರ ಎಂದರು.ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಾವಿರಕ್ಕೂ ಹೆಚ್ಚು ಯೋಗಾಭ್ಯಾಸಿಗಳಿಗೆ ಆಸ್ಪತ್ರೆಯಿಂದ ಉಚಿತವಾಗಿ ಟೀ ಶರ್ಟ್ ಮತ್ತು ಯೋಗ ಮ್ಯಾಟ್ ವಿತರಿಸಿ ಹಲವು ಭಂಗಿಯ ಯೋಗಾಸನ ಕುರಿತು ಆಸ್ಪತ್ರೆಯ ಯೋಗ ಚಿಕಿತ್ಸಕ ಸಿದ್ದಪ್ಪ ನರಗಟ್ಟಿ ತರಬೇತಿ ನೀಡಿದರು.
ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಸಂಶೋಧನಾ ಅಧಿಕಾರಿಗಳಾದ ಡಾ.ಪಿ.ಎಸ್.ಸ್ವಾತಿ, ಡಾ.ಇನ್ಬುರಾಜ್, ಡಾ. ನಿತೇಶ್, ಯೋಗ ಚಿಕಿತ್ಸಕ ಸಿದ್ದಪ್ಪ ನರಗಟ್ಟಿ, ಫಿಜಿಯೋ ತೆರಪಿಸ್ಟ್ ರಮ್ಯ, ಕಚೇರಿ ಸಿಬ್ಬಂದಿಗಳಾದ ಚೈತ್ರ, ಎಂ.ಪ್ರಗತಿ ಸೇರಿದಂತೆ ಸಾವಿರಕ್ಕೂ ಹೆಚ್ಚು ಜನರು ಇದ್ದರು.