ಎನ್‌ಡಿಎ ಟಿಕೆಟ್‌ಗಾಗಿ ದೆಹಲಿಯಲ್ಲೇ ಬೀಡುಬಿಟ್ಟ ಸೈನಿಕ ಯೋಗೇಶ್ವರ್

| Published : Oct 09 2024, 01:33 AM IST

ಸಾರಾಂಶ

ಇನ್ನು ದಳಪತಿ ಕ್ಷೇತ್ರದ ಐದು ಜಿಪಂ ವ್ಯಾಪ್ತಿಯಲ್ಲಿ ಪ್ರವಾಸ ನಡೆಸಿದ ಬೆನ್ನೆಲ್ಲೆ ಜೆಡಿಎಸ್‌ನಲ್ಲಿ ಉತ್ಸಾಹ ಇಮ್ಮಡಿಸಿದೆ. ಕ್ಷೇತ್ರದ ಟಿಕೆಟ್ ಜೆಡಿಎಸ್‌ಗೆ ಸಿಗಲಿದ್ದು, ನಿಖಿಲ್ ಕುಮಾರಸ್ವಾಮಿ ಕ್ಷೇತ್ರದಿಂದ ಕಣಕ್ಕೆ ಇಳಿಯುವುದು ನಿಶ್ಚಿತ ಎಂಬ ಮಾತುಗಳು ಜೆಡಿಎಸ್ ಅಂಗಳದಲ್ಲಿ ಕೇಳಿಬರುತ್ತಿದೆ.

ಕನ್ನಡಪ್ರಭ ವಾರ್ತೆ ಚನ್ನಪಟ್ಟಣ

ಚನ್ನಪಟ್ಟಣ ಉಪಚುನಾವಣೆ ಎನ್‌ಡಿಎ ಟಿಕೆಟ್‌ಗಾಗಿ ಪಟ್ಟು ಹಿಡಿದಿರುವ ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ದೆಹಲಿಯಲ್ಲೇ ಬೀಡುಬಿಟ್ಟಿದ್ದು, ಟಿಕೆಟ್‌ಗಾಗಿ ತಮ್ಮ ಪ್ರಯತ್ನ ಮುಂದುವರಿಸಿದ್ದಾರೆ.

ಭಾನುವಾರ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕ್ಷೇತ್ರದಲ್ಲಿ ಪ್ರವಾಸ ನಡೆಸಿ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ನಡೆಸಿ ಕ್ಷೇತ್ರವನ್ನು ಜೆಡಿಎಸ್‌ಗೆ ಉಳಿಸಿಕೊಳ್ಳುವ ಸಂದೇಶ ನೀಡಿದ ಬೆನ್ನೆಲ್ಲೆ ಸೋಮವಾರ ದೆಹಲಿಗೆ ತೆರಳಿರುವ ಯೋಗೇಶ್ವರ್ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್ ದಾಸ್ ಅಗರವಾಲ್ ಅವರನ್ನು ಭೇಟಿ ಮಾಡಿದ್ದು, ಎರಡನೇ ದಿನವೂ ದೆಹಲಿಯಲ್ಲೇ ಬೀಡುಬಿಟ್ಟಿದ್ದಾರೆ. ಟಿಕೆಟ್ ವಿಚಾರದಲ್ಲಿ ವರಿಷ್ಠರ ನಿಲುವು ತಿಳಿದುಕೊಂಡು ಒಂದು ನಿರ್ಧಾರ ಕೈಗೊಂಡೇ ಅವರು ಹಿಂದಿರುಗಿ ಬರುವ ಸಾಧ್ಯತೆ ಇದೆ ಎಂಬ ಮಾಹಿತಿ ಅವರ ಆಪ್ತವಲಯದಿಂದ ಲಭ್ಯವಾಗಿದೆ.ಸಿಪಿವೈ ನಡೆ ಏನು?:

