ಭಟ್ಕಳ ಕರಿಕಲ್ ಶ್ರೀರಾಮ ಧ್ಯಾನಮಂದಿರದಲ್ಲಿ ವರ್ಧಂತ್ಯುತ್ಸವ ಸಂಪನ್ನ

ಕನ್ನಡಪ್ರಭ ವಾರ್ತೆ ಭಟ್ಕಳ

ತಾಲೂಕಿನ ಕರಿಕಲ್ ಶ್ರೀರಾಮ ಧ್ಯಾನ ಮಂದಿರದ ಪ್ರತಿಷ್ಠಾಪನಾ ವರ್ಧಂತ್ಯುತ್ಸವ ಉಜಿರೆ ಶ್ರೀರಾಮ ಕ್ಷೇತ್ರದ ಪೀಠಾಧೀಶ ೧೦೦೮ ಮಹಾಮಂಡಲೇಶ್ವರ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ನೇತೃತ್ವದಲ್ಲಿ ವಿಜೃಂಭಣೆಯಿಂದ ಜರುಗಿತು.

ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಆತ್ಮ ಮತ್ತು ಪರಮಾತ್ಮನ ಒಟ್ಟಿಗೆ ಸೇರಿಸುವ ಪ್ರಕ್ರಿಯೆಯೇ ಯೋಗವಾಗಿದೆ. ನಮ್ಮ ಆತ್ಮವನ್ನು ನಾವೇ ಉದ್ಧರಿಸಬೇಕು. ಇಂದ್ರೀಯ ನಿಗ್ರಹ ಹಾಗೂ ವೈರಾಗ್ಯ ಈ ಮೂರು ಒಟ್ಟೊಟ್ಟಿಗೆ ಆಗಬೇಕು. ಭಗವಂತನ ಆತ್ಮವೆ ನಮ್ಮ ಜೀವಾತ್ಮವಾಗಿದೆ. ಭಗವಂತನನ್ನು ಸೇರಬೇಕಾದರೆ ರಾಜಯೋಗ, ಭಕ್ತಿಯೋಗ ಹಾಗೂ ಕರ್ಮ ಯೋಗ ಬೇಕಾಗುತ್ತದೆ. ಗಟ್ಟಿಯಾದ ವ್ಯಕ್ತಿತ್ವ ಪಡೆಯಬೇಕಾದರೆ ಯೋಗಿಯಾಗಬೇಕು ಎಂದು ಹೇಳಿದರು.

ಧರ್ಮ ಮಾರ್ಗದಿಂದ ನಡೆದರೆ ಭಗವಂತನ ಅನುಗ್ರಹ ಯಾವತ್ತೂ ಇರುತ್ತದೆ. ಒಂದು ಒಳ್ಳೆಯ ಪದವಿ ಹಾಗೂ ಗೌರವ ಸಿಗಬೇಕಾದರೆ ನಮಗೆ ಪೂರ್ವಜನ್ಮದ ಪುಣ್ಯ ಇರಬೇಕಾಗುತ್ತದೆ. ನಾವೆಲ್ಲರೂ ಪರಸ್ಪರ ದ್ವೇಷ ಬಿಟ್ಟು ಎಲ್ಲರನ್ನು ಪ್ರೀತಿಸುವಂತವರಾಗಬೇಕು ಎಂದರಲ್ಲದೇ, ಧರ್ಮ ಆಧಾರಿತ ಜೀವನ ನಮ್ಮನ್ನು ಸುಖದ ಕಡೆಗೆ ಕೊಂಡೊಯ್ಯುತ್ತದೆ. ಸಂತರ ಸಾಧನೆ, ತಪಸ್ಸು ಸನಾತನ ಪರಂಪರೆಯ ಮುಂದುವರಿಕೆಗೆ ಪೂರವಾಗಿರುತ್ತದೆ ಎಂದರು.


