ಮೂಡುಬಿದಿರೆಯಲ್ಲಿ ಶ್ರೀಕೃಷ್ಣನೇ ಒಡೆಯುವ ಮೊಸರ ಕುಡಿಕೆ!

| Published : Aug 27 2024, 01:42 AM IST

ಸಾರಾಂಶ

ನಾಡಿನಲ್ಲಿ ವಿಶೇಷವಾಗಿ ಕರಾವಳಿಯ ಭಾಗದಲ್ಲಿ ಶತಮಾನದ ಇತಿಹಾಸದೊಂದಿಗೆ ಯಕ್ಷಗಾನೀಯ ಹಿಮ್ಮೇಳದೊಂದಿಗೆ ಶ್ರೀ ಕೃಷ್ಣನೇ ಚಕ್ರಾಯುಧದಿಂದ ರಾಜಬೀದಿಯಲ್ಲಿ ತೂಗುವ ನೂರಾರು ಮೊಸರ ಕುಡಿಕೆಗಳನ್ನು ಅದನ್ನು ಕುಣಿಸುವವರ ಸವಾಲುಗಳನ್ನೆದುರಿಸಿ ಮಿಂಚಿನ ವೇಗದಲ್ಲಿ ಹೊಡೆದುರುಳಿಸುವ ಮನಮೋಹಕ ದೃಶ್ಯಗಳಿದ್ದರೆ ಅದನ್ನು ಕಣ್ತುಂಬಿಕೊಳ್ಳಲು ಜೈನಕಾಶಿ, ಜ್ಞಾನಕಾಶಿ ಮೂಡುಬಿದಿರೆಗೇ ಬರಬೇಕು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮದಲ್ಲಿ ಆ.27ರಂದು ನಾಡಿನೆಲ್ಲೆಡೆ ಮೊಸರು ಕುಡಿಕೆ ಉತ್ಸವ ರಂಗೇರಲಿದೆ. ಮಾನವ ಗೋಪುರ ಕಟ್ಟಿಕೊಂಡು ಎತ್ತರದಲ್ಲಿ ತೂಗು ಹಾಕಿದ ಮೊಸರ ಕುಡಿಕೆ, ಹಣ್ಣು ಹಂಪಲು, ಬಹುಮಾನಗಳನ್ನು ಬಾಚುವ ಉತ್ಸಾಹ, ಬೀದಿಯಲ್ಲಿ ರಂಗಿನಾಟದ ಸಂಭ್ರಮ.

ಆದರೆ ನಾಡಿನಲ್ಲಿ ವಿಶೇಷವಾಗಿ ಕರಾವಳಿಯ ಭಾಗದಲ್ಲಿ ಶತಮಾನದ ಇತಿಹಾಸದೊಂದಿಗೆ ಯಕ್ಷಗಾನೀಯ ಹಿಮ್ಮೇಳದೊಂದಿಗೆ ಶ್ರೀ ಕೃಷ್ಣನೇ ಚಕ್ರಾಯುಧದಿಂದ ರಾಜಬೀದಿಯಲ್ಲಿ ತೂಗುವ ನೂರಾರು ಮೊಸರ ಕುಡಿಕೆಗಳನ್ನು ಅದನ್ನು ಕುಣಿಸುವವರ ಸವಾಲುಗಳನ್ನೆದುರಿಸಿ ಮಿಂಚಿನ ವೇಗದಲ್ಲಿ ಹೊಡೆದುರುಳಿಸುವ ಮನಮೋಹಕ ದೃಶ್ಯಗಳಿದ್ದರೆ ಅದನ್ನು ಕಣ್ತುಂಬಿಕೊಳ್ಳಲು ಜೈನಕಾಶಿ, ಜ್ಞಾನಕಾಶಿ ಮೂಡುಬಿದಿರೆಗೇ ಬರಬೇಕು.ಪೇಟೆಯ ಕಲ್ಸಂಕದ ಶ್ರೀ ಗೋಪಾಲಕೃಷ್ಣ ದೇವಸ್ಥಾನದಿಂದ ಸಂಜೆಯಾಗುತ್ತಿದ್ದಂತೆ ಯಶೋದಾ ಕೃಷ್ಣನ ಮೃಣ್ಮಯ ಮೂರ್ತಿಯ ಉತ್ಸವ ಸಹಿತ ಯಕ್ಷಗಾನೀಯ ಹಿಮ್ಮೇಳದೊಂದಿಗೆ ಸಾಗಿ ಬರುವ ಶ್ರೀ ಕೃಷ್ಣ ವೇಷಧಾರಿ, ಬೀದಿಗಳಿಗೆ ಅಡ್ಡಲಾಗಿ ಕಟ್ಟಿದ ಮೊಸರ ಕುಡಿಕೆಗಳನ್ನೆಲ್ಲ ತಾನೊಬ್ಬನೇ ಹೊಡೆದುರುಳಿಸಿ ಮುನ್ನಡೆಯುವ ಸೊಬಗಿನ ಉತ್ಸವಕ್ಕೆ ಈ ಬಾರಿ 108ರ ಸಂಭ್ರಮ!