ಚನ್ನಪಟ್ಟಣ ಕ್ಷೇತ್ರದಲ್ಲಿ ಐದು ಬಾರಿ ಗೆಲುವು ಸಾಧಿಸುವ ಮೂಲಕ ಯೋಗೇಶ್ವರ್ ಕ್ಷೇತ್ರದಲ್ಲಿ ತಮ್ಮ ಪ್ರಾಬಲ್ಯ ಸ್ಥಾಪಿಸಿದ್ದರು. ೨೦೧೮ರಲ್ಲಿ ಕುಮಾರಸ್ವಾಮಿ ಕ್ಷೇತ್ರ ಪ್ರವೇಶಿಸಿದ ನಂತರ ಸಿಪಿವೈ ಕ್ಷೇತ್ರ ಕಳೆದುಕೊಂಡಿದ್ದರು. ಇದೀಗ ಉಪಚುನಾವಣೆಯ ಮೂಲಕ ಕ್ಷೇತ್ರವನ್ನು ಮರಳಿ ತಮ್ಮ ತೆಕ್ಕೆಗೆ ತೆಗೆದುಕೊಳ್ಳಬೇಕು ಎಂದು ಸಿಪಿವೈ ಕಾಯುತ್ತಿದ್ದಾರೆ. ಆದರೆ, ಎಚ್‌ಡಿಕೆ ಕ್ಷೇತ್ರದಲ್ಲಿ ಸಂಚಾರ ಮಾಡುವ ಮೂಲಕ ಯೋಗೇಶ್ವರ್‌ಗೆ ಟಿಕೆಟ್ ಇಲ್ಲ ಎಂಬ ಸುಳಿವು ನೀಡಿದ್ದು, ಇದೀಗ ಸೈನಿಕನ ನಡೆ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

ಸೈಡ್‌ಲೈನ್‌ಗೆ ಒಪ್ಪದ ಸೈನಿಕ:

