ಕಲಾದಗಿ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ವಿಶ್ವ ಆರೋಗ್ಯ ದಿನಾಚರಣೆ ನಿಮಿತ್ತ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಕಲಾದಗಿ

ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ವಿಶ್ವ ಆರೋಗ್ಯ ದಿನಾಚರಣೆ ನಿಮಿತ್ತ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು

ಸಂಪನ್ಮೂಲ ವ್ಯಕ್ತಿಗಳಾಗಿ ಕಲಾದಗಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಮಂಜುನಾಥ ಚನಗೊಂಡ ಮತ್ತು ಶಾಂತ ಚೌಧರಿ ಅವರು ಆರೋಗ್ಯಕರ ಜೀವನಶೈಲಿಗೆ ನಿಯಮಿತ ವ್ಯಾಯಾಮ, ಸಮತೋಲನ ಆಹಾರ ಮತ್ತು ಮಾನಸಿಕ ಸಮತೋಲನ ಅಗತ್ಯ ಕುರಿತು ವಿವರವಾಗಿ ಉಪನ್ಯಾಸ ನೀಡಿದರು. ವಿದ್ಯಾರ್ಥಿಗಳಿಗೆ ಒತ್ತಡ ನಿರ್ವಹಣೆಗೆ ಯೋಗ ಮತ್ತು ಧ್ಯಾನ ಸಹಕಾರಿಯಾಗಬಲ್ಲದು ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಚ್.ಬಿ. ಮಹಾಂತೇಶ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಅತ್ಯಂತ ಮುಖ್ಯವಾಗಿದ್ದು, ಶಿಸ್ತಿನೊಂದಿಗೆ ಆರೋಗ್ಯಕರ ಜೀವನಶೈಲಿ ಪಾಲಿಸಿದರೆ ಯಶಸ್ಸು ಸಾಧಿಸಲು ಸಾಧ್ಯವೆಂದು ಅಭಿಪ್ರಾಯಪಟ್ಟರು.

ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಯಲ್ಲಪ್ಪ ಆಶಯ ನುಡಿ ಹೇಳಿ, ಶಾರೀರಿಕ ಮತ್ತು ಮಾನಸಿಕ ಆರೋಗ್ಯದ ಸಮತೋಲನವೇ ಸಮಗ್ರ ವ್ಯಕ್ತಿತ್ವ ನಿರ್ಮಾಣಕ್ಕೆ ಅಗತ್ಯ. ವಿದ್ಯಾರ್ಥಿಗಳು ದಿನನಿತ್ಯದ ಜೀವನದಲ್ಲಿ ಆರೋಗ್ಯಕರ ಅಭ್ಯಾಸ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಉಪನ್ಯಾಸದ ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ಚರ್ಚೆ ನಡೆಯಿತು. ವಿದ್ಯಾರ್ಥಿಗಳು ತಮ್ಮ ಪ್ರಶ್ನೆಗಳನ್ನು ಕೇಳಿ ಸ್ಪಷ್ಟನೆ ಪಡೆದರು.

ಡಾ. ಲೋಕಣ್ಣ ಭಜಂತ್ರಿ ಸ್ವಾಗತಿಸಿದರು, ಡಾ.ಪುಂಡಲೀಕ ಹುನ್ನಳ್ಳಿ ನಿರೂಪಿಸಿದರು. ಡಾ.ಕೆ.ಎಂ. ಸಾರವಾನ ವಂದಿಸಿದರು. ಸ್ವಾತಿ ತಳವಾರ ಪ್ರಾರ್ಥನೆ ಸಲ್ಲಿಸಿದರು. ವಿದ್ಯಾ ದಂಡಗಿ, ರಂಗಪ್ಪ ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.