* ನೂರೆಂಟರ ರಂಗಿನಲ್ಲಿ:

ವೇಣೂರು ಕೃಷ್ಣಯ್ಯ ಎಂಬವರು ಮಳೆಗಾಲದ ದಿನಗಳಲ್ಲಿ ಯಕ್ಷಗಾನ ಕಲಾವಿದರ ಕೂಟವನ್ನು ಕಟ್ಟಿಕೊಂಡು ಆರಂಭಿಸಿದ ಈ ಯಕ್ಷಗಾನೀಯ ಉತ್ಸವ ನಾಡಿಗೇ ಅಪರೂಪ. ಈ ಬಾರಿ ಪೇಟೆಯಲ್ಲಿ ಬರೋಬ್ಬರಿ 108 ಮಡಿಕೆಗಳನ್ನೇ ಕಟ್ಟಲಾಗುತ್ತದೆ. ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಭಾನುವಾರದಿಂದಲೇ ಧಾರ್ಮಿಕ, ಸಾಂಸ್ಕೃತಿಕ ಕಲಾಪ ಆರಂಭವಾಗಿದೆ. ಪೇಟೆಯಲ್ಲಿ ಜವನೆರ್ ಬೆದ್ರ ಬಳಗ ಕೃಷ್ಣೋತ್ಸವ ಹಮ್ಮಿಕೊಂಡಿದೆ. ಅಮರನಾಥ ಶೆಟ್ಟಿ ವೃತ್ತದ ಬಳಿ ಸಂಜೆ 4ರಿಂದ ಭಕ್ತಿ ಭಾವ ರಸಮಂಜರಿ, ಸಭಾ ಕಾರ್ಯಕ್ರಮ, ಉದ್ಯಮಿ ಕೆ. ಶಿವಾನಂದ ಪ್ರಭು ಅವರಿಗೆ ಸಮ್ಮಾನ, ಯಕ್ಷ ತೆಲಿಕೆ ಕಾರ್ಯಕ್ರಮವಿದೆ.

ಶ್ರೀ ವೆಂಕಟರಮಣ ದೇವಸ್ಥಾನದ ಬಳಿ ಸಂಜೆ 4ರಿಂದ ನ್ಯೂ ಸೆಂಟ್ರಲ್ ಫ್ರೆಂಡ್ಸ್ ಸರ್ಕಲ್ ವತಿಯಿಂದ ರಸಮಂಜರಿ ಕಲಾಪವಿದೆ. ಶ್ರೀ ಕೃಷ್ಣ ಪ್ರಶಸ್ತಿ ಪ್ರದಾನ: ಪೇಟೆಯ ಶ್ರೀ ಕೃಷ್ಣ ಕಟ್ಟೆಯ ಬಳಿ ಶ್ರೀ ಕೃಷ್ಣ ಫ್ರೆಂಡ್ಸ್ ಸರ್ಕಲ್ ಅವರ 38 ನೇ ವರ್ಷದ ಸಾಂಸ್ಕೃತಿಕ ಕಲಾಪಗಳು ಮಧ್ಯಾಹ್ನ 2.45ರಿಂದ ನಡೆಯಲಿವೆ. ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕ ಉಮಾನಾಥ ಕೋಟ್ಯಾನ್, ಡಾ. ಎಂ.ಮೋಹನ ಆಳ್ವ ಸಹಿತ ಗಣ್ಯರ ಉಪಸ್ಥಿತಿಯಲ್ಲಿ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಅವರಿಗೆ ಶ್ರೀಕೃಷ್ಣ ಪ್ರಶಸ್ತಿ ಪ್ರದಾನ, ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ, ಗೌರವಾರ್ಪಣೆ ನಡೆಯಲಿದೆ................

ವಾಹನ ಸಂಚಾರ ಬದಲಿ ವ್ಯವಸ್ಥೆಪೇಟೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ಮೊಸರು ಕುಡಿಕೆ ಉತ್ಸವದ ಅಂಗವಾಗಿ ಮಂಗಳವಾರ ಪೇಟೆಯಲ್ಲಿನ ವಾಹನ ಸಂಚಾರದ ಬಗ್ಗೆ ಕೆಲವೊಂದು ಬದಲಾವಣೆ ಮಾಡಲಾಗಿದೆ. ವಾಹನಗಳು ಮಧ್ಯಾಹ್ನ 1 ಗಂಟೆಯ ನಂತರ ಮೂಡುಬಿದಿರೆ ನಗರಕ್ಕೆ ಬಾರದೇ ಮೆರವಣಿಗೆ ಮುಗಿಯುವ ತನಕ ಬೈಪಾಸ್ ರಸ್ತೆಯಲ್ಲಿ ಸಂಚರಿಸಿ ಸಹಕರಿಸಬೇಕಾಗಿ ಪೊಲೀಸ್ ನಿರೀಕ್ಷಕರ ಪ್ರಕಟಣೆ ತಿಳಿಸಿದೆ.