ಸಾರಾಂಶ
ರಾಮನಗರ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಉಪಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳ ಹಣೆಬರಹ ಶನಿವಾರ ಬಯಲಾಯಿತು. ಫಲಿತಾಂಶ ಹೊರ ಬೀಳುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.
ಮತ ಎಣಿಕೆ ಪ್ರಕ್ರಿಯೆ ನಡೆದ ಅರ್ಚಕರಹಳ್ಳಿಯ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಸಮೀಪ ಬೆಳಗ್ಗೆ ರಾಜಕೀಯ ಪಕ್ಷಗಳ ಕಾರ್ಯಕರ್ತರು ಮತ್ತು ಬೆಂಬಲಿಗರ ಸಂಖ್ಯೆ ಕಡಿಮೆಯಿತ್ತು. ಗೆಲುವಿನ ಸುಳಿವು ಸಿಗುತ್ತಿದ್ದಂತೆ ಕೈ ಕಾರ್ಯಕರ್ತರು ಕಾಲೇಜಿನತ್ತ ಆಗಮಿಸಿದರು.ಗ್ರಾಮ ಪಂಚಾಯಿತಿ, ವಿಧಾನ ಪರಿಷತ್ ಹಾಗೂ ತಾಪಂ ಜಿಪಂ ಚುನಾವಣೆ ಮತ ಎಣಿಕೆ ಸಂದರ್ಭದಲ್ಲಿ ಜನಪ್ರವಾಹ ಹರಿದು ಬಂದಿತ್ತು. ಮತ ಎಣಿಕೆ ಕೇಂದ್ರಗಳ ಸುತ್ತ ಸಾವಿರಾರು ಜನ ಜಮಾಯಿಸುತ್ತಿದ್ದರು. ಆದರೆ, ಇಂದು ಎಂಜಿನಿಯರಿಂಗ್ ಕಾಲೇಜಿನ ಸುತ್ತಲೂ ಪೊಲೀಸ್ ಬಿಗಿ ಪಹರೆ ಹಾಕಿದ ಕಾರಣ, ಜನಜಂಗುಳಿ ಕಾಣಿಸಲೇ ಇಲ್ಲ. ಮಧ್ಯಾಹ್ನದ ವೇಳೆಗೆ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಜಮಾಯಿಸಿ ಗೆಲುವನ್ನು ಸಂಭ್ರಮಿಸಿದರು.
ಜನಸಾಮಾನ್ಯರಿಗೆ ನೋ ಎಂಟ್ರಿ:ಬೆಳಗ್ಗೆ 7 ಗಂಟೆ ಹೊತ್ತಿಗೆ ಮತ ಎಣಿಕೆ ಸಿಬ್ಬಂದಿ, ಮತ ಎಣಿಕೆ ಏಜೆಂಟರು ಸ್ಥಳಕ್ಕೆ ಆಗಮಿಸಿದರು. ಪೊಲೀಸರಂತೂ 6 ಗಂಟೆಗೇ ಹಾಜರಿದ್ದರು. ಪೊಲೀಸರು ಮತ ಎಣಿಕೆ ನಡೆಯುತ್ತಿದ್ದ ಕಾಲೇಜಿನ ಪ್ರವೇಶ ದ್ವಾರದಲ್ಲಿಯೇ ಸುತ್ತ ಬ್ಯಾರಿಕೇಡ್ ಹಾಕಿ ವಾಹನ ಹಾಗೂ ಜನ ಸಂಚಾರ ನಿರ್ಬಂಧಿಸಿದರು. ಚುನಾವಣಾ ಆಯೋಗದ ಪಾಸ್ ಹೊಂದಿದವರಿಗೆ ಮಾತ್ರ ಪ್ರವೇಶ ನೀಡಲಾಯಿತು. ಇದರಿಂದ ಎಣಿಕೆ ಕೇಂದ್ರದ ಸುತ್ತ ಜನರ ಗದ್ದಲ ಇಲ್ಲದೇ ಶಾಂತ ವಾತಾವರಣ ಸೃಷ್ಟಿಯಾಯಿತು.
ಮಧ್ಯಾಹ್ನ 12 ಗಂಟೆಗೆ ಅಭ್ಯರ್ಥಿಗಳ ಹಣೆಬರಹ ನಿಚ್ಚಳವಾಯಿತು. ಚನ್ನಪಟ್ಟಣ ಕ್ಷೇತ್ರದಲ್ಲಿ ಸಿ.ಪಿ.ಯೋಗೇಶ್ವರ್ ಗೆಲುವು ಸಾಧಿಸುತ್ತಿದ್ದಂತೆ ನೆರೆದಿದ್ದ ಕಾರ್ಯಕರ್ತರು ಜಾಲಿ ಜಾಲಿ... ಯೋಗೇಶ್ವರ್ ಜಾಲಿ..., ಖಾಲಿ ಖಾಲಿ ... ನಿಖಿಲ್ ಕುಮಾರಸ್ವಾಮಿ ಖಾಲಿ... ಎಂದೆಲ್ಲ ಘೋಷಣೆ ಕೂಗಿ ಸಂಭ್ರಮಿಸಿದರು.ಬಿಗಿ ಬಂದೋಬಸ್ತ್:
ಮತ ಎಣಿಕೆ ಕೇಂದ್ರದ ಒಳಗೆ ಮತ್ತು ಹೊರಗೆ ಅರೆಸೇನಾ ಪಡೆ ಹಾಗೂ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ವಿವಿಧ ಪಕ್ಷದ ಅಭ್ಯರ್ಥಿಗಳ ಪರವಾಗಿ ನಗರಕ್ಕೆ ಆಗಮಿಸಿದ್ದ ಜನರು ಮತ ಎಣಿಕೆ ಕೇಂದ್ರದ ಸುತ್ತಲು ತಮ್ಮ ಅಭ್ಯರ್ಥಿಯ ಗೆಲುವಿನ ಬಗ್ಗೆ ಕಾತುರದಿಂದ ಕಾಯುತ್ತಿದ್ದ ಪ್ರಸಂಗ ಕಂಡು ಬಂದಿತು.ಪಟಾಕಿ ಸಿಡಿಸಿ ಸಂಭ್ರಮಾಚರಣೆ:
ಉಪ ಚುನಾವಣೆಯಲ್ಲಿ ಯೋಗೇಶ್ವರ್ ಭರ್ಜರಿ ಗೆಲುವು ಸಾಧಿಸಿದ ವಿಷಯ ತಿಳಿಯುತ್ತಿದ್ದಂತೆ ಪಕ್ಷದ ಕಾರ್ಯಕರ್ತರು, ಮುಖಂಡರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮ ಆಚರಿಸಿದರು.