ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನಪಟ್ಟಣ
ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್‌ಗೆ ರಾಜಕೀಯ ಜೀವನದ ಅಂತ್ಯದ ಆತಂಕ ಕಾಡುತ್ತಿದೆ. ಆದ್ದರಿಂದಲೇ ಅವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಕುರಿತು ಹಗುರವಾಗಿ ಮಾತನಾಡುತ್ತಿದ್ದಾರೆ. ಯೋಗೇಶ್ವರ್ ಉಡಾಫೆ ಮಾತುಗಳನ್ನು ಮೊದಲು ನಿಲ್ಲಿಸಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಆರ್. ಪ್ರಮೋದ್ ಆಗ್ರಹಿಸಿದರು.ನಗರದ ಹೊರವಲಯದ ಖಾಸಗಿ ಹೋಟೆಲ್ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎನ್‌ಡಿಎ ವರಿಷ್ಠರು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರಿಗೆ ಹಳೇ ಮೈಸೂರು ಭಾಗದ ನಾಯಕತ್ವ ಬಿಟ್ಟುಕೊಡಬಹುದೇನೋ, ಅದರಿಂದ ಈ ತಾಲೂಕಿನ ಆ ಭಾಗದ ನಾಯಕತ್ವ ತಮ್ಮ ಕೈ ತಪ್ಪಬಹುದು. ತಮ್ಮ ರಾಜಕೀಯ ಜೀವನ ಅಂತ್ಯವಾಗಬಹುದು ಎಂಬ ಭೀತಿ ಯೋಗೇಶ್ವರ್ ಅವರನ್ನು ಕಾಡುತ್ತಿದೆ. ಆದ್ದರಿಂದಲೇ ಅವರು ಏನೇನೋ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.
ಸಿಪಿವೈ ಉಡಾಫೆ ಮಾತು ಬಿಡಲಿ: ಯೋಗೇಶ್ವರ್ ಅವರ ರಾಜಕೀಯ ಜೀವನ ಅಧೋಗತಿಗೆ ಬರಲು ಅವರ ಉಡಾಫೆ ಮಾತುಗಳೇ ಕಾರಣ. ಈ ಹಿಂದೆಯೂ ಅವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಯಡಿಯೂರಪ್ಪ, ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿಯವರು ಕುರಿತು ಸಹ ಹಗುರವಾಗಿ ಮಾತನಾಡಿದ್ದಾರೆ. ನಾನಿಲ್ಲದೇ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಇಲ್ಲ ಎನ್ನುತ್ತಿದ್ದವರಿಗೆ ಜನ ಉತ್ತರ ಕೊಟ್ಟಿದ್ದಾರೆ ಎಂದರು.ಡಿ.ಕೆ.ಶಿವಕುಮಾರ್ ರಾಜ್ಯದ ಡಿಸಿಎಂ ಆಗಿ, ಈ ಜಿಲ್ಲೆಯ ಮಣ್ಣಿನ ಮಗನಾಗಿ ಚನ್ನಪಟ್ಟಣವನ್ನು ಅಭಿವೃದ್ಧಿಗೊಳಿಸುವ ಉದ್ದೇಶದೊಂದಿಗೆ ಬಂದಿದ್ದಾರೆ. ತಾಲೂಕಿನ ಒಬ್ಬ ಜನಪ್ರತಿನಿಧಿಯಾಗಿ ಯೋಗೇಶ್ವರ್, ಅವರನ್ನು ಸ್ವಾಗತಿಸಿ ಸಹಕಾರ ನೀಡಬೇಕು. ಅದು ಬಿಟ್ಟು ಇಲ್ಲಸಲ್ಲದ ಮಾತನಾಡುವುದಲ್ಲ. ಯೋಗೇಶ್ವರ್ ರಾಜಕೀಯ ಅಂತ್ಯಕ್ಕೆ ಅವರ ಉಡಾಫೆ ಮಾತೇ ಕಾರಣವಾಗಲಿದೆ ಎಂದು ಭವಿಷ್ಯ ನುಡಿದರು.
