ಹೊಸಪೇಟೆ: ಇನ್ನು ಮುಂದೆ ಬೊಜ್ಜು ಇರುವ ಪೊಲೀಸ್ ಸಿಬ್ಬಂದಿ ಯೋಗ ಮಾಡುವುದನ್ನು ಕಡ್ಡಾಯಗೊಳಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಾಹ್ನವಿ ಹೇಳಿದರು.
ಇಲ್ಲಿನ ಪೊಲೀಸ್ ಕವಾಯತು ಮೈದಾನದಲ್ಲಿ ಪತಂಜಲಿ ಯೋಗ ಸಮಿತಿಯ ಸಹಯೋಗದಲ್ಲಿ 15 ದಿನಗಳ ಕಾಲ ನಡೆದ ವಿಶೇಷ ಯೋಗ ಶಿಬಿರದ ಸಮಾರೋಪದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಬಿಎಂಐ ಯಂತ್ರದ ಮೂಲಕ ಬೊಜ್ಜು ಪರೀಕ್ಷೆ ಮಾಡುವ ಪ್ರಕ್ರಿಯೆ ಶೀಘ್ರವೇ ಆರಂಭವಾಗಲಿದ್ದು, ಇದರ ಜತೆಗೆ ಬೊಜ್ಜು ಇರುವ ಪೊಲೀಸರಿಗೆ ಯೋಗ ಕಡ್ಡಾಯವಾಗಿ ಮಾಡಲು ಸೂಚಿಸಲಾಗುವುದು. ಸದ್ಯ ಹೊಸಪೇಟೆ ಉಪವಿಭಾಗದ ಪೊಲೀಸ್ ಸಿಬ್ಬಂದಿಗೆ ಯೋಗ ತರಬೇತಿ ನೀಡಲಾಗಿದೆ. ಕೂಡ್ಲಿಗಿ, ಹರಪನಹಳ್ಳಿ ಉಪವಿಭಾಗದ ಸಿಬ್ಬಂದಿಗೆ ಸಹ ಅತೀ ಶೀಘ್ರದಲ್ಲೇ ಇಂತಹುದೇ ವಿಶೇಷ ಯೋಗ ಶಿಬಿರ ಹಮ್ಮಿಕೊಳ್ಳಲಾಗುವುದು ಎಂದರು.ಪತಂಜಲಿ ಯೋಗ ಸಮಿತಿ ರಾಜ್ಯ ಪ್ರಭಾರಿ ಹಾಗೂ ದಕ್ಷಿಣ ಭಾರತದ ಪ್ರಮುಖ ಯೋಗ ಶಿಕ್ಷಕ ಭವರ್‌ಲಾಲ್ ಆರ್ಯ ಮಾತನಾಡಿ, ಮನುಷ್ಯನಿಗೆ ಯೋಗದ ಜತೆಗೆ ಸಾತ್ವಿಕ ಆಹಾರವೂ ಮುಖ್ಯ. ಸರಿಯಾದ ಸಮಯಕ್ಕೆ ಆಹಾರ ಸೇವಿಸುವುದನ್ನು ಕರ್ತವ್ಯದಲ್ಲಿ ಇರುವ ಸಿಬ್ಬಂದಿ ಸಹ ರೂಢಿಸಿಕೊಳ್ಳಬೇಕು ಎಂದರು.
