ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು
ಪ್ರತಿ ದಿನ ಯೋಗಾಭ್ಯಾಸ ಮಾಡುವುದರಿಂದ ಮಾನಸಿಕ ಖಿನ್ನತೆ ದೂರಗೊಳಿಸಬಹುದು. ಮಾನಸಿಕ ಖಿನ್ನತೆಗೆ ಯೋಗವೇ ಸೂಕ್ತ ಪರಿಹಾರವಾಗಿದೆ ಎಂದು ಯೋಗ ಶಿಕ್ಷಕಿ ಸೌಮ್ಯಾ ರಾಘವೇಂದ್ರ ಹೇಳಿದರು.ಪಟ್ಟಣದ ಕಿನಾವಿವ ಸಂಘದ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಐಕ್ಯೂಎಸಿ ಅಡಿಯಲ್ಲಿ ಎನ್.ಸಿ.ಸಿ, ಎನ್.ಎಸ್.ಎಸ್, ರೋವರ್ಸ್ ಮತ್ತು ರೇಂಜರ್ಸ್, ಯುಥ್‍ರೆಡ್ ಕ್ರಾಸ್ ವಿದ್ಯಾರ್ಥಿ ಒಕ್ಕೂಟಗಳ ಆಶ್ರಯದಲ್ಲಿ ಆಯೋಜಿಸಿದ್ದ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಮಾತನಾಡಿದ ಅವರು, ಇಂದಿನ ಯಾಂತ್ರಿಕ ಬದುಕಿನಲ್ಲಿ ನಾವೆಲ್ಲರೂ ಇಂದು ಮಾನಸಿಕ ಖಿತನ್ನತೆ ಅನುಭವಿಸುತ್ತಿದ್ದೇವೆ. ಇದರಿಂದ ಅನೇಕ ಜನರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇದಕ್ಕೆ ಇಂದಿನ ಯಾಂತ್ರಿಕ ಜಗತ್ತು, ಕೆಟ್ಟ ಆಹಾರ ಪದ್ಧತಿ, ನಮಗೆ ನಾವು ಸಮಯ ನೀಡದೇ ಇರುವುದು ಬಹುಮುಖ್ಯ ಕಾರಣವಾಗಿದೆ ಎಂದು ತಿಳಿಸಿದರು.ಕಿನಾವಿವ ಸಂಘದ ಮಾಜಿ ಚೇರಮನ್ ಜಗದೀಶ ವಸ್ತ್ರದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದು ನಮ್ಮಲ್ಲಿ ಶಾರೀರಿಕ ಕೆಲಸ ಕಡಿಮೆಯಾಗಿದ್ದು ಇದರಿಂದ ನಮ್ಮ ನರನಾಡಿಗಳು ಸರಿಯಾಗಿ ಕಾರ್ಯನಿರ್ವಹಿಸದೇ ನಾವು ಅನೇಕ ರೋಗರುಜಿನಗಳಿಗೆ ತುತ್ತಾಗಿ ನಮ್ಮ ಜೀವಿತಾವಧಿ ಕ್ಷೀಣಿಸುತ್ತೀದೆ. ಆದ್ದರಿಂದ ನಾವು ಯೋಗಾಭ್ಯಾಸವನ್ನು ರೂಢಿ ಮಾಡಿಕೊಳ್ಳುವುದರಿಂದ ನಮ್ಮ ಶರೀರದ ಎಲ್ಲ ಅವಯವಗಳಿಗೆ ಸರಿಯಾಗಿ ಕಾರ್ಯನಿರ್ವಹಿಸಲು ಸಹಕಾರಿಯಾಗಿ ನಾವು ಆರೋಗ್ಯವಂತರಾಗಿರಲು ಸಾಧ್ಯ. ಯೋಗ ಪ್ರಶಿಕ್ಷಣದಲ್ಲಿ ಪಡೆದ ತರಬೇತಿಯನ್ನು ಪ್ರತಿನಿತ್ಯವು ನಾವು ಕೈಗೊಂಡಲ್ಲಿ ನಮ್ಮ ಜೀವನದಲ್ಲಿ ಬದಲಾವಣೆಗಳನ್ನು ಕಾಣಬಹುದು ಎಂದರು. ಪ್ರಾಚಾರ್ಯ ನಾಗರಾಜ ಎಚ್.