ಸಭೆ ನಡೆಸದ ಎಚ್‌ಡಿಕೆ:ಕುಮಾರಸ್ವಾಮಿಯವರು ತಮ್ಮ ಅವಧಿಯಲ್ಲಿ ಅಧಿಕಾರಿಗಳ ಸಭೆ ನಡೆಸಲಿಲ್ಲ. ಇದೀಗ ತಾಲೂಕಿನ ಅಭಿವೃದ್ಧಿಗೆ ಡಿಕೆ ಶಿವಕುಮಾರ್ ಮುಂದಾಗಿದ್ದಾರೆ, ರಾಜ್ಯ ಸರ್ಕಾರವನ್ನು ಜನರ ಮನೆಬಾಗಿಲಿಗೆ ಶಿವಕುಮಾರ್ ತೆಗೆದುಕೊಂಡು ಹೋಗುತ್ತಿದ್ದಾರೆ. ಈ ಹಿಂದೆ ಸಹ ಜಿಲ್ಲಾ ಉಸ್ತವಾರಿ ಸಚಿವ ರಾಮಲಿಂಗಾರೆಡ್ಡಿ ಅಧ್ಯಕ್ಷತೆಯಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಸಲಾಗಿದೆ. ಕುಮಾರಸ್ವಾಮಿ ರಾಜೀನಾಮೆಯಿಂದ ಕ್ಷೇತ್ರದಲ್ಲಿ ಶಾಸಕರು ಇಲ್ಲದಂತಾಗಿದ್ದು, ಈ ಹಿನ್ನೆಲೆಯಲ್ಲಿ ಡಿಕೆಶಿ ಇಲ್ಲಿನ ಅಭಿವೃದ್ಧಿಗೆ ಕಾಳಜಿ ವಹಿಸಿದ್ದಾರೆ ಎಂದರು.
ಶಿವಕುಮಾರ್ ಅವರಿಗೆ ಚನ್ನಪಟ್ಟಣದ ಕುರಿತು ವಿಶೇಷ ಆಸಕ್ತಿ ಇದೆ. ಇಲ್ಲಿಂದ ಒಮ್ಮೆ ಸ್ಪರ್ಧಿಸಬೇಕು ಎಂಬ ಆಸೆ ಇದೆ. ಆದರೆ, ಪಕ್ಷದ ಹೈಕಮಾಂಡ್ ಏನು ತೀರ್ಮಾನ ಮಾಡುವುದೋ ಅದರಂತೆ ನಡೆಯಲಿದ್ದಾರೆ ಎಂದರು.ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಲುವೇಗೌಡ ಮಾತನಾಡಿ, ತಾಲೂಕಿನ ಏತನೀರಾವರಿ ಯೋಜನೆಗೆ ಆಗ ಪವರ್ ಮಿನಿಸ್ಟರ್ ಆಗಿದ್ದ ಡಿ.ಕೆ.ಶಿವಕುಮಾರ್ ವಿದ್ಯುತ್ ಸಂಪರ್ಕ ಕಲ್ಪಿಸಿದರು. ಅವರು ವಿದ್ಯುತ್ ಸಂಪರ್ಕ ಕಲ್ಪಿಸದಿದ್ದರೆ, ನೀರಾವರಿ ಯೋಜನೆಗಳು ಸಕಾರಗೊಳ್ಳುತ್ತಿರಲಿಲ್ಲ. ನೀರಾವರಿಗೆ ಅವರದ್ದೂ ಕೊಡುಗೆ ಇದೆ ಎಂದರು.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತಗಳು ಕಾಂಗ್ರೆಸ್ ಕಡೆ ವಾಲಿವೆ. ಇದರಿಂದ ಯೋಗೇಶ್ವರ್ ಹತಾಶರಾಗಿದ್ದಾರೆ. ಈ ಹಿಂದೆ ಯಡಿಯೂರಪ್ಪ, ಎಚ್‌ಡಿಕೆ ಸೇರಿ ಎಲ್ಲರನ್ನೂ ಬೈಯುತ್ತಿದ್ದ ಅವರು ಇದೀಗ ಓಲೈಕೆ ಕಾರ್ಯಕ್ಕೆ ಇಳಿದಿದ್ದಾರೆ. ಎಚ್‌ಡಿಕೆಯನ್ನು ತಮ್ಮ ನಾಯಕ ಎಂದು ಒಪ್ಪಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುನಿಲ್, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಮಾದು, ನಗರಸಭೆ ಸದಸ್ಯ ವಾಸೀಲ್ ಅಲಿಖಾನ್, ಮುಖಂಡರಾದ ರಮೇಶ್, ನಾಗೇಂದ್ರ, ಕರಣ್ ಆನಂದ್, ಕೋಕಿಲಾ ರಾಣಿ ಇತರರು ಇದ್ದರು.