ಯೋಗದಿಂದ ಹಲವು ರೋಗಗಳು ನಿವಾರಣೆಯಾಗುವುದು. ಇದು ಕೇವಲ ಕಾಲ್ಪನಿಕ ಸಂಗತಿಯಲ್ಲ, ದೆಹಲಿ ‘ಏಮ್ಸ್’ನಿಂದಲೇ ಯೋಗದ ಬಗ್ಗೆ ಸಂಶೋಧನೆ ನಡೆದು ಸಾಬೀತಾಗಿದೆ. ಪತಂಜಲಿ ಯೋಗ ಸಮಿತಿಯ ವತಿಯಿಂದಲೂ ಹಲವು ಸಂಶೋಧನಾ ವರದಿಗಳು, ಪ್ರಬಂಧಗಳು ಮಂಡನೆಯಾಗಿವೆ. ಯೋಗವನ್ನು ನಿತ್ಯ ಜೀವನದ ಭಾಗವಾಗಿ ಮಾಡಿಕೊಂಡರೆ ವಿವಿಧ ಕಾಯಿಲೆಗಳನ್ನು ದೂರ ಇಡಬಹುದು ಎಂದರು.ಸಮಾಜಘಾತುಕರು, ಕ್ರಿಮಿನಲ್‌ಗಳಿಗೂ ಯೋಗದ ಬಗ್ಗೆ ಪೊಲೀಸರು ತಿಳಿವಳಿಕೆ ನೀಡಿ ಮತ್ತು ನಿತ್ಯ ಯೋಗ ಮಾಡಲು ಪ್ರೇರೇಪಿಸಬೇಕು. ಇದರಿಂದ ಅಪರಾಧ ಕೃತ್ಯಗಳು ಕಡಿಮೆಯಾಗಲು ಸಾಧ್ಯ ಎಂದು ಹೇಳಿದರು.
ಪತಂಜಲಿ ಯೋಗ ಸಮಿತಿಯ ಪ್ರಮುಖ ಹಾಗೂ ಶಿಬಿರದ ರೂವಾರಿ ಅನಂತ ಜೋಶಿ ಮಾತನಾಡಿ, ಸಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಪೊಲೀಸರು ತಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು ಎಂಬ ಕಳಕಳಿಯಿಂದ ಈ ವಿಶೇಷ ಯೋಗ ಶಿಬಿರ ನಡೆಸಲಾಗಿದೆ. ಇತರ ಎರಡು ಉಪವಿಭಾಗಗಳಲ್ಲಿ ಸಹ ಯೋಗ ಶಿಬಿರ ನಡೆಸಿಕೊಡಲು ಪತಂಜಲಿ ಯೋಗ ಸಮಿತಿ ಸಿದ್ಧವಿದೆ ಎಂದು ಹೇಳಿದರು.
ಎಎಸ್‌ಪಿ ಜಿ. ಮಂಜುನಾಥ್ ಮಾತನಾಡಿದರು. ಪತಂಜಲಿ ಯೋಗ ಸಮಿತಿಯ ರಾಜ್ಯ ಸದಸ್ಯ ಬಾಲಚಂದ್ರ ಶರ್ಮಾ, ಜಿಲ್ಲಾ ಪ್ರಭಾರಿ ಪ್ರೊ. ಎಫ್.ಟಿ. ಹಳ್ಳಿಕೇರಿ, ಬಳ್ಳಾರಿ ಜಿಲ್ಲಾ ಪ್ರಭಾರಿ ರಾಜೇಶ್ ಕರ್ವಾ, ಯೋಗ ಸಾಧಕರಾದ ಕೃಷ್ಣ ನಾಯ್ಕ್, ಪೂಜಾ ಐಲಿ, ಅಶೋಕ್ ಚಿತ್ರಗಾರ್, ರಾಜಭಕ್ಷಿ, ಕವಿತಾ ಭಾಸ್ಕರ್, ಶ್ರೀರಾಮ್, ಚಂದ್ರಿಕಾ ಶ್ರೀರಾಮ್, ವಿಠೋಬಣ್ಣ, ಚಂದ್ರಿಕಾ ಶ್ರೀರಾಮ, ಕವಿತಾ ಭಾಸ್ಕರ, ಸುಜಾತಾ ಕರ್ಣಂ, ರಾಮು, ಯರಿಯಪ್ಪ, ಕರಿಬಸವರಾಜ, ರಾಮಚಂದ್ರ ಕಂಬದ, ಗೋವಿಂದಪ್ಪ ಭಾಗವಹಿಸಿದ್ದರು.
15 ದಿನಗಳ ಕಾಲ ಯೋಗ ಶಿಬಿರ ನಡೆಸಿಕೊಟ್ಟ ವಿವಿಧ ಯೋಗ ಶಿಕ್ಷಕರನ್ನು ಸನ್ಮಾನಿಸಲಾಯಿತು. ಎಂ. ನಾಗರತ್ನಾ ಕಾರ್ಯಕ್ರಮ ನಿರೂಪಿಸಿದರು.