ಕೆ ಪ್ರಾಸ್ತಾವಿಕವಾಗಿ ಮಾತನಾಡಿ, ಯೋಗ ಶಿಕ್ಷಣ ನಮಗೆ ಸದೃಢ ಶರೀರದೊಂದಿಗೆ ಮಾನಸಿಕ ನೆಮ್ಮದಿ ಏಕಾಗ್ರತೆ ಹೊಂದಲು ಸಹಕಾರಿಯಾಗಿದೆ. ಮೊಬೈಲ್ ಬಳಕೆ ಕಡಿಮೆ ಮಾಡಿ ಪ್ರತಿದಿನ ಯೋಗಾಭ್ಯಾಸ ನಾವು ಕೈಗೊಂಡರೆ ಈ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಸಾರ್ಥಕವಾಗುತ್ತದೆ ಎಂದರು.ಪಟ್ಟಣ ಪಂಚಾಯತಿ ಶಕಿಲಾ ಕಿಲ್ಲೇದಾರ ವಿದ್ಯಾರ್ಥಿಗಳಿಗೆ ನಾಶಾ ಮುಕ್ತ ರಾಷ್ಟ್ರ ನಿರ್ಮಾಣಕ್ಕೆ ಪ್ರಮಾಣ ಬೋಧಿಸಿ ವಿದ್ಯಾರ್ಥಿಗಳು ಕೆಟ್ಟ ಚಟಗಳಿಂದ ದೂರವಿರುವಂತೆ ಮನವಿ ಮಾಡಿದರು.ವಿದ್ಯಾರ್ಥಿಗಳಿಗೆ ಯೋಗ ತರಬೇತಿ ನೀಡಿದ ಯೋಗ ಶಿಕ್ಷಕಿ ಸೌಮ್ಯಾ ರಾಘವೇಂದ್ರ ಅವರನ್ನು ಸನ್ಮಾನಿಸಿದರು. ಎನ್.ಸಿ.ಸಿ ಧಾರವಾಡ ಬಟಾಲಿಯನ್ ಅಧಿಕಾರಿ ಕ್ಯಾಪಟನ್ ರಾಮಬಾವು, ಎನ್.ಎಸ್.ಎಸ್ ಅಧಿಕಾರಿ ಹೊನ್ನರಾಜು ಎಸ್.ವಿ.ಗ್ರಂಥಾಲಯ ಸಹಾಯಕಿ ರೇಖಾ ಗಾಣಿಗೇರ ಸೇರಿದಂತೆ ಉಪನ್ಯಾಸಕರು ಹಾಗೂ ಆಡಳಿತ ಮಂಡಳಿಯ ಸದಸ್ಯರು ಮತ್ತು ವಿದ್ಯಾರ್ಥಿಗಳು ಇದ್ದರು.ಅನೇಕ ಜನರು ಮಾನಸಿಕ ಒತ್ತಡ ತಡೆದುಕೊಳ್ಳಲಾರದೇ ಆತ್ಮಹತ್ಯೆಗೆ ಶರಣಾಗುವುದು ಅಥವಾ ಹೃದಯಾಘಾತದಿಂದ ಸಾವನ್ನಪ್ಪುವುದನ್ನು ಕಾಣುತ್ತಿದ್ದೇವೆ. ಇಂದಿನ ಯಾಂತ್ರಿಕ ಜಗತ್ತಿನಲ್ಲಿ ನಾವು ನಮಗಾಗಿ ಒಂದಿಷ್ಟು ಸಮಯವನ್ನು ಮೀಸಲಿಟ್ಟು ತಪ್ಪದೇ ಯೋಗಾಭ್ಯಾಸ ಮಾಡುವುದರಿಂದ ನಮ್ಮ ಆರೋಗ್ಯವನ್ನು ರಕ್ಷಿಸಿಕೊಳ್ಳಬಹುದು. ಪ್ರತಿ ದಿನ ಯೋಗಾಭ್ಯಾಸ ಮಾಡುವುದರಿಂದ ಸದೃಢ ಶರೀರವನ್ನು ಹಾಗೂ ಮಾನಸಿಕ ಏಕಾಗ್ರತೆ ಹೊಂದಲು ಸಾಧ್ಯ.
-ಸೌಮ್ಯಾ ರಾಘವೇಂದ್ರ, ಯೋಗ ಶಿಕ್ಷಕಿ.