ಸಿಪಿವೈಗೆ ಬೈ ಎಲೆಕ್ಷನ್ ಟಿಕೆಟ್ ಸಿಗುವುದಿಲ್ಲ:ಯೋಗೇಶ್ವರ್ ಬಿಜೆಪಿ ನಾಯಕನಾಗಿ ಚನ್ನಪಟ್ಟಣ ಉಪಚುನಾವಣೆ ಕುರಿತು ನಾವು ಕುಳಿತು ತೀರ್ಮಾನ ಮಾಡುತ್ತೇವೆ ಎಂದು ಹೇಳುತ್ತಿಲ್ಲ. ಬದಲಿಗೆ ನಮ್ಮ ನಾಯಕರಾದ ಕುಮಾರಸ್ವಾಮಿ ತೀರ್ಮಾನ ಕೈಗೊಳ್ಳುತ್ತಾರೆ ಎನ್ನುತ್ತಾರೆ. ನಮ್ಮ ಪ್ರಕಾರ ಅವರಿಗೆ ಟಿಕೆಟ್ ಸಿಗುವುದಿಲ್ಲ. ಯಾವ ಕಡೆ ಹೋಗಬೇಕು ಎಂದೇ ಅವರಿಗೆ ಗೊತ್ತಾಗುತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಕನಕಪುರ ಮಾಡೆಲ್ ಅಂದರೆ ಅಭಿವೃದ್ಧಿ. ಆದರೆ ಯೋಗೇಶ್ವರ್ ಈ ಕುರಿತು ಹಗುರವಾಗಿ ಮಾತನಾಡಿದ್ದಾರೆ. ಕಮಿಷನ್ ದಂಧೆ, ಗುತ್ತಿಗೆದಾರರಿಂದ ಹಣ ಕೇಳುವುದು ಇವರು ಮಾಡುವ ಚನ್ನಪಟ್ಟಣ ಮಾಡೆಲ್ ಆಗಿದೆ. ರಾಜಕೀಯದಲ್ಲಿ ಸೋಲು - ಗೆಲುವು ಸಹಜ, ಯಾವುದೂ ಶಾಶ್ವತವಲ್ಲ. ಎಲ್ಲ ಪ್ರಮುಖ ಮುಖಂಡರು ಸೋಲು ಅನುಭವಿಸಿದ್ದಾರೆ. ಸುರೇಶ್ ಅವರು ಒಂದು ಬಾರಿ ಸೋತ ಮಾತ್ರಕ್ಕೆ ಅವರಿಗೆ ಹಿನ್ನಡೆಯಾಗುವುದಿಲ್ಲ. ಅವರ ದೃತಿಗೆಡುವ ಅಗತ್ಯವಿಲ್ಲ ಎಂದರು.--------