ಪ್ರತಿಷ್ಠಾಪನಾ ವರ್ಧಂತಿ ಉತ್ಸವದ ಅಂಗವಾಗಿ ಧ್ಯಾನ ಮಂದಿರದಲ್ಲಿ ಬೆಳಗ್ಗೆ ವಿವಿಧ ಹೋಮ, ಹವನಗಳು, ಧಾರ್ಮಿಕ ಕಾರ್ಯಕ್ರಮ ನಡೆದವು. ನಂತರ ಲೋಕಕಲ್ಯಾಣಕ್ಕಾಗಿ ಶ್ರೀರಾಮತಾರಕ ಮಹಾಯಜ್ಞ ವೇದಮೂರ್ತಿ ಲಕ್ಷ್ಮೀಪತಿ ನೇತೃತ್ವದಲ್ಲಿ ಅರ್ಚಕರು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಸಚಿವ ಮಂಕಾಳ ವೈದ್ಯ, ಶ್ರೀರಾಮ ಕ್ಷೇತ್ರದ ನೂತನ ಟ್ರಸ್ಟಿಗಳಾಗಿ ಆಯ್ಕೆಯಾದ ಎಚ್.ಆರ್. ನಾಯ್ಕ ಕೋನಳ್ಳಿ, ಚಂದ್ರ ಪೂಜಾರಿ ಸಾಗರ, ಕೆ.ಆರ್. ನಾಯ್ಕ, ಭಟ್ಕಳ, ರವೀಂದ್ರ ಪೂಜಾರಿ, ತುಕಾರಾಮ ಸಾಲ್ಯಾನ್ ಹಾಗೂ ರವಿದಾಸ ಬೆಂಗಳೂರು ಇವರನ್ನು ಸ್ವಾಮೀಜಿ ಗೌರವಿಸಿದರು.

ಭಟ್ಕಳ ಆಸರಕೇರಿ ಗುರುಮಠದ ಅಧ್ಯಕ್ಷ ಅರುಣ ನಾಯ್ಕ, ಸಾರದಹೊಳೆ ಹನುಮಂತ ದೇವಸ್ಥಾನದ ಅಧ್ಯಕ್ಷ ನಾಗೇಂದ್ರ ನಾಯ್ಕ, ಶ್ರೀರಾಮ ಕ್ಷೇತ್ರ ಸೇವಾ ಸಮಿತಿಯ ಅಧ್ಯಕ್ಷ ಶ್ರೀಧರ ನಾಯ್ಕ ಹಾಗೂ ಆಡಳಿತ ಮಂಡಳಿತಯ ಸದಸ್ಯರು ಸ್ವಾಮೀಜಿಗಳ ಪಾದಪೂಜೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಉ.ಕ. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಪ್ರಮುಖರಾದ ಡಿ.ಬಿ. ನಾಯ್ಕ, ಭಟ್ಕಳ ನಾಗೇಶ ನಾಯ್ಕ ಕಾಗಾಲ, ರಾಮಾ ಮೊಗೇರ, ಅಟೋ ಗಂಗಾಧರ, ಬೆಂಗಳೂರು, ಈರಪ್ಪ ಗರ್ಡಿಕರ, ಗೋವಿಂದ ನಾಯ್ಕ, ಕೃಷ್ಣ ನಾಯ್ಕ, ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ವಾಮನ ನಾಯ್ಕ ಮಂಕಿ, ಕೃಷ್ಣ ನಾಯ್ಕ, ನಾರಾಯಣ ಖಾರ್ವಿ, ಉತ್ತರಕನ್ನಡ, ಶಿವಮೊಗ್ಗ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆಯಿಂದ ಪ್ರಮುಖರು, ಶ್ರೀರಾಮ ಕ್ಷೇತ್ರ ಸೇವಾ ಸಮಿತಿಯ ವಿವಿಧ ಜಿಲ್ಲೆಯ ಪಧಾಧಿಕಾರಿಗಳು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಲಕ್ಷ್ಮೀಪತಿ ಇವರಿಂದ ವೇಧಘೋಷ ನಡೆಯಿತು. ಶಿಕ್ಷಣ ನಾರಾಯಣ ನಾಯ್ಕ ಎಲ್ಲರನ್ನು ಸ್ವಾಗತಿಸಿದರು. ಶ್ರೀರಾಮ ಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷ ಶ್ರೀಧರ ನಾಯ್ಕ ವಂದಿಸಿದರು.