ಕಳೆದ ೨೫ ವರ್ಷಗಳಿಂದ ಚನ್ನಪಟ್ಟಣದಲ್ಲಿ ಜೆಡಿಎಸ್ ಮತ್ತು ಯೋಗೇಶ್ವರ್ ನಡುವೆ ರಾಜಕೀಯ ಸಂಘರ್ಷ ನಡೆಯುತ್ತಿದೆ. ಮೈತ್ರಿ ಧರ್ಮಕ್ಕೆ ಒಪ್ಪಿ ನಿಖಿಲ್ ಕುಮಾರಸ್ವಾಮಿಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದೇ ಆದಲ್ಲಿ ಯೋಗೇಶ್ವರ್ ಶಾಶ್ವತವಾಗಿ ಚನ್ನಪಟ್ಟಣವನ್ನು ಕಳೆದುಕೊಳ್ಳಬೇಕಿದೆ. ಜೆಡಿಎಸ್‌ಗೆ ಕ್ಷೇತ್ರ ಬಿಟ್ಟುಕೊಟ್ಟರೆ ಸೈನಿಕ ಸೈಡ್‌ಲೈನ್‌ಗೆ ಸರಿಯಲಿದ್ದು, ಯಾವುದೇ ಕಾರಣಕ್ಕೂ ಇದಕ್ಕೆ ಯೋಗೇಶ್ವರ್ ಒಪ್ಪುವುದಿಲ್ಲ ಎಂಬ ಮಾತುಗಳು ಅವರ ಆಪ್ತವಲಯದಲ್ಲಿ ಕೇಳಿಬರುತ್ತಿದೆ. ಎಚ್‌ಡಿಕೆ ಪರೋಕ್ಷ ಸುಳಿವು: ಚನ್ನಪಟ್ಟಣ ಉಪಚುನಾವಣೆ ಹಿನ್ನೆಲೆಯಲ್ಲಿ ಭಾನುವಾರ ಕ್ಷೇತ್ರದ ಐದು ಜಿಪಂ ವ್ಯಾಪ್ತಿಯಲ್ಲಿ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ನಡೆಸಿದ್ದ ಕೇಂದ್ರ ಸಚಿವ ಕುಮಾರಸ್ವಾಮಿ ಟಿಕೆಟ್ ವಿಚಾರದಲ್ಲಿ ತಮ್ಮ ನಿರ್ಧಾರವನ್ನು ಬೆಂಬಲಿಸುವಂತೆ ಮನವಿ ಮಾಡಿದ್ದರು. ಇದು ಕ್ಷೇತ್ರವನ್ನು ಜೆಡಿಎಸ್‌ಗೆ ಉಳಿಸಿಕೊಳ್ಳುವ ಸಂದೇಶವಾಗಿದ್ದು, ಸಿಪಿವೈಗೆ ಟಿಕೆಟ್ ತಪ್ಪುವ ಆತಂಕ ಎದುರಾಗಿದೆ.ಜೆಡಿಎಸ್‌ನಲ್ಲಿ ಉತ್ಸಾಹ ಇಮ್ಮಡಿ: ಇನ್ನು ದಳಪತಿ ಕ್ಷೇತ್ರದ ಐದು ಜಿಪಂ ವ್ಯಾಪ್ತಿಯಲ್ಲಿ ಪ್ರವಾಸ ನಡೆಸಿದ ಬೆನ್ನೆಲ್ಲೆ ಜೆಡಿಎಸ್‌ನಲ್ಲಿ ಉತ್ಸಾಹ ಇಮ್ಮಡಿಸಿದೆ. ಕ್ಷೇತ್ರದ ಟಿಕೆಟ್ ಜೆಡಿಎಸ್‌ಗೆ ಸಿಗಲಿದ್ದು, ನಿಖಿಲ್ ಕುಮಾರಸ್ವಾಮಿ ಕ್ಷೇತ್ರದಿಂದ ಕಣಕ್ಕೆ ಇಳಿಯುವುದು ನಿಶ್ಚಿತ ಎಂಬ ಮಾತುಗಳು ಜೆಡಿಎಸ್ ಅಂಗಳದಲ್ಲಿ ಕೇಳಿಬರುತ್ತಿದೆ.

ಸೈನಿಕನ ಪ್ಲಾನ್ ಬಿ ಏನು..?:

ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ ಚನ್ನಪಟ್ಟಣದ ಉಪಚುನಾವಣೆಯ ಎನ್‌ಡಿಎ ಟಿಕೆಟ್‌ಗಾಗಿ ಸಿಪಿವೈ ಭಾರಿ ಲಾಭಿ ನಡೆಸಿದ್ದರು. ಇದು ಕ್ಷೇತ್ರದಲ್ಲಿ ಜೆಡಿಎಸ್-ಬಿಜೆಪಿ ನಡುವಿನ ಬಿರುಕಿಗೆ ಕಾರಣವಾಗಿತ್ತು. ಕೆಲ ದಿನಗಳ ಹಿಂದೆ ಟಿಕೆಟ್ ವಿಚಾರಕ್ಕೆ ದೆಹಲಿಯಲ್ಲಿ ಬಿಜೆಪಿ ವರಿಷ್ಠರನ್ನು ಭೇಟಿಯಾಗಿ ಬಂದ ನಂತರ ಟಿಕೆಟ್ ಸಿಗುವ ಭರವಸೆಯೊಂದಿಗೆ ಸೈನಿಕ ತಣ್ಣಗಾಗಿದ್ದರು. ಆದರೆ, ಇದೀಗ ಟಿಕೆಟ್ ಕೈತಪ್ಪುವ ಆತಂಕ ಎದುರಾಗಿದ್ದು, ಹಾಗೇನಾದರೂ ಆದರೆ, ಸೈನಿಕನ ಪ್ಲಾನ್ ಬಿ ಏನು ಎಂಬ ಪ್ರಶ್ನೆ ಎದುರಾಗಿದೆ.